Advertisement

ಏರೋ ಇಂಡಿಯಾ 2021: ಸೂರ್ಯಕಿರಣ್‌, ಸಾರಂಗ್‌ ಸಾಹಸಿಗರ ಜುಗಲ್‌ಬಂದಿ

10:19 AM Feb 05, 2021 | Team Udayavani |

ಬೆಂಗಳೂರು: ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್‌ ಮತ್ತು ಯುದ್ಧ ವಿಮಾನಗಳ “ಜಗಲ್‌ ಬಂದಿ’ಗೆ ಈ ಬಾರಿಯ ಏರೋ ಇಂಡಿಯಾ ಸಾಕ್ಷಿಯಾಗಿದೆ. ಸೂರ್ಯಕಿರಣ್‌ ಮತ್ತು ಸಾರಂಗ್‌ ಸ್ವರ್ಧೆಗಿಳಿದಂತೆ ಪ್ರದರ್ಶನ ನೀಡುತ್ತಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿವೆ.

Advertisement

ವೇಗ, ಸಾಮರ್ಥಯ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಭಿನ್ನವಾಗಿದ್ದು, ಇವರೆಡು ಸೇರಿ ಒಂದೇ ವೇದಿಕೆಯಲ್ಲಿ ಒಟ್ಟಾಗಿ ಪ್ರದರ್ಶನ ನೀಡುವುದು ಪೈಲಟ್‌ಗಳ ಮಟ್ಟಿಗೆ ಸವಾಲು. ಅದರಲ್ಲೂ, ಕಳೆದ ಆವೃತ್ತಿಯಲ್ಲಿ ಅಭ್ಯಾಸ ಪ್ರದರ್ಶನ ವೇಳೆ ನಡೆದ ಅವಘಡದಲ್ಲಿ ಸೂರ್ಯಕಿರಣ್‌ ತಂಡದ ಪೈಲಟ್‌ ಒಬ್ಬರು ಮೃತಪಟ್ಟಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿ “ಜುಗಲ್‌ ಬಂದಿ’ ಸಾಹಸಕ್ಕೆ ಕೈಹಾಕಿತ್ತು. ಆದರೆ, ದೇಶೀಯ ಎರಡೂ ತಂಡಗಳು ಅದನ್ನು ಸಮರ್ಥವಾಗಿ ನಿಭಾಯಿಸಿ ಜನಮನ ಗೆದ್ದಿದೆ. ಜತೆಗೆ ವೈಮಾನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ದಾಖಲಿಸಿವೆ.

ಈ ಸಂದರ್ಭದಲ್ಲಿ ತಂಡಗಳ ಪೈಲಟ್‌ಗಳಾದ ವಿಂಗ್‌ ಕಮಾಂಡರ್‌ ಮಯಾಂಕ್‌ ನೌಟಿಯಾಲ್‌, ದೀಪಾಂಕರ್‌ ಗರ್ಗ್‌ (ಸೂರ್ಯ ಕಿರಣ್‌), ಸ್ನೇಹ ಕುಲಕರ್ಣಿ (ಸಾರಂಗ್‌) ತಮ್ಮ ಅನುಭವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ…

*ಜುಗಲ್‌ಬಂದಿ ಅನುಭವ ಹೇಗಿದೆ?

ಈ ಹಿಂದಿನ ಏರೋ ಶೋ ಈ ಬಾರಿ ಜವಾಬ್ದಾರಿ ದುಪ್ಪಾಟಾಗಿದೆ. ಪ್ರತಿ ಪ್ರದರ್ಶನದಲ್ಲಿಯೂ ಪ್ರೇಕ್ಷಕರಷ್ಟೇ ನಾವೂ ರೋಮಾಂಚನಗೊಂಡಿದ್ದೇವೆ. ವೈಮಾನಿಕ ಕ್ಷೇತ್ರದ ಸಾಧನೆಯೊಂದಕ್ಕೆ ಸಾಕ್ಷಿಯಾದ ಹೆಮ್ಮೆ, ಸಂತಸ ನಮ್ಮ ತಂಡಗಳ ಎಲ್ಲಾ ಸದಸ್ಯರಿಗೂ ಇದೆ.

Advertisement

ಇದನ್ನೂ ಓದಿ:ಐಒಆರ್‌ ದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆಗೆ ಸಿದ್ಧ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಣೆ

*ಒಟ್ಟಿಗೆ ಪ್ರದರ್ಶನ ನೀಡುವ ಉದ್ದೇಶವೇನು?

ಹೊಸತನ, ವಿಭಿನ್ನತೆ ನೀಡುವ ಸಂಕಲ್ಪ ವಾಯು ಸೇನೆ ಇತ್ತು. ಅದನ್ನು ಸಕಾರ ಗೊಳಿಸಿದ್ದೇವೆ. ಎರಡೂ ಎಚ್‌ಎಎಲ್‌ ಸಿದ್ಧಪಡಿಸಿದ್ದು, ಆತ್ಮನಿರ್ಭರತೆಯ ಸಂಕೇತವಾಗಿದೆ. ಇನ್ನು ಸೂರ್ಯಕಿರಣ್‌ ತಂಡ ರಚನೆಯಾಗಿ 25 ವರ್ಷಗಳಾಗಿವೆ. ಸಾರಂಗ್‌ ತಂಡ ರಚನೆಯಾಗಿ 17 ವರ್ಷಳಾಗಿವೆ. ಈವರೆಗೂ ಸೂರ್ಯಕಿರಣ್‌ ಮತ್ತು ಸಾರಂಗ್‌ 600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪ್ರತ್ಯೇಕವಾಗಿ ನೀಡಿವೆ. ಈ ಬಾರಿ ಏರೋ ಇಂಡಿಯಾದಲ್ಲಿ ಹೊಸತನವನ್ನು ನೀಡುವ ಉದ್ದೇಶವಿತ್ತು. ಜತೆಗೆ ಎರಡೂ ತಂಡಗಳು ವೈಮಾನಿಕ ಪ್ರದರ್ಶನದ ಕೇಂದ್ರ ಬಿಂದುವಾಗಿದ್ದು, ಒಟ್ಟಿಗೆ ಪ್ರದರ್ಶನ ನೀಡುವ ಮೂಲಕ ಭಾರತೀಯ ವಾಯುಸೇನೆ ವಿಶಿಷ್ಟ ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಟ್ಟಂತಾಗಿದೆ.

*ಹೆಲಿಕಾಪ್ಟರ್‌ ಮತ್ತು ಲಘು ಯುದ್ಧ ವಿಮಾನದ ನಡುವಿನ ಹೊಂದಾಣಿ ಹೇಗೆ ಸಾಧ್ಯವಾಯಿತು?

ಹೌದು, ವೇಗ ಸಾಮರ್ಥ್ಯದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಜತೆಗೆ ತಂಡ ರಚನೆಯೂ ಬೇರೆ ಇದೆ. ಸಾರಂಗ್‌ ವೇಗ ಗಂಟೆಗೆ 180 ರಿಂದ 200 ಕಿ.ಮೀ ಇದ್ದು, ಸೂರ್ಯಕಿರಣ್‌ ವೇಗ ಗಂಟೆಗೆ 700 ಕಿ.ಮೀ ಇದೆ. ಹೀಗಾಗಿ, ವೇಗದ ಹೋಂದಾಣಿ ಕುರಿತು ಪೈಲಟ್‌ಗಳು ತರಬೇತಿ ಪಡೆದೆವು. ಪರಸ್ಪರ ಮಾಹಿತಿಯನ್ನು ಹಂಚಿಕೊಂಡು, ಅಧ್ಯಯನ ಮಾಡಿದ್ದೇವೆ. ಎರಡೂ ತಂಡಗಳ ಸಂವಹನ ಉತ್ತಮವಾಗಿದೆ. ಈ ಹಿಂದಿನಪ್ರದರ್ಶನಗಳಲ್ಲಿ ಸೂರ್ಯಕಿರಣ್‌ ಒಂದೇ 22 ನಿಮಿಷ ಹಾರಾಟ ನಡೆಸುತ್ತಿದ್ದೆವು. ಸದ್ಯ ಈ ಎರಡೂ ತಂಡಗಳು ಸೇರಿ 19 ನಿಮಿಷ ಹಾರಾಟ ನಡೆಸುತ್ತಿದ್ದೇವೆ.

ಇದನ್ನೂ ಓದಿ: ನಾನು ಈಗಲೂ ರೈತರ ಪರ; ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ: ಗ್ರೇಟಾ ಥನ್ಬರ್ಗ್

*ಪೂರ್ವ ಸಿದ್ಧತೆ ಹೇಗಿತ್ತು?

ಕಳೆದ ನಾಲ್ಕೈದು ತಿಂಗಳಿಂದ ಇದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದೇವೆ. ಬೀದರ್‌ನ ವಾಯುನೆಲೆಯಲ್ಲಿ ಎರಡು ತಿಂಗಳು ಅಭ್ಯಾಸ ಮಾಡಲಾಗಿತ್ತು. ಜತೆಗೆ ಯಲಹಂಕದಲ್ಲೂ ತಾಲೀಮು ನಡೆಸಲಾಗಿದೆ. ಹೆಚ್ಚು ಜಾಗರೂಕತೆಯಿಂದ ಸಾಕಷ್ಟು ಪರಿಶ್ರಮಪಟ್ಟು ಮುನ್ನಡೆಸಿದ್ದೇವೆ.

*ಕಳೆದ ಬಾರಿ ನಡೆದ ಸೂರ್ಯಕಿರಣ್‌ ಅವಘಡದಿಂದ ತಂಡ ಕುಗ್ಗಿದೆಯೇ?

ಅವಘಡದಿಂದ ಸಾಕಷ್ಟು ಪಾಠವನ್ನು ಕಲಿತಿದ್ದೇವೆ. ಒಬ್ಬರು ಪೈಲಟ್‌ ಅನ್ನು ಕಳೆದುಕೊಡಿದ್ದೆವು. ಇದೇ ಅವಘಡದಲ್ಲಿ ಗಾಯಗೊಂಡಿದ್ದ ಪೈಲಟ್‌ ತೇಜಶ್ವರ್‌ ಕೂಡಾ ಚೇತರಿಸಿಕೊಂಡಿದ್ದು, ಹೀಗಾಗಲೇ ತಂಡಕ್ಕೆ ವಾಪಸ್ಸಾಗಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ.

*ಜುಗಲ್‌ಬಂದಿ ಯಿಂದ ಪ್ರದರ್ಶನ ಉತ್ತಮ ಎನಿಸುತ್ತದೆಯೇ?

ಸೂರ್ಯಕಿರಣ್‌ದ ವೇಗ ಹೆಚ್ಚಿರುತ್ತದೆ. ಪ್ರದರ್ಶನ ಸ್ಥಳದಿಂದ ದೂರಕ್ಕೆ ಸಾಗಿದ ಸಂದರ್ಭದಲ್ಲಿ ನಡುವೆ ಕಾಣಿಸಿಕೊಳ್ಳುವ ಖಾಲಿ ಜಾಗದಲ್ಲಿ ಸಾರಂಗ್‌ ಬರುತ್ತವೆ. ಆ ನಂತರ ಕೂಡಲೇ ಸೂರ್ಯಕಿರಣ್‌ ಮರಳುತ್ತವೆ. ಇದರಿಂದ ಒಂದರ ಹಿಂದೆ ಮತ್ತೂಂದು ನಿರಂತರ ಹಾರಾಟ ನಡೆಸಿ ವಿವಿಧ ರಚನೆಗಳನ್ನು ಮಾಡುವುದರಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತದೆ.

*ಮುಂದಿನ ಬಾರಿಯೂ ಜುಗಲ್‌ಬಂದಿ ಮುಂದುವರಿಯಲಿದೆಯೇ ?

ಎರಡು ವರ್ಷ ಕಾಲಾವಕಾಶವಿದೆ. ಸಾರ್ವಜನಿಕರು ಇಚ್ಛೆಪಟ್ಟು ವಾಯುಸೇನೆ ಸೂಚಿಸಿದರೆ, ಇನ್ನಷ್ಟು ಉತ್ತಮಗೊಳಿಸಿ ಹೊಸತನ ಅಳಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next