ದುಬೈ: ಐಪಿಎಲ್ ನ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಾದಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 202 ರನ್ ಗೆಲುವಿನ ಗುರಿ ನೀಡಿದೆ.
ಇಂತಹದೊಂದು ಬೃಹತ್ ಆಟದಲ್ಲಿ ಹೈದರಾಬಾದ್ ಆರಂಭಿಕ ಜಾನಿ ಬೇರ್‌ಸ್ಟೊ, ನಾಯಕ ಡೇವಿಡ್ ವಾರ್ನರ್ ಪಾತ್ರ ಮಹತ್ವದ್ದು. ಅವರು ಮೊದಲ ವಿಕೆಟ್‌ಗೆ 160 ರನ್ ಜೊತೆಯಾಟವಾಡಿದರು. ಆ ಹಂತದಲ್ಲಿ ಅವರಿಬ್ಬರ ಅಬ್ಬರ ನೋಡಿದಾಗ ಹೈದರಾಬಾದ್ ಕನಿಷ್ಠ 230 ರನ್ ಗಳಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ 160 ರನ್‌ಗೆ ಮೊದಲನೆಯವರಾಗಿ ವಾರ್ನರ್ ಔಟಾದರು. ಅಲ್ಲಿಂದ ಪಟಪಟನೆ ಕುಸಿದ ಅದು ಕೇವಲ 201 ರನ್‌ಗಳಿಗೆ ಸೀಮಿತವಾಯಿತು.
ಹೈದರಾಬಾದ್ ಪರ ಜಾನಿ ಬೇರ್‌ಸ್ಟೊ ಅದ್ಭುತ ಆಟವಾಡಿದರು. ಅವರು 55 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 97 ರನ್ ಚಚ್ಚಿದರು. 3 ರನ್‌ಗಳಿಂದ ಶತಕ ತಪ್ಪಿಸಿಕೊಂಡು ನಿರಾಶೆಗೊಳಗಾದರು. ಮತ್ತೂಂದು ಕಡೆ ನಾಯಕ ವಾರ್ನರ್ ಇವರಿಗೆ ನೆರವು ನೀಡುತ್ತ ಹೋದರು. ಅವರು 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಮೇತ 52 ರನ್ ಗಳಿಸಿದರು. ಇವರ ನಂತರ ಯಾವುದೇ ಆಟಗಾರ ಈ ಮಟ್ಟಕ್ಕೆ ಸಿಡಿಯಲಿಲ್ಲ.
ತಿರುಗಿಬಿದ್ದ ಪಂಜಾಬ್ ಬೌಲರ್‌ಗಳು: 16ನೇ ಓವರ್ ಮೊದಲನೆ ಎಸೆತದಲ್ಲಿ ವಾರ್ನರ್ ವಿಕೆಟ್ ಕಿತ್ತ ಪಂಜಾಬ್ ಬೌಲರ್‌ಗಳು ಅನಂತರ ಹಿಂತಿರುಗಿ ನೋಡಲಿಲ್ಲ. ಬೆನ್ನಲ್ಲೇ ಬೇರ್‌ಸ್ಟೊರನ್ನು ಹೊರದಬ್ಬಿದರು. ಅದರ ಬೆನ್ನಲ್ಲೇ ಮನೀಷ್ ಪಾಂಡೆ ಔಟಾದರು. ಅಂದರೆ ಕೇವಲ 1 ರನ್ ಅಂತರದಲ್ಲಿ ಮೂರು ವಿಕೆಟ್ ಪತನ. ಇಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದು ಸ್ಪಿನ್ನರ್ ರವಿ ಬಿಶ್ನೋಯಿ. ಅವರು 29 ರನ್ ನೀಡಿ 3 ವಿಕೆಟ್ ಪಡೆದರು. ಕಡೆಯಲ್ಲಿ ಇವರಿಗೆ ಅಷ್ಟೇ ಸೂಕ್ತ ಬೆಂಬಲ ನೀಡಿದ ವೇಗಿ ಅರ್ಶದೀಪ್ ಸಿಂಗ್ 33 ರನ್ ನೀಡಿ 2 ವಿಕೆಟ್ ಪಡೆದರು. ಶಮಿಗೆ 1 ವಿಕೆಟ್ ಸಿಕ್ಕಿತು.