Advertisement

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

09:46 PM May 23, 2024 | Team Udayavani |

ಚೆನ್ನೈ: ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡ, ಶುಕ್ರವಾರ ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ಇಲ್ಲಿ ಗೆಲ್ಲುವ ತಂಡ ಭಾನುವಾರ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ.

Advertisement

ಐಪಿಎಲ್‌ನ ಶ್ರೇಷ್ಠ ಪವರ್‌ಹಿಟ್ಟರ್‌ಗಳಾದ ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್‌ ಶರ್ಮ ಅವರು ಈ ಬಾರಿ ಅವಳಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌ ಮತ್ತು ಅಶ್ವಿ‌ನ್‌ ದಾಳಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಟ್ರ್ಯಾವಿಶೇಕ್‌ ಎಂದೇ ಖ್ಯಾತರಾಗಿರುವ ಹೆಡ್‌-ಅಭಿಷೇಕ್‌ ಜೋಡಿ ಈ ಐಪಿಎಲ್‌ನಲ್ಲಿ ರನ್ನುಗಳ ಸುರಿಮಳೆಗರೆದಿದ್ದಾರೆ. ಮಹತ್ವದ ಈ ಪಂದ್ಯದಲ್ಲಿಯೂ ಅವರಿಬ್ಬರು ತಂಡಕ್ಕೆ ಪ್ರಚಂಡ ಆರಂಭ ಒದಗಿಸುವ ಸಾಧ್ಯತೆಯಿದೆ.

ಪವರ್‌ ಪ್ಲೇಯಲ್ಲಿ ಸ್ಫೋಟಕವಾಗಿ ಆಡಿರುವ ಹೆಡ್‌ ಇಷ್ಟರವರೆಗಿನ ಪಂದ್ಯಗಳಲ್ಲಿ 533 ರನ್‌ ಪೇರಿಸಿದ್ದರೆ, ಅಭಿಷೇಕ್‌ 470 ರನ್‌ ಗಳಿಸಿದ್ದಾರೆ. ಅವರಿಬ್ಬರು 96 ಬೌಂಡರಿ ಮತ್ತು 72 ಸಿಕ್ಸರ್‌ ಸಿಡಿಸಿ ತಮ್ಮ ಶಕ್ತಿ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರಿಬ್ಬರಲ್ಲದೇ ಇನ್ನೋರ್ವ ಸ್ಫೋಟಕ ಆಟಗಾರ ಹೆನ್ರಿಚ್‌ ಕ್ಲಾಸೆನ್‌ 34 ಸಿಕ್ಸರ್‌ ಸಹಿತ 413 ರನ್‌ ಪೇರಿಸಿ ಗಮನ ಸೆಳೆದಿದ್ದಾರೆ. ಹೈದ್ರಾಬಾದ್‌ನ ರನ್‌ ಪ್ರವಾಹಕ್ಕೆ ಸ್ಥಳೀಯ ಹೀರೋ ಆರ್‌.ಅಶ್ವಿ‌ನ್‌ ಹೇಗೆ ಕಡಿವಾಣ ಹಾಕುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಗೆಲುವಿಗಾಗಿ ಪ್ರಯತ್ನ:  ಸತತ ಐದು ಪಂದ್ಯಗಳಲ್ಲಿ  ಸೋತ ಬಳಿಕ ಆರ್‌ಸಿಬಿ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ರಾಜಸ್ಥಾನ್‌ ರಾಯಲ್ಸ್‌ ಜಯಭೇರಿ ಬಾರಿಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಪಡೆಯಿತು. ಬ್ಯಾಟಿಂಗ್‌ನಲ್ಲಿ ತಂಡದ ಅಗ್ರ ಕ್ರಮಾಂಕದ ಆಟಗಾರರಾದ ಯಶಸ್ವಿ ಜೈಸ್ವಾಲ್‌, ರಿಯಾನ್‌ ಪರಾಗ್‌ ಉತ್ತಮವಾಗಿ ಆಡಿದ್ದರಿಂದ ತಂಡ ಮೇಲುಗೈ ಸಾಧಿಸಿತು. ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿರುವ ಜೈಸ್ವಾಲ್‌ ಶುಕ್ರವಾರವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ವಿಶ್ವಾಸವಿದೆ. ಜೈಸ್ವಾಲ್‌ ಅವರಲ್ಲದೇ ನಾಯಕ ಸಂಜು ಸ್ಯಾಮ್ಸನ್‌, ಶಿಮ್ರಾನ್‌ ಹೆಟ್‌ಮೈರ್‌, ರಿಯಾನ್‌ ಪರಾಗ್‌ ಮಿಂಚಿದರೆ ರಾಜಸ್ಥಾನ್‌ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.

ಹೈದ್ರಾಬಾದ್‌-ರಾಜಸ್ಥಾನ್‌ ಮುಖಾಮುಖಿ

Advertisement

ಒಟ್ಟು ಪಂದ್ಯ: 19

ಹೈದ್ರಾಬಾದ್‌ ಜಯ: 10

ರಾಜಸ್ಥಾನ್‌ ಜಯ: 9

ಸಂಭಾವ್ಯ ತಂಡಗಳು

ಹೈದ್ರಾಬಾದ್‌: ಹೆಡ್‌, ಅಭಿಷೇಕ್‌, ರಾಹುಲ್‌, ನಿತೀಶ್‌, ಕ್ಲಾಸೆನ್‌, ಸಮದ್‌, ಶಹಬಾಜ್‌, ಕಮಿನ್ಸ್‌, ಭುವನೇಶ್ವರ್‌, ವಿಜಯಕಾಂತ್‌, ನಟರಾಜನ್‌.

ರಾಜಸ್ಥಾನ್‌: ಜೈಸ್ವಾಲ್‌, ಕೊಹ್ಲರ್‌, ಸ್ಯಾಮ್ಸನ್‌, ಪರಾಗ್‌, ಜುರೆಲ್‌, ಹೆಟ್‌ಮೈರ್‌, ಪೊವೆಲ್‌, ಅಶ್ವಿ‌ನ್‌, ಬೌಲ್ಟ್, ಆವೇಶ್‌, ಚಹಲ್‌.

ಸ್ಥಳ: ಎಂ.ಎ.ಚಿದಂಬರಂ ಮೈದಾನ, ಚೆನ್ನೈ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ (ಟೀವಿ), ಜಿಯೋ ಸಿನಿಮಾ (ಆ್ಯಪ್‌)

ಅಂಕಣಗುಟ್ಟು:

ಚೆನ್ನೈಯ ಎಂ.ಎ.ಚಿದಂಬರಂ ಮೈದಾನದಲ್ಲಿ ನಿಧಾನಗತಿಯ ಪಿಚ್‌ ಇದೆ. ಸ್ಪಿನ್‌ಗೆ ನೆರವಾದರೂ, ಈ ಮೈದಾನ ಹೈ ಸ್ಕೋರಿಂಗ್‌ ಪಂದ್ಯಕ್ಕೂ ಸಾಕ್ಷಿಯಾಗಿದ್ದಿದೆ. ಇದೇ ಋತುವಿನಲ್ಲಿ ಏ.23ರ ಚೆನ್ನೈ-ಲಕ್ನೋ ಪಂದ್ಯದಲ್ಲಿ ಆತಿಥೇಯ ಚೆನ್ನೈ 210 ರನ್‌ ಬಾರಿಸಿದ್ದರೆ, ಲಕ್ನೋ 19.3 ಓವನ್‌ನಲ್ಲೇ ಗುರಿ ತಲುಪಿತ್ತು. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ ಸರಾಸರಿ ಸ್ಕೋರ್‌ 164. ಟಾಸ್‌ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next