Advertisement
ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಬೇಕು ಎಂಬುದು ಕ್ರಿಕೆಟ್ ಪ್ರೇಮಿಗಳ ಬಹುಕಾಲದ ಹಂಬಲ. ಜಿಲ್ಲೆಯ ಪ್ರತಿಭೆ ಕೆ.ಎಲ್. ರಾಹುಲ್ ಅವರು ಪ್ರಸ್ತುತ ಭಾರತದ ತಂಡದ ಪ್ರಧಾನ ಆಟಗಾರರು. ಆದರೆ ನಗರದಲ್ಲಿ ಪ್ರಸ್ತುತ ರಣಜಿ ಪಂದ್ಯ ಆಯೋಜನೆಗೂ ಪೂರಕವಾದ ಮೈದಾನ ಸೌಲಭ್ಯ ಇಲ್ಲ; ಶಿವಮೊಗ್ಗ, ಹುಬ್ಬಳ್ಳಿ ಸಹಿತ ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ರಣಜಿ ಪಂದ್ಯಗಳು ಆಯೋಜನೆಗೊಳ್ಳುತ್ತಿವೆ.
Related Articles
Advertisement
2002ರಲ್ಲಿ ಪಿಲಿಕುಳದ ಪ್ರಸ್ತುತ ಇರುವ ಗಾಲ್ಫ್ ಮೈದಾನದಲ್ಲಿ ಕ್ರಿಕೆಟ್ ಸ್ಟೇಡಿಯಂ ಹಾಗೂ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣದ ಪ್ರಸ್ತಾವ ಕೇಳಿಬಂತು. ಇಲ್ಲಿ ಸುಮಾರು 72 ಎಕ್ರೆ ಜಾಗವಿದೆ. ಇದನ್ನು ತಣ್ಣೀರುಬಾವಿಗೆ ವರ್ಗಾಯಿಸಿ ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಹಾಗೂ ಕ್ರೀಡಾಸಂಕೀರ್ಣಕ್ಕೆ ಬಳಸಲು ನಿರ್ಣಯಿಸಲಾಗಿತ್ತು. ಇದೂ ಮುಂದೆ ಏನೂ ಆಗಲಿಲ್ಲ. ಈ ಮಧ್ಯೆ ನಗರದ ಇತರೆಡೆಗಳಲ್ಲಿಯೂ ಸ್ಥಳದ ಹುಡುಕಾಟ ನಡೆದಿತ್ತು. ಬೈಕಂಪಾಡಿ, ತಣ್ಣೀರುಬಾವಿ, ಬೊಂದೇಲ್ ಪ್ರಸ್ತಾವನೆಯಾಗಿ ಅಲ್ಲೇ ಬಾಕಿಯಾಗಿವೆ. ಇದೆಲ್ಲದರ ನಡುವೆ ಕೆಂಜಾರಿನಲ್ಲಿ ಮಂಗಳೂರು ವಿಮಾನನಿಲ್ದಾಣದ ಬಳಿ 30 ಎಕ್ರೆ ಜಾಗವನ್ನು ಕ್ರಿಕೆಟ್ ಆಸೋಸಿಯೇಶನ್‌ಗೆ 30 ವರ್ಷಗಳ ಅವಧಿಗೆ ಲೀಸ್‌ಗೆ ನೀಡುವ ಬಗ್ಗೆಯೂ ಇನ್ನೊಂದು ಪ್ರಸ್ತಾವ ಕೇಳಿ ಬಂದಿತ್ತು.
ಮೇರಿಹಿಲ್‌ನಲ್ಲಿ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ! :
ನಿವೇಶನ ಹಾಗೂ ಅನುದಾನ ಲಭ್ಯತೆ ಆಧಾರದ ಮೇಲೆ ನಗರದ ಮೇರಿಹಿಲ್‌ನ ಕ್ರೀಡಾ ಇಲಾಖೆಗೆ ಸೇರಿದ 9 ಎಕ್ರೆ ಮೈದಾನವನ್ನೇ ಸುಸಜ್ಜಿತ ಕ್ರಿಕೆಟ್ ಮೈದಾನವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸರಕಾರ ಸದ್ಯ ಉತ್ಸುಕತೆ ತೋರಿದೆ. ಇಲ್ಲಿ 10 ಕೋ.ರೂ ವೆಚ್ಚದಲ್ಲಿ ಕ್ರಿಕೆಟ್ ಅಕಾಡೆಮಿ ಹಾಗೂ ಟರ್ಫ್ ಮೈದಾನ ನಿರ್ಮಾಣ ಪ್ರಸ್ತಾವ ಅನುಷ್ಠಾನ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತದೆ. ಆದರೆ ಇದೂ ಮಾತುಕತೆ ಹಂತದಲ್ಲೇ ಇದೆ!
ಸ್ಟೇಡಿಯಂ ಮೂಲಕ ಮಂಗಳೂರು ವಿಶ್ವಮಾನ್ಯ! :
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯುವ ಕ್ರಿಕೆಟ್ ಪಂದ್ಯಾಟ ಆಯೋಜನೆಗೊಳ್ಳುವುದು ನಗರದ ಅಭಿವೃದ್ಧಿಯ ದೃಷ್ಟಿಯಲ್ಲಿ ಅಗತ್ಯವಿದೆ. ಕ್ರಿಕೆಟ್ ಜನಾಕರ್ಷಣೆಯ ಕ್ರೀಡೆ. ಏಕದಿನ ಪಂದ್ಯ, ಟಿ-20, ಐಪಿಎಲ್, ಟೆಸ್ಟ್, ಅಂಡರ್-19 ಹೀಗೆ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡೆಗಳು ಆಯೋಜನೆಗೊಳ್ಳುತ್ತಿವೆ. ಇವುಗಳಲ್ಲಿ ವಾರ್ಷಿಕವಾಗಿ ಒಂದೆರಡು ಪಂದ್ಯಗಳು ಮಂಗಳೂರಿನಲ್ಲಿ ನಡೆಯಲು ಅವಕಾಶವಾದರೆ, ನಗರ ವಿಶ್ವಮಟ್ಟದಲ್ಲಿ ಇನ್ನಷ್ಟು ಹೆಚ್ಚು ಜನಾಕರ್ಷಣೆ ಪಡೆಯಲು ಪೂರಕ.
ಮಾತುಕತೆ ಹಂತದಲ್ಲಿದೆ ಸ್ಟೇಡಿಯಂ ನಿರ್ಮಾಣ :
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಪ್ರಕ್ರಿಯೆ ಮಾತುಕತೆ ಹಂತದಲ್ಲಿದೆ. ಮೇರಿಹಿಲ್‌ನ ಹೆಲಿಪ್ಯಾಡ್ ಸಮೀಪದಲ್ಲಿರುವ ಕ್ರೀಡಾಂಗಣವನ್ನು ಇಲಾಖೆಯ ಉಸ್ತುವಾರಿಯಲ್ಲಿ ಕ್ರಿಕೆಟ್ ಅಸೋಸಿಯೇಶನ್ ಅವರು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಸರಕಾರ ಕೈಗೊಳ್ಳಲಿದೆ.-ಪ್ರದೀಪ್ ಡಿ’ಸೋಜಾ, –ಉಪನಿರ್ದೇಶಕರು, ಕ್ರೀಡಾ ಇಲಾಖೆ-ದ.ಕ.
-ದಿನೇಶ್ ಇರಾ