Advertisement

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

02:45 PM Dec 27, 2024 | Team Udayavani |

ಮಹಾನಗರ: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಗ್ರಾಮೀಣ ಬದುಕನ್ನು ತೆರೆದಿಡುವ ವಿವಿಧ ಮಳಿಗೆಗಳು ಹಾಗೂ ಮೇಳಗಳು ಗಮನ ಸೆಳೆಯುತ್ತಿದೆ.

Advertisement

ಹಳೆ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನೋರಂಜನೆಯಾದರೆ ಮತ್ತೂಂದೆಡೆ ಗ್ರಾಮೀಣ ಬದುಕಿನೊಂದಿಗೆ ವಸ್ತುಗಳ ಪ್ರದರ್ಶನ ಬೆಸೆದುಕೊಂಡಿದೆ.

ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದ ಕೃಷಿ ಪರಿಕರಗಳು, ಏತ ನೀರಾವರಿಗೆ ಬಳಸುತ್ತಿದ್ದ ಸಲಕರಣೆಗಳು, ಮಜ್ಜಿಗೆ ಮಂತು, ಅಕ್ಕಿ ಮುಡಿ, ಕೊಡಂತಿ, ಭತ್ತ ಕುಟ್ಟುವ ಒನಕೆ, ನೊಗ, ಹಳೇ ಕಾಲದ ಸೇಮಿಗೆ ಮಣೆ, ಚೆನ್ನೆಮಣೆ, ಪೀಕದನಿ ಇತ್ಯಾದಿಗಳನ್ನು ಪ್ರದರ್ಶನದಲ್ಲಿದೆ.

ಸ್ಥಳದಲ್ಲೇ ಕತ್ತಿ, ಚೂರಿ ತಯಾರಿ!
ಕಾರ್ಕಳದ ಬೈಲೂರಿನ ದಾಮೋದರ ಆಚಾರ್ಯ ಅವರ ನೇತೃತ್ವದಲ್ಲಿ ಕಮ್ಮಾರಿಕೆ ನಡೆಸಲಾಗುತ್ತಿದ್ದು, ವಿವಿಧ ಪರಿಕರಗಳನ್ನು ತಯಾರಿಸುವ ವಿಧಾನ ಇಲ್ಲಿ ಗಮನಿಸಬಹುದು. ಅಲ್ಲದೆ, ಸ್ಥಳದಲ್ಲೇ ತಯಾರಿಸಿದ ಕತ್ತಿ, ಚೂರಿ ಹಾಗೂ ನಿತ್ಯ ಬಳಕೆಯಲ್ಲಿರುವ ಆಯುಧಗಳನ್ನು ಖರೀದಿಸಲು ಅವಕಾಶವಿದೆ. ಸಣ್ಣ ಚೂರಿಯಿಂದ ಹಿಡಿದು ದೊಡ್ಡ ಕತ್ತಿಯ ವರೆಗೆ ವಿವಿಧ ಪರಿಕರಗಳು ಮಾರಾಟಕ್ಕಿವೆ. ಇವುಗಳೊಂದಿಗೆ ಹಾರೆ, ಪಿಕ್ಕಾಸು ಇತ್ಯಾದಿಗಳು ಲಭ್ಯವಿದೆ. ಉತ್ಸವದ ವೇದಿಕೆಯ ಬಳಿಯಲ್ಲೇ ಕಮ್ಮಾರರು ಪರಿಕರಗಳನ್ನು ತಯಾರಿಸುತ್ತಿದ್ದಾರೆ. ಇದರ ಪಕ್ಕದಲ್ಲೇ ಕುಂಬಾರರ ಮಡಿಕೆಗಳು ಮಾರಾಟಕ್ಕಿಡಲಾಗಿದೆ. ದಾಮೋದರ ಆಚಾರ್ಯರ ಇಡೀ ಕುಟುಂಬವೇ ಇಲ್ಲಿಗೆ ಆಗಮಿಸಿ ಇಲ್ಲೇ ವಾಸ್ತವ್ಯ ಹೂಡಿದೆ.

ಇಲಾಖಾ ಮಳಿಗೆಗಳ ಆಕರ್ಷಣೆ: ಸಾಕು ಪ್ರಾಣಿಗಳ ಬದುಕಿನ ವಿವರಣೆ
ಕರಾವಳಿ ಉತ್ಸವ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯ ಮಳಿಗೆ ಇದ್ದು ಜೇನು, ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತಿದೆ. ಪಶು ವೈದ್ಯಕೀಯ ಇಲಾಖೆಯ ಮಳಿಗೆಯಲ್ಲಿ ವಿವಿಧ ಸಾಕು ಪ್ರಾಣಿಗಳ ಭ್ರೂಣಗಳನ್ನು ಸಂಗ್ರಹಿಸಿಟ್ಟು ವಿವರಿಸಲಾಗುತ್ತದೆ. ಅರಣ್ಯ ಇಲಾಖೆಯಿಂದ ಪ್ರತ್ಯೇಕವಾಗಿ ಕಾಡಿನ ನೈಜ ಅನುಭವವನ್ನು ನೀಡುವ ಪ್ರಾತ್ಯಕ್ಷಿಕೆ ಸಿದ್ಧವಾಗಿದ್ದು, ಕಾಡಿನೊಳಗೆ ತೆರಳಿದ ಅನುಭವ ಸಿಗುತ್ತದೆ ಎಂದು ಪ್ರವಾಸಿಗರೊಬ್ಬರು ಅನುಭವ ಹಂಚಿಕೊಂಡಿದ್ದಾರೆ.

Advertisement

ಇನ್ನಷ್ಟು ನಿರೀಕ್ಷೆ
ಕರಾವಳಿ ಉತ್ಸವದತ್ತ ಸಾರ್ವ ಜನಿಕರು ಆಗಮಿಸುತ್ತಿದ್ದಾರೆ. ಮಂದಗತಿಯಲ್ಲಿ ವ್ಯಾಪಾರ ಆರಂಭವಾಗಿ ದಿನೇ ದಿನೇ ಅಲ್ಪ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯಾಪಾರದ ನಿರೀಕ್ಷೆ ಇದೆ.
– ಸತ್ಯಪ್ರಸಾದ್‌, ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next