Advertisement
ಅಂದಹಾಗೆ, ಇಂತಹ ಕ್ಯಾಲೆಂಡರನ್ನು ಬೆಂಗಳೂರಿನಲ್ಲಿ ನಿರ್ಮಿಸಿದ ಕೀರ್ತಿ ಮಂಗಳೂರಿನ ತರುಣಿ ಪ್ರೀತಿ ರೈ ಅವರಿಗೆ ಸಲ್ಲುತ್ತದೆ. ಮುದ್ರಿತ ಕ್ಯಾಲೆಂಡರ್ ಮೂಲಕ, ಅಂತರ್ಜಾಲದ ಎಲ್ಲ ಮಾಧ್ಯಮಗಳ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಈ ಕ್ಯಾಲೆಂಡರನ್ನು ವೀಕ್ಷಿಸಿದ್ದಾರೆ. ಅನೇಕಾನೇಕ ಸೆಲೆಬ್ರಿಟಿಗಳು ಕೂಡಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟ್ವೀಟ್‌ಗಳ ಮೂಲಕ ಅಭಿನಂದಿಸಿದ್ದಾರೆ. ಮಾ. 8ರಂದು ಜಗತ್ತಿನಾದ್ಯಂತ ಮಹಿಳಾ ದಿನಾಚರಣೆ. ಈ ರೈಸಿಂಗ್ ಎಬವ್ (ಸಾಧನೆಯ ಉತ್ತುಂಗದತ್ತ) ಬಹುತೇಕ ಮಹಿಳಾ ಸಶಕ್ತೀಕರಣಕ್ಕೆ ಅತ್ಯಂತ ಅಮೂಲ್ಯವಾದ ಕೊಡುಗೆಯೂ ಹೌದು.
ಈ ಕ್ಯಾಲೆಂಡರ್‌ನಲ್ಲಿ 12 ತಿಂಗಳ ಚಿತ್ರಿಕೆಗಳಲ್ಲಿ ಒಟ್ಟು 13 ಮಂದಿ ರೂಪದರ್ಶಿಗಳಿದ್ದಾರೆ. (ಎಪ್ರಿಲ್‌ನಲ್ಲಿ ಒಂದು ಜೋಡಿ ಇದೆ). ಈ ರೂಪದರ್ಶಿಗಳಲ್ಲಿ ದೇಶದ ಮ್ಯಾರಥಾನ್ ಸಹಿತ ಕ್ರೀಡಾಪಟುಗಳಿದ್ದಾರೆ, ಈಜುಪಟುಗಳಿದ್ದಾರೆ, ಒಲಿಂಪಿಯನ್‌ಗಳಿದ್ದಾರೆ, ರೋಮಾಂಚನಗೊಳಿಸುವ ನೃತ್ಯಪಟುಗಳಿದ್ದಾರೆ, ಚಿತ್ರ ಕಲಾವಿದರಿದ್ದಾರೆ. ಆದರೆ ; ಅವರೆಲ್ಲರೂ ಬದುಕಿನಲ್ಲಿ ಅನಿರೀಕ್ಷಿತ ಆಘಾತಗಳಿಗೆ ಒಳಗಾದವರು. ಕಿರಿ ವಯಸ್ಸಲ್ಲೇ – ಇನ್ನೇನು ಬದುಕು ಮುಗಿದೇ ಹೋಯಿತು ಎಂಬ ಹಂತ ತಲುಪಿದ್ದವರು. ಆದರೆ, ಅವರೀಗ ತಮ್ಮ ಛಲ, ಆತ್ಮವಿಶ್ವಾಸದಿಂದ ಮತ್ತೆ ಬದುಕು ಕಟ್ಟಿಕೊಂಡವರು. ದೇಶಾದ್ಯಂತ ಈ ಸಾಧನೆಯ ಅನೇಕರಿದ್ದಾರೆ. ಅವರೆಲ್ಲರ ಪ್ರಾತಿನಿಧಿಕವಾಗಿ ಈ ಹದಿಮೂರು ಮಂದಿಯನ್ನು ರೂಪದರ್ಶಿಗಳನ್ನಾಗಿ ಆಯ್ಕೆ ಮಾಡಿಕೊಂಡು ಈ ಕ್ಯಾಲೆಂಡರ್ ರೂಪುಗೊಂಡಿದೆ. ಇದು ನಿಜ ಅರ್ಥದ ಬಾಳಬೆಳಕಿನಂತಿದೆ.
ಜನವರಿ- ಕಿರಣ್ ಕನೋಜಿಯ (ಭಾರತದ ಪ್ರಥಮ ಮಹಿಳಾ ಬ್ಲೇಡ್ ರನ್ನರ್, ಐಟಿ ವೃತ್ತಿಪರರು).
Related Articles
ಫೆಬ್ರವರಿ- ಶೆರಿಲ್ ರೆಬೆಕ್ಕಾ (ರೂಪದರ್ಶಿ, ಬೊಟಾನಿಸ್ಟ್)
ಮಾರ್ಚ್- ಧವಲ್ ಖತ್ರಿ (ಆರ್ಟಿಸ್ಟ್)
Advertisement
ಎಪ್ರಿಲ್- ಬ್ರಿಜು ಮೋಹನ್ ಮತ್ತು ಅಂತಾರಾ ತೇಲಂಗ್ (ಡ್ಯಾನ್ಸರ್ ಮತ್ತು ಐಟಿ ವೃತ್ತಿ ಪರರು; ಬ್ರಿಜುಗೆ ಕೈಗಳಿಲ್ಲ. ಗೆಳತಿ ಅಂತಾರಾಗೆ ಎಡಗಾಲಿಲ್ಲ)
ಮೇ- ವಿಶ್ವಾಸ್ ಕೆ. ಎಸ್. (ಪ್ಯಾರಾ ಈಜುಪಟು, ಎರಡು ಕೈಗಳಿಲ್ಲ)
ಜೂನ್- ವಿನೋದ್ ರಾವತ್ (ಬೈಕರ್, ಆ್ಯಕ್ಟರ್, ಮ್ಯಾರಥಾನ್ ರನ್ನರ್, ಎಡಕಾಲಿಲ್ಲ)
ಜುಲೈ- ಅರೆಲ ರಾಮಚಂದ್ರ ರಾವ್ (ಬಾಸ್ಕೆಟ್‌ಬಾಲ್ ಆಟಗಾರ, ಬಹುತೇಕ ಅಂಗವಿಚ್ಚೇದಿತ)
ಆಗಸ್ಟ್- ಸುಯಶ್ ಜಾಧವ್, ರಿಯೋ ಪ್ಯಾರಾ ಒಲಿಂಪಿಕ್ ಈಜುಪಟು, ಎರಡು ಕೈಗಳಿಲ್ಲ)
ಸೆಪ್ಟೆಂಬರ್- ಮಾನಸಿ ಜೋಷಿ. (ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದಲ್ಲಿ 3ನೇ ಶ್ರೇಯಾಂಕ; ಬಲ ಕಾಲಿಲ್ಲ, ಕೈಬಲವಿಹೀನ)
ಅಕ್ಟೋಬರ್- ಮರಿಯಪ್ಪನ್ ತಂಗವೇಲು (ಹೈಜಂಪ್‌ನಲ್ಲಿ ರಿಯೋ ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತರು, ಕಾಲು ಶಕ್ತಿ ವಿಹೀನ)
ನವೆಂಬರ್- ಸ್ಯಾಮ್ಯುವೆಲ್ ಟಿ. (ಹಾಕಿ ಆಟಗಾರ; ಕೈಗಳು ಸ್ವಾಧೀನ ರಹಿತ)
ಡಿಸೆಂಬರ್- ಶಾಲಿನಿ ಸಾರಸ್ವತ್ (ಬ್ಲೇಡ್ ರನ್ನರ್, ಡ್ಯಾನ್ಸರ್, ಬಿಪಿಒ ವೃತ್ತಿಪರರು; ಎರಡೂ ಕೈ, ಎರಡೂ ಕಾಲುಗಳಿಲ್ಲ) ಪತ್ನಿಯ ಸಾಧನೆಗೆ ಪತಿಯ ಬದ್ಧತೆ
ಶಾಲಿನಿ ಸರಸ್ವತಿ ಮತ್ತು ಅವರ ಪತಿ ಪ್ರಶಾಂತ್ ಈ ‘ಉತ್ತುಂಗದೆಡೆಗೆ’ ಪರಿಕಲ್ಪನೆಯ ಆದರ್ಶಯುತ ಜೋಡಿ. ಶಾಲಿನಿ ಅವರು ವಿಚಿತ್ರವಾದ ಅನಾರೋಗ್ಯಕ್ಕೆ ತುತ್ತಾದರು. ಈ ಅನಾರೋಗ್ಯ ಅವರ ಎರಡೂ ಕೈಗಳನ್ನು ಮಾತ್ರವಲ್ಲ ಕಾಲುಗಳನ್ನು ಛೇದನಗೊಳ್ಳುವಂತೆ ಮಾಡಿತು. ಆದರೆ, ಪತಿ ನಿಜ ಅರ್ಥದ ಆಸರೆಯಾದರು. ಪತ್ನಿಯನ್ನು ಮಗುವಿನಂತೆ ನೋಡಿಕೊಂಡರು. ಶಾಲಿನಿ ಅವರು ಬ್ಲೇಡ್ ರನ್ನರ್ ಆದರು. ಅತ್ಯಾಕರ್ಷಕ ಡ್ಯಾನ್ಸರ್ ಆದರು. ಪತಿಯ ಆರೈಕೆ – ಪ್ರೋತ್ಸಾಹದಲ್ಲಿ ಆಕೆ ಉತ್ಸಾಹದ ಚಿಲುಮೆಯಾಗಿದ್ದಾರೆ. ಮಿಶನ್ ಸ್ಮೈಲ್ ಪ್ರೀತಿಗೆ ಬಂದ ಸ್ಫೂರ್ತಿ
ಪ್ರೀತಿ ರೈ ಅವರು ಮಂಗಳೂರಿನಲ್ಲಿ ಉದ್ಯೋಗ ಬಳಿಕ ಸ್ವಂತ ಉದ್ಯಮ ನಿರ್ವಹಣೆ ನಡೆಸುತ್ತಿದ್ದವರು. ಬಳಿಕ ಬೆಂಗಳೂರಿಗೆ ಬಂದರು. ಅನೇಕ ಸಮಸ್ಯೆಗಳನ್ನು ಎದುರಿಸಿದವರು. ಆದರೆ, ಒಮ್ಮೆ ಅಪಘಾತಕ್ಕೆ ಈಡಾದರು. ಗಂಭೀರವಾಗಿ ಗಾಯಗೊಂಡವರು. ಆ ಸಂದರ್ಭದಲ್ಲಿ ಶುಶ್ರೂಷೆ ಪಡೆಯುತ್ತಿರುವಾಗ ಶಾಲಿನಿ ಸರಸ್ವತಿ ಎಂಬವರ ಬಗ್ಗೆ ಓದಿದರು. ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ಶಾಲಿನಿ ತನ್ನ ಪತಿಯ ಮೂಲಕ ಬದುಕು ಕಟ್ಟಿಕೊಂಡವರು. ಪೂರ್ಣ ಗುಣಮುಖರಾದ ಬಳಿಕ ಪ್ರೀತಿ ಅವರು ಶಾಲಿನಿ ಅವರನ್ನು ಭೇಟಿಯಾದರು. ಅಲ್ಲಿಂದ ಈ ಕ್ಯಾಲೆಂಡರ್‌ನ ಪರಿಕಲ್ಪನೆ ರೂಪುಗೊಂಡಿತು. ಲಾಸ್ಟ್ ಆ್ಯಕ್ಟ್ ಆಫ್ ಮಿಶನ್ ಸ್ಮೈಲ್ ಸಾಕಾರಗೊಂಡಿತು. ರೂಪದರ್ಶಿಗಳು ಸಹಕರಿಸಿದರು. ಕೆಮರಾಕ್ಕೆ ಪೋಸ್ ಮೊದಲ ಅನುಭವ!
ಈ ರೂಪದರ್ಶಿಗಳು ಅಪಘಾತ ಸಹಿತ ಬೇರೆ ಬೇರೆ ಕಾರಣಗಳಿಂದ ಅಂಗಚ್ಛೇದನಗೊಂಡವರು. ಆದರೆ, ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವವರು. ಪ್ರೀತಿ ರೈ ಅವರನ್ನು ರೂಪದರ್ಶಿಯನ್ನಾಗಿಸಿದರು. ಅವರಲ್ಲಿ ಬಹುತೇಕ ಮಂದಿ ಮೊದಲ ಬಾರಿಗೆ ಈ ಗ್ಲಾಮರಸ್ ಅನುಭವವನ್ನು ಪಡೆದರು! ಛಾಯಾಚಿತ್ರಗ್ರಾಹಕರು ಮತ್ತು ನಿರ್ಮಾಣ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದರು. ಅದರ ಫಲಶ್ರುತಿಯೇ ಈ ಕ್ಯಾಲೆಂಡರ್! – ಮನೋಹರ ಪ್ರಸಾದ್