ಚಿತ್ರದುರ್ಗ: ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿರುವ ಅಬಕಾರಿ ಉಪ ಆಯುಕ್ತ ನಾಗಶಯನ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ತನಿಖೆಗೆ ಒಳಪಡಿಸಬೇಕು. ಎಸಿಬಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಸದಸ್ಯರು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಬಾಬು ರೆಡ್ಡಿ, ಮದ್ಯ ಮಾರಾಟಗಾರರಿಂದ ವಸೂಲಿ ಮಾಡಿದ ಲಂಚದಲ್ಲಿ ನಾಗಶಯನ ಸಾಕಷ್ಟು ಆಸ್ತಿ ಸಂಪಾದಿಸಿದ್ದಾರೆ. ಈ ಸಂಬಂಧ ನಮ್ಮ ಸಂಘದ ಬಳಿ ದಾಖಲೆಗಳಿವೆ. ಇದರ ಬಗ್ಗೆ ಎಸಿಬಿ ಬೆಳಕು ಚೆಲ್ಲಬೇಕು ಎಂದರು.
ಪ್ರತಿ ಮದ್ಯದ ಅಂಗಡಿಯಿಂದ ಮಾಸಿಕ ಲಂಚಕ್ಕಾಗಿ ಪೀಡಿಸಲಾಗುತ್ತಿದೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿ ಜೊತೆಗೆ ಹಲವು ಬಾರಿ ಚರ್ಚೆ ನಡೆಸಿದ್ದೇವೆ. ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಮಣಿಯದಿದ್ದಾಗ ಎಸಿಬಿಗೆ ದೂರು ನೀಡಬೇಕಾಯಿತು ಎಂದು ವಿವರಿಸಿದರು. ನಾಗಶಯನ ಅಬಕಾರಿ ಇಲಾಖೆಗೆ ಸೇರಿದಾಗಿನಿಂದ ಸಮಸ್ಯೆ ಸೃಷ್ಟಿಯಾಗಿದೆ. ಅವರು ಕರ್ತವ್ಯ ನಿರ್ವಹಿಸಿದ ಎಲ್ಲ ಸ್ಥಳಗಳಲ್ಲೂ ಇಂತಹ ಆರೋಪಗಳು ಕೇಳಿ ಬಂದಿವೆ. 2017ರಲ್ಲಿ ಮೊದಲ ಬಾರಿ ಜಿಲ್ಲೆಗೆ ನಿಯೋಜನೆಗೊಂಡಾಗ ಅಧಿಕಾರಿಯ ನೈಜ ಸ್ವರೂಪ ಗೊತ್ತಾಯಿತು. 2020ರಲ್ಲಿ ಮತ್ತೆ ಜಿಲ್ಲೆಗೆ ಮರಳಿದಾಗ ಸಮಸ್ಯೆ ಬಿಗಡಾಯಿಸಿದೆ ಎಂದು ದೂರಿದರು.
ಮದ್ಯ ಮಾರಾಟಕ್ಕೆ ಸರ್ಕಾರದಿಂದ ಅನುಮತಿ ಪಡೆದಿರುತ್ತೇವೆ. ಇದು ಕೆಟ್ಟ ದಂಧೆಯಲ್ಲ, ಇದೊಂದು ಉದ್ಯಮ. ಆದರೂ ಸಮಾಜ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದೆ. ಮದ್ಯ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಿದರೆ ನಮ್ಮ ತಕರಾರಿಲ್ಲ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಮದ್ಯ ಮಾರಾಟ ವ್ಯವಸ್ಥೆ ಪಾರದರ್ಶಕವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ, ರಾಜ್ಯದ ಹಲವೆಡೆ ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡಲಾಗುತ್ತಿದೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಅಂಥಹ ಭ್ರಷ್ಟರ ವಿರುದ್ಧ ಇದೇ ಮಾದರಿಯಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಎಲ್ಲ ಕಾಲದಲ್ಲೂ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದುಕೊಂಡು ಬಂದಿದೆ. ಕೆಲ ಅಧಿಕಾರಿಗಳು ಮಿತಿ ಮೀರಿ ವಸೂಲಿ ಮಾಡುತ್ತಿದ್ದಾರೆ. ನಮಗೆ ಸರ್ಕಾರ ನಿಗದಿ ಮಾಡಿರುವ ಶೇ. 10ರಷ್ಟು ಕಮೀಷನ್‌ನಲ್ಲಿ ತೆರಿಗೆ ತೆಗೆದು ಶೇ. 7 ರಷ್ಟು ಮಾತ್ರ ಉಳಿಯುತ್ತದೆ. ಕಟ್ಟಡದ ಬಾಡಿಗೆ, ಸಿಬ್ಬಂದಿಗಳ ವೇತನ ಮತ್ತಿತರೆ ಖರ್ಚುಗಳನ್ನು ತೆಗೆದರೆ ಲಂಚವನ್ನು ಎಲ್ಲಿಂದ ನೀಡಬೇಕು ಎಂದು ಪ್ರಶ್ನಿಸಿದರು.
ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಗೋವಿಂದರಾಜ ಹೆಗಡೆ ಮಾತನಾಡಿ, ಅಬಕಾರಿ ಕಾಯ್ದೆಗಳನ್ನು ಅಧಿಕಾರಿಗಳು ತಮ್ಮಿಷ್ಟದಂತೆ ಬಳಕೆ ಮಾಡುತ್ತಿದ್ದಾರೆ. ಅಬಕಾರಿ ಕಾಯ್ದೆ ಸಂಪೂರ್ಣ ದುರುಪಯೋಗವಾಗುತ್ತಿದೆ. ಇಂತಹ ನೀತಿಗಳನ್ನು ಸರ್ಕಾರ ಸರಳೀಕರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಇದ್ದರು.