Advertisement

ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ

10:15 AM Nov 07, 2022 | Team Udayavani |

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ 23.25 ಎಕರೆ ಸರಕಾರಿ ಜಮೀನು ಮಂಜೂರು ಮಾಡಲಾಗಿದೆ.

Advertisement

ಪುತ್ತೂರು ನಗರ ಕೇಂದ್ರದಿಂದ ಕೇವಲ ಐದು ಕಿ.ಮೀ. ಅಂತರದಲ್ಲಿ ಜಮೀನು ಗುರುತಿಸಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ)ಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಮ್ಮತಿ ಸಿಕ್ಕಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗಲಿದೆ.

ಎಲ್ಲಿದೆ ಜಾಗ?

ಪುತ್ತೂರು ನಗರ ಸಮೀಪದ, ನಗರಸಭಾ ವ್ಯಾಪ್ತಿಯಲ್ಲಿ ಬರುವ, ಕಬಕ ಗ್ರಾಮದ ಸರ್ವೇ ನಂಬರ್‌ 260/1ಪಿ1ರಲ್ಲಿ 23.25 ಎಕ್ರೆ ಸರಕಾರಿ ಜಮೀನನ್ನು ಗುರುತಿಸಲಾಗಿದೆ. ಇದು ಪೆರಿಯತ್ತೋಡಿ ಸಮೀಪದಲ್ಲಿದ್ದು ಪುತ್ತೂರು-ಮಂಗಳೂರು ಹೆದ್ದಾರಿ ಯಿಂದ ಸುಮಾರು ಎರಡು ಕಿ.ಮೀ. ಅಂತರದಲ್ಲಿದೆ.

ಜಮೀನು ಮಂಜೂರು

Advertisement

ರಾಜಧಾನಿ ಮತ್ತು ಮೆಗಾ ಸಿಟಿಗಳನ್ನು ಹೊರತುಪಡಿಸಿ ಜಿಲ್ಲಾಮಟ್ಟದಲ್ಲಿ ಮತ್ತು ಒಳನಾಡಿನಲ್ಲಿ ವಿಶ್ವದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸುವ ಇರಾದೆ ಹೊಂದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ ಜತೆ ಸಂಯೋಜನೆ ಹೊಂದಿರುವ ಯೂನಿಯನ್‌ ಕ್ರಿಕೆಟರ್ಸ್‌ ಪುತ್ತೂರು ಎಂಬ ಸಂಸ್ಥೆಯು ಈ ವಿಚಾರ ದಲ್ಲಿ ಸಹಾಯ ಮಾಡಿದ್ದು, ಅದರಂತೆ ಕಬಕ ಗ್ರಾಮದ ಪೆರಿಯತ್ತೋಡಿ ಸಮೀಪದಲ್ಲಿ ಜಾಗ ಗುರುತಿಸಲಾಗಿತ್ತು.

2017ರ ಜುಲೈ 22ರಂದು ಅಸೋಸಿಯೇಶನ್‌ ಕಾರ್ಯದರ್ಶಿ ಆರ್‌. ಸುಧಾಕರ್‌ ರಾವ್‌ ಅವರು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದರು. ಪುತ್ತೂರಿ ನಲ್ಲಿ 25 ಎಕರೆ ಸರಕಾರಿ ಜಾಗವನ್ನು ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ನೀಡುವಂತೆ ಮನವಿ ಮಾಡಿದ್ದರು. ಯಾವುದೇ ಕ್ರೀಡಾ ಸಂಸ್ಥೆಗಳು ನಡೆಸುವ ಕ್ರೀಡಾ ಚಟುವಟಿಕೆಗಳಿಗೆ ಸರಕಾರ ಯಾವ ದರದಲ್ಲಿ ಜಮೀನನ್ನು ಲೀಸ್‌ಗೆ ನೀಡುತ್ತದೆಯೋ ಅಂಥದೇ ಮಾದರಿಯ ದರದಲ್ಲಿ ನೀಡುವಂತೆ ಕೋರಿದ್ದರು.

ಈ ವಿಚಾರದಲ್ಲಿ ಪುತ್ತೂರು ತಾಲೂಕು ಆಡಳಿತದೊಂದಿಗೆ ವ್ಯವಹರಿಸುವ ಜವಾಬ್ದಾರಿಯನ್ನು ಅಸೊಸಿಯೇಶನ್‌ನ ವಲಯ ಸಮನ್ವಯಕಾರ ಮನೋಹರ ಅಮೀನ್‌ ಮತ್ತು ಯೂನಿಯನ್‌ ಕ್ರಿಕೆಟರ್ಸ್‌ನ ಕಾರ್ಯದರ್ಶಿ ವಿಶ್ವನಾಥ ನಾಯಕ್‌ ಅವರಿಗೆ ನೀಡಲಾಗಿತ್ತು.

ಇದರ ಬೆನ್ನಲ್ಲೇ ಪುತ್ತೂರು ಸಹಾಯಕ ಆಯುಕ್ತರು ಉಪಕ್ರಮ ಆರಂಭಿಸಿದ್ದರು. ಕಂದಾಯ ಇಲಾಖೆ ವತಿಯಿಂದ ಜಮೀನು ಶೋಧಿಸಿ ಈ ಬಗ್ಗೆ ಕೈಗೊಳ್ಳಬೇಕಾದ ಉಪಕ್ರಮಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದರು. ಇದೀಗ ಜಮೀನು ನೀಡುವ ಪ್ರಕ್ರಿಯೆ ಅಂತಿಮಗೊಂಡು ಸಚಿವ ಸಂಪುಟ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಲು ಅನುಮತಿ ನೀಡಿದೆ.

ಪ್ರಕ್ರಿಯೆ ಸಾಗಿದ ರೀತಿ

2017ರ ಸೆಪ್ಟೆಂಬರ್‌ 28ರಂದು ಈ ಬಗ್ಗೆ ಪುತ್ತೂರು ತಹಶೀಲ್ದಾರ್‌ ಅವರು ಪುತ್ತೂರು ನಗರಸಭೆಗೆ ಪತ್ರ ಬರೆದು ಕಬಕ ಗ್ರಾಮದ 25 ಎಕ್ರೆ ಸರಕಾರಿ ಜಮೀನನ್ನು ಕೆಎಸ್‌ಸಿಎಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡುವಂತೆ ಮನವಿ ಮಾಡಿದ್ದರು. ಇದಾದ ಮೂರು ತಿಂಗಳ ಬಳಿಕ ಪುತ್ತೂರು ನಗರಸಭೆ ಈ ವಿಚಾರದಲ್ಲಿ ನಿರ್ಧಾರ ಕೈಗೊಂಡಿತು. ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ನಿರಾಕ್ಷೇಪಣ ಪತ್ರ ನೀಡುವ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಕೊನೆಗೂ ಅಂದಿನ ಆಡಳಿತದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಜ. 10ರಂದು ನಿರಾಕ್ಷೇಪಣ ಪತ್ರವನ್ನು ಪುತ್ತೂರು ನಗರಸಭೆ ಸಿದ್ಧಗೊಳಿಸಿತು. ಸಭೆಯ ನಿರ್ಧಾರದಂತೆ ಎನ್‌ ಒಸಿಯನ್ನು ತಾಲೂಕು ಆಡಳಿತಕ್ಕೆ ನೀಡಲಾಯಿತು.

ಸ್ಟೇಡಿಯಂ, ಪೆವಿಲಿಯನ್‌ ನಿರ್ಮಾಣ

ಮಂಜೂರಾದ ಜಾಗದಲ್ಲಿ ಅತ್ಯಾಧುನಿಕ ಪೆವಿಲಿಯನ್‌, ಮೈದಾನ ನಿರ್ಮಿಸಲಾಗುತ್ತದೆ. ಅನಂತರ ಸುಂದರ ಸ್ಟೇಡಿಯಂ ನಿರ್ಮಿಸುವ ಗುರಿ ಇದೆ. ಇದಕ್ಕಾಗಿ ಹೂಡಿಕೆ ಮಾಡಲು ತಾನು ಸಿದ್ಧನಿದ್ದೇನೆ ಎಂದು ಕ್ರಿಕೆಟ್‌ ಅಸೋಸಿಯೇಶನ್‌ ಪುತ್ತೂರು ಸಹಾಯಕ ಆಯುಕ್ತರಿಗೆ ಭರವಸೆ ನೀಡಿತ್ತು. ಕೊಡಗು ಜಿಲ್ಲೆಯ ಹೊದ್ದೂರಿನ ಮಾದರಿಯಲ್ಲೇ ಪುತ್ತೂರಿನಲ್ಲೂ ಸುದೀರ್ಘಾವಧಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ಪಡೆದು ಮೂಲಸೌಕರ್ಯ ಯೋಜನೆ ಅನುಷ್ಠಾನಿಸುವ ಗುರಿ ಹೊಂದಲಾಗಿದೆ.

ಗುತ್ತಿಗೆ ಆಧಾರದಲ್ಲಿ ಜಮೀನು: ಕಬಕ ಗ್ರಾಮದ ಸರ್ವೇ ನಂಬರ್‌ 260/1ಪಿ1 ರಲ್ಲಿ 23.25 ಎಕ್ರೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. –ಜೆ.ಸಿ. ಮಾಧುಸ್ವಾಮಿ, ಸಚಿವರು, ಕಾನೂನು, ಸಂಸದೀಯ ವ್ಯವಹಾರ ಖಾತೆ

ಉತಮ ಅವಕಾಶದ ನಿರೀಕ್ಷೆ: ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲಿರುವ ಪುತ್ತೂರಿಗೆ ಮೂಲ ಸೌಕರ್ಯದ ಭಾಗವಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಮಂಜೂರುಗೊಳಿಸಲಾಗಿದೆ. ತನ್ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ದೊರೆಯುವ ನಿರೀಕ್ಷೆ ಹೊಂದಲಾಗಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next