Advertisement
ನಗರದ ಹೊರವಲಯದಲ್ಲಿರುವ ಕೊಣಾಜೆ ಬಳಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಪೂರಕ ಕೆಲಸಗಳು ನಡೆಯುತ್ತಿವೆ. ಇಲ್ಲಿನ ಸುಮಾರು 20 ಎಕರೆ ಜಾಗದಲ್ಲಿ ಕ್ರೀಡಾಂಗಣ ತಲೆ ಎತ್ತಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧಿಕಾರಿಗಳು ಜಾಗ ಪರಿಶೀಲನೆ ನಡೆಸಿದ್ದು, ಲೀಸ್ ಪ್ರಕ್ರಿಯೆಯಲ್ಲಿ ಜಾಗ ಮೀಸಲಿಡುವುದು ಬಹುತೇಕ ಅಂತಿಮಗೊಂಡಿದೆ. ಕ್ರೀಡಾಂಗಣ ನಿರ್ಮಾಣಗೊಂಡರೆ ಅಂಡರ್ 18, ಭಾರತ-ಎ ಪಂದ್ಯಗಳು, ರಣಜಿ, ಮಹಿಳಾ ಕ್ರಿಕೆಟ್ ಸಹಿತ ರಾಷ್ಟ್ರೀಯ ಪಂದ್ಯಾವಳಿ ಆಯೋಜಿಸಲು ಅವಕಾಶ ಸಿಕ್ಕಂತಾಗುತ್ತದೆ.
ಕರ್ನಾಟಕ ಕ್ರಿಕೆಟ್ ಅಸೋಸಿ ಯೇಶನ್ 1999ರಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನವನ್ನು ನಿರ್ಮಿಸುವ ಪ್ರಸ್ತಾವವನ್ನು ದ.ಕ. ಜಿಲ್ಲಾಡಳಿತದ ಮುಂದಿರಿಸಿತ್ತು. 15 ಎಕ್ರೆ ಜಾಗವನ್ನು ಜಿಲ್ಲಾಡಳಿತ ನೀಡಿದರೆ ಮೈದಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿತ್ತು. ಪ್ರಸ್ತಾವ ಮುಂದಿರಿಸಿ 23 ವರ್ಷಗಳಾಗಿವೆ. ಸಾಕಾರ ರೂಪ ಪಡೆಯಲಿಲ್ಲ!
Related Articles
Advertisement
ಬೈಕಂಪಾಡಿ, ತಣ್ಣೀರುಬಾವಿ, ಬೊಂದೇಲ್ ಪ್ರಸ್ತಾವನೆಯಾಗಿ ಅಲ್ಲೇ ಬಾಕಿಯಾಗಿದೆ. ಇದೆಲ್ಲದರ ನಡುವೆ ಕೆಂಜಾರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿ 30 ಎಕ್ರೆ ಜಾಗವನ್ನು ಕ್ರಿಕೆಟ್ ಆಸೋಸಿಯೇಶನ್‌ಗೆ30 ವರ್ಷಗಳ ಅವಧಿಗೆ ಲೀಸ್‌ಗೆ ನೀಡುವ ಬಗ್ಗೆಯೂ ಇನ್ನೊಂದು ಪ್ರಸ್ತಾವ ಕೇಳಿ ಬಂದಿತ್ತು. ಬಳಿಕ ಮೇರಿಹಿಲ್‌ನಲ್ಲಿಯೂ ಜಾಗ ಮೀಸಲಿ ಡುವ ಪ್ರಸ್ತಾವವಿತ್ತು. ಭಾರತ ತಂಡದಲ್ಲಿ ಕರಾವಳಿಗರು
ಭಾರತ ತಂಡಕ್ಕೆ ಕರಾವಳಿ ಮೂಲಕ ಹಲವು ಕ್ರಿಕೆಟಿಗರು ಕೊಡುಗೆ ನೀಡಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿತ್ತಿರುವ ಮಂಗಳೂರು ಮೂಲದ ಕೆ.ಎಲ್. ರಾಹುಲ್ ಬಾಲ್ಯದ ದಿನಗಳಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿಯೇ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಅಲ್ಲದೆ ಬುಧಿ ಕುಂದರನ್, ರಘುರಾಮ್ ಭಟ್, ಅನಿಲ್ ಕುಂಬ್ಳೆ, ಶ್ಯಾಮ್‌ಚಂದ್ರ ಭಟ್, ಪಿ.ವಿ. ಶಶಿಕಾಂತ್, ದಯಾನಂದ ಕಾಮತ್, ರವಿ ಶಾಸ್ತ್ರಿ, ಸಂಜಯ್ ಮಂಜೇಕರ್ ಸಹಿತ ಮತ್ತಿತರರು ಮೂಲತಃ ಕರಾವಳಿಯವರು. ಆದರೂ ಕರಾವಳಿ ಭಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಿಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇತ್ತು. ಪೂರಕ ಪ್ರಕ್ರಿಯೆ ನಡೆಯುತ್ತಿದೆ
ಮಂಗಳೂರಿನ ಕೊಣಾಜೆ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪೂರಕ ಪ್ರಕ್ರಿಯೆಗಳಾಗಿ ಪತ್ರ ವ್ಯವಹಾರ ನಡೆಯುತ್ತಿದ್ದು, ಕಂದಾಯ ಇಲಾಖೆ ಜತೆ ಮಾತುಕತೆ ಜರಗಬೇಕಿದೆ. ಕೆಎಸ್‌ಸಿಎ ಕಾರ್ಯದರ್ಶಿ ಸಹಿತ ಮ್ಯಾನೇಜಿಂಗ್ ಕಮಿಟಿ ಸದಸ್ಯರು, ವಲಯ ಇನ್‌ಚಾರ್ಜ್, ಜಿಲ್ಲಾಧಿಕಾರಿಗಳು ಕ್ರೀಡಾಂಗಣ ನಿರ್ಮಾಣವಾಗುವ ಪ್ರದೇಶ ವೀಕ್ಷಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಗೊಂಡರೆ ಇಲ್ಲಿನ ಹಲವಾರು ಕ್ರೀಡಾಪಟುಗಳಿಗೆ ಉತ್ತೇಜನ ಸಿಗುವಂತಾಗುತ್ತದೆ.
– ರತನ್ ಕುಮಾರ್, ಕೆಎಸ್‌ಸಿಎ ಮಂಗಳೂರು ವಲಯ ಸಂಚಾಲಕರು