Advertisement

ಸಾಂಸ್ಕೃತಿಕ ಜಾಂಬೂರಿ: ಹಂಟರ್ ಡ್ಯಾನ್ಸ್- ಅಪ್ಪಟ ಆದಿವಾಸಿಗಳ ವೇಷ

05:54 PM Dec 25, 2022 | Team Udayavani |

ಸರಿ ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಒಂದು ಜನಪ್ರಿಯ ಜಾನಪದ ನೃತ್ಯಕಲೆಯೇ ಬೇಡರ ವೇಷದ. ಈ ಕಲೆಯ ಹಿನ್ನೆಲೆಯ ಕುರಿತು ಕೇಳಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಕಥೆಗಳನ್ನು ಹೇಳುತ್ತಾರೆ.

Advertisement

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಆಳ್ವಾಸ್ ಆವರಣದಲ್ಲಿ ನಡೆಸುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಉತ್ಸವದಲ್ಲಿ  ಗರಿ ಬಿಚ್ಚಿ ಕುಣಿಯುವ ನವಿಲಿನಂತೆ‌ ಬೆನ್ನಿಗೆ ನವಿಲುಗರಿಯನ್ನು ಧರಿಸಿ, ರಕ್ತಗೆಂಪು ಬಣ್ಣವನ್ನು ಮುಖಕ್ಕೆ ಬಳಿದುಕೊಂಡು, ಕಣ್ಣಿಗೆ ಕಾಡಿಗೆ, ಕೊರಳಿಗೆ ಹಾರ, ಕಾಲಿಗೆ ಗೆಜ್ಜೆ ಕಟ್ಟಿ ತಮಟೆಯ ಸದ್ದಿಗೆ ಮೈಮರೆತು ಕುಣಿಯುತ್ತಾ ಬರುವ ಬೇಡರ ವೇಷದ ಕುಣಿತವನ್ನು ನೋಡಿದರೆ ಎಂತಹವರಿಗೂ ಮೈಜುಂ ಎನ್ನಿಸುತ್ತದೆ.

ಬೇಡರ ಕುಣಿತವನ್ನು ಪ್ರದರ್ಶಿಸಲು  ಹಾವೇರಿ ಜಿಲ್ಲೆಯು ಹಾನಗಲ್ ತಾಲೂಕಿನಿಂದ  ಮಾಯಿ ಕಲಾತಂಡವು  ಜಾಂಬೂರಿ ಉತ್ಸವಕ್ಕೆ ಬಂದಿತ್ತು. ಹದಿನಾರು ಕಲಾವಿದರ ಈ ತಂಡದಲ್ಲಿ ಮೂವರು ಬೇಡರ ವೇಷವನ್ನು ಧರಿಸಿದ್ದರು. ಇನ್ನುಳಿದ ಕಲಾವಿದರಲ್ಲಿ ಕೆಲವರು ತಮಟೆ ತಟ್ಟುತ್ತಿದ್ದರೆ  ಇನ್ನೂ ಕೆಲವರು ಆದಿವಾಸಿಗಳ ವೇಷಧರಿಸಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು.  ರಕ್ತಗೆಂಪು ಮುಖದ ಮೇಲೆ ಬಿಳಿಯ ಮೂಗು ಹಾಗೂ  ದಪ್ಪ ಮೀಸೆಯನ್ನು ಹೊತ್ತು, ತಮಟೆಯ ಸದ್ದಿಗೆ ಮೈಮರೆತು, ರೌದ್ರವಾಗಿ  ನರ್ತಿಸುತ್ತಾ, ಕಣ್ಣು ಕಿಸಿದು ಎಲ್ಲರೆಡೆಗೆ ಬೀರುವ ಬೇಡರ ಭಯಾನಕ ನೋಟವಂತು ರುದ್ರ ರಮಣೀಯವಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿದು ಬಿಡುತ್ತದೆ.

ಈ ಜಾನಪದ ನೃತ್ಯ ಕಲೆಯ ಕುರಿತು ಹಲವಾರು ಜಾನಪದ ಕಥೆಗಳಿವೆ. ಮಲೆನಾಡಿನ ಹಚ್ಚಹಸಿರಿಗೆ ತವರು ಮನೆಯಂತಿರುವ ಶಿರಸಿಯಲ್ಲಿ ಬೇಡರ ಕುಣಿತ ಹೆಚ್ಚಾಗಿ ಕಂಡುಬರುತ್ತದೆ. ಶಿವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ದರ್ಶನ ಪಡೆಯಲೆಂದು  ಹೋಗುತ್ತಿದ್ದ  ಊರ ಸರಪಂಚನ ಮಗಳನ್ನು ಅಡ್ಡಹಾಕಿದ ಕಳ್ಳಕಾಕರು ಆಕೆಯ ಆಭರಣಗಳನ್ನು ದೋಚುಲು ಪ್ರಯತ್ನಿಸುತ್ತಾರೆ. ಮಗಳಿಂದ ಈ ವಿಷಯವನ್ನು ತಿಳಿದ ಗ್ರಾಮದ ಮುಖ್ಯಸ್ಥನಾದ ಸರಪಂಚನು ದರೋಡೆಕೋರರಿಂದ ಬಚಾವಾಗಲು ಊರಿನ ಪಕ್ಕದಲ್ಲಿ ವಾಸಿಸುತ್ತಿದ್ದ ಬಲಿಷ್ಠ ಬೇಡನ ಸಾಹಾಯ ಕೇಳುತ್ತಾನೆ. ಸಾಹಾಯ ಹಸ್ತ ನೀಡಿದ ಬೇಡನು ದರೋಡೆಕೋರರ ವಿರುದ್ಧ ಹೋರಾಡಿ ಅವರನ್ನು ಸೋಲಿಸಿ ಸಮಸ್ಯೆಯನ್ನು ಬಗೆಹರಿಸುತ್ತಾನೆ. ಮುಂದೆ ಈ ಬೇಡನೆ ಸರಪಂಚನ ಮಗಳ ಅಂದಕ್ಕೆ ಮೋಹಿತನಾಗಿ ಆಕೆಯನ್ನು ಅಪಹರಿಸಲು ಪ್ರಯತ್ನಿಸುತ್ತಾನೆ. ಬೇಸತ್ತ ಸರಪಂಚನು ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಊರಿನಲ್ಲಿದ್ದ  ಪಡ್ಡೆ ಹುಡುಗರನ್ನು ಸೇರಿಸಿಕೊಂಡ ಆದಿವಾಸಿಗಳ ವೇಷವನ್ನು ಧರಿಸಿ ಬೇಡನನ್ನು ಹಿಡಿಯುತ್ತಾರೆ. ಆದರೂ ಆ ಬೇಡನ ತಾಕತ್ತಿಗೆ ಹೆದರಿದ ಸರಪಂಚನು  ಅವನು ಕಣ್ಣುಗಳನ್ನು ಕಿತ್ತುಹಾಕಿಸಿ, ಊರಿನ ತುಂಬೆಲ್ಲಾ ನೃತ್ಯಮಾಡಿಸಿ ಆ  ಬೇಡನನ್ನು ದಣಿಸುತ್ತಾನೆ. ಹೀಗೆ ಆ ಬಲಿಷ್ಠ ಬೇಡನನ್ನು ಕುಣಿಸಿ ಕುಣಿಸಿ ದಣಿಸುವ ವೇಷವೇ ಬೇಡರ ವೇಷ.

Advertisement

ಮೂಲತಃ ಕೃಷಿಕರಾಗಿರುವ ರಾಮಕೃಷ್ಣ ಪಾಂಡುರಂಗ ಸುಗಂಧಿ ಅವರು ಮಾಯಿ ಕಲಾತಂಡದ ಮುಖ್ಯಸ್ಥರಾಗಿದ್ದಾರೆ. ತಂದೆಯಿಂದ ಬಳುವಳಿಯಾಗಿ ಬಂದ ಈ ಜಾನಪದ ಕಲೆಯನ್ನು ಸುಮಾರು ನಲವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮುಂಬಯಿ, ಕೊಲ್ಕತ್ತಾ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ  ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಅಂತಾರಾಷ್ಟ್ರೀಯ ಕರಕುಶಲ ಮೇಳ ಹಾಗೂ ಜಾನಪದ ಉತ್ಸವಗಳು, ಜಿಲ್ಲಾ ಉತ್ಸವಗಳು, ಗಡಿನಾಡು ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ ಮೈಸೂರಿನ ದಸರೆಯಲ್ಲಿ ತಮ್ಮ ಅದ್ಭುತ ಕಲೆಯನ್ನು ಪ್ರದರ್ಶಿಸಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳೊಂದಿಗೆ ಬದುಕಿ ನಶಿಸಿ ಹೋಗುತ್ತಿರುವ ಆ ಕಲೆಗಳನ್ನೂ ಬದುಕಿಸುವ ಜಾನಪದ ಕಲಾವಿದರೇ ಈ ಭುವಿಯ ಮೇಲಿನ ಎಲ್ಲಾ ಕಲೆಗಳ ಜೀವಾಳವಾಗಿದ್ದಾರೆ. ಈ ಜೀವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸ ಬೇಕಾಗಿದೆ. ಇಂತಹ ಸಾವಿರಾರು ಕಲಾವಿದರನ್ನು ಗುರುತಿಸಿ ಅವರ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಹಸ್ತಾಂತರಿಸುವ ಕೆಲಸ ಮಾಡುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಈ ಜಾಂಬೂರಿ ಉತ್ಸವಕ್ಕೆ ನನ್ನ ಕೋಟಿ ಕೋಟಿ ನಮನಗಳು.

 –ವಿಜಯ ಅಜ್ಜನಕಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next