ಹೊಸದಿಲ್ಲಿ: ಬೇಸಗೆಯಲ್ಲಿ ಉರಿ ಬಿಸಿಲು, ತಾಪಮಾನ ಹೆಚ್ಚಿದ್ದರೆ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತದೆ ಎಂಬ ವಾದ ಇದ್ದರೂ ಪ್ರಸ್ತುತ ದೇಶದಲ್ಲಿ ಕಂಡು ಬಂದಿರುವ ತಾಪಮಾನ, ಉಷ್ಣ ಅಲೆಗಳು ಅವಧಿಪೂರ್ವವಾಗಿದ್ದು, ಇದರಿಂದಾಗಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲೇ ಬೇಕು ಎಂದೇನಿಲ್ಲ ಎಂದು ಹವಾಮಾನ ತಜ್ಞರು ಪ್ರತಿ ಪಾದಿಸಿದ್ದಾರೆ.
ಈ ಬಾರಿಯ ಮಾರ್ಚ್‌ನಲ್ಲಿ ದಾಖಲಾದ ದೇಶದ ಸರಾಸರಿ ಗರಿಷ್ಠ ತಾಪಮಾನ ಕಳೆದ 122 ವರ್ಷಗಳಲ್ಲಿಯೇ ಅತ್ಯಧಿಕ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಈಚೆಗೆ ಹೇಳಿದ್ದರು.
ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಬೋಟ್‌ನಲ್ಲಿದ್ದವರ ರಕ್ಷಣೆ
ಮೇ ಮತ್ತು ಜೂನ್ ತಿಂಗಳುಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉಷ್ಣ ಅಲೆಗಳು, ತಾಪಮಾನ ಹೆಚ್ಚಿದ್ದರೆ ಅದು ಶಾಂತ ಸಾಗರದ ಮೇಲಿನಿಂದ ನೈಋತ್ಯ ಮಾರುತಗಳ ಆಗಮನವನ್ನು ಉತ್ತೇಜಿಸುತ್ತದೆ. ಇದರಿಂದ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತದೆ. ಆದರೆ ಈ ಬಾರಿ ಬಹಳ ಮುಂಚಿತವಾಗಿ ತೀವ್ರ ತಾಪಮಾನ ಕಾಣಿಸಿಕೊಂಡಿದ್ದು, ಮುಂಗಾರು ಮಾರುತಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಈಗಲೇ ಹೇಳಲಾಗದು ಎಂದು ತಜ್ಞರು ತಿಳಿಸಿದ್ದಾರೆ.