ಜೀವನದಲ್ಲಿ ಸೋಲು ಮಾಮೂಲು, ಅದೇ ಸೋಲನ್ನು ಮೆಟ್ಟಿ ಗೆಲುವುದು ಒಂದು ಸವಾಲು. ಜಗತ್ತಿನಲ್ಲಿ ಇಂಥ ಸೋಲನ್ನು ಮೆಟ್ಟಿ ನಿಂತ ಎಷ್ಟೋ ಸಾಧಕರ ಬದುಕಿನ ಯಶೋಗಾಥೆಗಳೇ ನಮಗೆ ಸ್ಪೂರ್ತಿದಾಯಕವೂ, ಕುಗ್ಗಿ ಹೋದ ಮನಸ್ಸಿಗೆ ಆಶದಾಯಕವೂವಾಗುತ್ತವೆ…
ಮುನಿಭಾ ಮಜಾರಿ ಎನ್ನುವ ದಿಟ್ಟ ಪಾಕಿಸ್ತಾನಿ ಹೆಣ್ಣೊಬ್ಬಳ ಕಥೆಯಿದು..
ಮುನಿಭಾ ಹುಟ್ಟಿದ್ದು 1987 ರ ಮಾರ್ಚ್ 3 ರಂದು.ಬಲೂಚ್ ಎನ್ನುವ ಸಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ.ಅಪ್ಪ ಅಮ್ಮನ ಅಪಾರ ಪ್ರೀತಿ ಸಿಕ್ಕರೂ ಧರ್ಮದ ಚೌಕಟ್ಟು ಮತ್ತು ಸಂಪ್ರದಾಯದ ಬೇಲಿಯನ್ನು ದಾಟಿ ಹೊರಗೆ ಬರುವುದು ಮುನಿಭಾರಿಗೆ ಸುಲಭವಾಗಿರಲಿಲ್ಲ.
ಚಿಗುರುವ ಮುನ್ನ ಕಮರಿದ ಬದುಕು :
ತಂದೆಯಿಂದಲೇ ಕರಗತ ಮಾಡಿಕೊಂಡ ಕ್ರಾಫ್ಟ್, ಡ್ರಾಯಿಗ್ ಗಳಲ್ಲಿ ಹಿಡಿತ ಸಾಧಿಸಿದ ಮುನಿಭಾ ಒಂದೊಳ್ಳೆ ವಿದ್ಯೆ ಕಲಿತು ಕನಸು ಕಾಣುವ ಹೊತ್ತಿನಲ್ಲಿ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಅಪ್ಪನ ಇಚ್ಛೆ,ಅಪ್ಪನ ಖುಷಿಗಾಗಿ ಮದುವೆಯಾಗುತ್ತಾರೆ,ಚಿಗುರು ಹೊತ್ತಿದ್ದ ಕನಸಿಗೆ ಕೊಳ್ಳಿಯಿಟ್ಟು ಸಂಸಾರವನ್ನು ನಿಭಾಯಿಸುತ್ತಾರೆ. ಎರಡು ವರ್ಷ ಸುಖಿಯಾಗಿಯೇ ಸಂಸಾರದಲ್ಲಿ ಲೀನಳಾಗುವ ಮುನಿಭಾರಿಗೆ ಅದೊಂದು ದಿನ ಅನಿರೀಕ್ಷಿತವಾಗಿ ಎದುರಾದ ಆಘಾತದಿಂದ ತನ್ನ ಬದುಕಿನ ದಿಕ್ಕೇ ಪಾತಾಳಕ್ಕೆ ಎಡವಿ ಬಿದ್ದ ಹಾಗೆ ಮಾಡಿ ಬಿಟ್ಟಿತು.
ಮುನಿಭಾ ಹಾಗೂ ಆಕೆಯ ಗಂಡ ಖುರಾಮ್ ಸೈಜಾದ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅದೊಂದು ಭೀಕರ ಅಪಘಾತ ನಡೆಯಿತು, ಒಂದು ಕ್ಷಣ ಎಲ್ಲವನ್ನೂ ನೂಚ್ಚು ನೂರು ಮಾಡಿತ್ತು. ಕಾರಿನಿಂದ ಗಂಡ ಖರಾಮ್ ಹಾರಿಕೊಂಡು ಅಲ್ಪ ಗಾಯ ಮಾಡಿಕೊಂಡು ಪ್ರಾಣ ಉಳಿಸಿಕೊಳ್ಳುತ್ತಾರೆ ಆದ್ರೆ ,ಇತ್ತ ಮುನಿಭಾ ಸಾವು ಬದುಕಿನ ನಡುವೆ ತನ್ನ ಚೀದ್ರ ದೇಹದೊಂದಿಗೆ ನೋವಿನ ನರಳಾಟದಿಂದ ಅರೆ ತ್ರಾಣದಲ್ಲಿ ಹೊರ ಬರಲಾಗದೆ ಕಾರಿನಲ್ಲೇ ಉಳಿಯುತ್ತಾಳೆ,ಆಳುತ್ತಾಳೆ,ಚೀರುತ್ತಾ ಮೂರ್ಛೆ ಹೋಗುತ್ತಾರೆ. ಒಂದು ಕ್ಷಣದ ಭೀಕರತೆ ಅವಳ ಬದುಕಿನ ಎಲ್ಲಾ ಉಮೇದುಗಳನ್ನು ಕಿತ್ತುಕೊಳ್ಳುತ್ತದೆ.
ಅಪಘಾತದ ನಂತರದಲ್ಲಿ ಒಂದು ಕ್ಷಣ ಎಲ್ಲವೂ ಮೌನ,ಎಲ್ಲರಿಗೂ ತಕ್ಷಣಕ್ಕೆ ಏನು ತಿಳಿಯದ ಪರಿಸ್ಥಿತಿ. ಪುಟ್ಟ ಹಳ್ಳಿಯೊಂದರಲ್ಲಿ ತಕ್ಷಣಕ್ಕೆ ಸಿಗುವ ಚಿಕಿತ್ಸೆ ಸೌಲಭ್ಯಗಳಿಲ್ಲ,ಪ್ರಾಥಮಿಕ ಚಿಕಿತ್ಸೆ ನೀಡುವ ಯಾವುದೇ ಸೌಕರ್ಯಗಳಿಲ್ಲ.ಇಂಥ ಹೊತ್ತಿನಲ್ಲಿ ಪಕ್ಕದಲ್ಲಿದ್ದ ಜೀಪ್ ಒಂದರಲ್ಲಿ ಸ್ಥಳೀಯ ವ್ಯಕ್ತಿಗಳು, ಅರೆ ಒದ್ದಾಟದ ರಕ್ತಸಿಕ್ತ ದೇಹವನ್ನು ಕಾರಿನಿಂದ ಕಷ್ಟಪಟ್ಟು ಎಳೆದು ಜೀಪಿನ ಹಿಂಬದಿಯಲ್ಲಿ ಮಲಗಿಸಿ ಸಾಗಿಸಲು ಅಲ್ಲಿಂದ ಮೂರು ಗಂಟೆ ದೂರದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ.
ಬದುಕುವ ಆಸೆಯನ್ನೇ ಚಿವುಟಿದ ಆಸ್ಪತ್ರೆಯ ಆ ದಿನಗಳು :
ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಚಿಕಿತ್ಸೆ ನೀಡಿದ್ರೂ,ಮುನಿಭಾ ಅದಾಗಲೇ ತನ್ನ ದೇಹದ ಅಂಗಾಂಗಗಳಿಗೆ ತೀವ್ರವಾಗಿ ಬಿದ್ದ ಏಟುಗಳಿಂದ ಬದುಕ ಬೇಕೆನ್ನುವ ಆಸೆಯನ್ನೇ ಮೊಟಕುಗೊಳಿಸುವ ಪರಿಸ್ಥಿತಿಯಲ್ಲಿದ್ದರು.ಅಪಘಾತದಿಂದ ಆದ ಶಾಶ್ವತ ಹೊಡೆತ ಒಂದರೆಡಲ್ಲ, ಸ್ಪೈನಲ್ ಕಾರ್ಡ್ ಮುರಿತದಿಂದ ಎದ್ದು ಕೂರದ ಸ್ಥಿತಿ. ಬಲಭುಜ,ಪಕ್ಕೆಲುಬು, ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡು ಆಸ್ಪತ್ರೆಯ ಬೆಡ್ ನಲ್ಲೇ ನರಳುವ ದಿನಗಳಲ್ಲಿ ಬದುಕು ಬೇಡ ಎನ್ನುವ ನಿರ್ಧಾರವನ್ನು ಮಾಡಿದ್ದರು. ಏನೇ ಆದ್ರು ಮುನಿಭಾರ ಅಮ್ಮ ಮಗಳ ಈ ಪರಿಸ್ಥಿತಿಯನ್ನು ಕಂಡು ಸುಮ್ಮನೆ ಕೂರಲಿಲ್ಲ,ಪ್ರತಿದಿನವೂ ನಿರಂತರ ಅರೈಕೆ,ಬದುಕನ್ನು ಆಶದಾಯಕವನ್ನು ಬಾಳುವ ಹಾರೈಕೆಯ ಮಾತುಗಳನ್ನು ಹೇಳುತ್ತಲೇ ಬಂದರು.
ಬೆಂಕಿಯಿಂದ ಬಾಣಲೆಗೆ ಬಿದ್ದ ಬಾಳು :
ಲಿವರ್ ಹಾಗೂ ಶ್ವಾಸಕೋಶಕ್ಕೆ ಹೊಡೆತದ ಪರಿಣಾಮ ತಟ್ಟಿರೋದರಿಂದ ಮುನಿಭಾರಿಗೆ ಡಾಕ್ಡರ್ ಹತ್ತಿರ ಬಂದು, “ನೀನು ಚಿತ್ರ ಕಲಾವಿದೆ ಇನ್ನೂ ಜೀವಮಾನದಲ್ಲಿ ಆಗುವುದು ಕಷ್ಟ, ನಿನಗೆ ಎದ್ದು ನಡೆಯಲೂ ಕೂಡ ಅಸಾಧ್ಯ,ವೀಲ್ ಚಕ್ರದ ಗಾಡಿಯಲ್ಲೇ ನೀನು ಇರಬೇಕು”. ಎಂದಾಗ ಅಷ್ಟು ದಿನಗಳು ಅನುಭವಿಸಿದ ನೋವಿನಲ್ಲೇ ಅದನ್ನು ನುಂಗಿಕೊಂಡು ಬಿಟ್ಟಳು,ಆದ್ರೆ ಡಾಕ್ಟರ್ ಮುಂದುವರೆಸಿ ಹೇಳಿದ ಮಾತು ಅವಳ ದುಃಖವನ್ನು ನೋವಿನಲ್ಲಿ ಬೆರೆಸಿ ಕುಗ್ಗುವಂತೆ ಮಾಡಿತು. ” ನಿನ್ನ ಸ್ಪೈನಲ್ ಕಾರ್ಡ್ ಪೂರ್ತಿಯಾಗಿ ಹಾನಿಯಾಗಿರೋದರಿಂದ ನಿನಗೆ ತಾಯಿಯಾಗುವ ಭಾಗ್ಯವೂ ಇಲ್ಲ”. ಎನ್ನುವ ಮಾತು ಸಿಡಿಲಿನಂತೆ ಅವಳ ಮನಸ್ಸನ್ನು ಸೀಳಿಕೊಂಡು ಬಿಟ್ಟಿತು.ಈ ನಡುವೆ ಗಾಯದ ಮೇಲೆ ಬರೆ ಎಳೆದಾಗೆ, ದುಃಖದ ಮೇಲೆ ಇನ್ನಷ್ಟು ದುಃಖ ಎನ್ನುವ ಹಾಗೆ ಅವಳ ಗಂಡ ಅವಳಿಂದ ವಿಚ್ಛೇದನ ಪಡೆಯುತ್ತಾನೆ. ಮುನಿಭಾ ಮೌನಿಯಾಗುತ್ತಾಳೆ,ಯೋಚನೆಗಳನ್ನು ಯೋಚಿಸುವುದು ಬಿಟ್ಟು ಅವಳಿಂದ ಬೇರೆಲ್ಲವೂ ಅಸಾಧ್ಯ.
ಆಸ್ಪತ್ರೆಯ ಬೆಡ್ ನಲ್ಲೇ ಭರವಸೆ ಬಿತ್ತಿದ್ದಳು:
ಸತತ ಎರಡುವರೆ ತಿಂಗಳು ಆಸ್ಪತ್ರೆಯ ಬೆಡ್ ನಲ್ಲೇ ಎದ್ದು ಕೂರಲಾಗದ ಪರಿಸ್ಥಿತಿಯಲ್ಲಿ ಮುನಿಭಾ ಮತ್ತೆ ಕತ್ತಲೆಯಲ್ಲಿದ್ದ ತಮ್ಮ ಯೋಚನೆಗಳಿಗೆ ಬೆಳಕಿನ ಭರವಸೆಯನ್ನು ಬಿತ್ತಿ ಕನಸು ಕಾಣಲು ಪ್ರಾರಂಭಿಸಿದ್ದರು,ಈಗ ಅವಳೊಳಗೆ ಸಾಧಿಸಲೇ ಬೇಕು ಎನ್ನುವ ಹುಚ್ಚಿ ಸಾಹಸಿಯೊಬ್ಬಳು ಹುಟ್ಟಿಕೊಂಡಿದ್ದಾಳೆ. ಆಸ್ಪತ್ರೆಯ ಬೆಡ್ ನಲ್ಲೇ ಹೊರ ಜಗತ್ತಿನ ತನ್ನ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವ ತುಂಬುವ ಪೈಟಿಂಗ್ ಗಳನ್ನು ಚಿತ್ರಿಸುತ್ತಾಳೆ,ಅವಳ ಒಂದೊಂದು ಪೈಟಿಂಗ್ ನೂರು ಕಥೆಯನ್ನು ಹೇಳುವ ಅರ್ಥಗಳನ್ನು ಒಳಗೊಳ್ಳುವಂತೆ ಇರುತ್ತದೆ. ಅವಳನ್ನು ಪ್ರೋತ್ಸಾಹಿಸ ಬೇಕು ಎನ್ನುವ ನಿಟ್ಟಿನಲ್ಲಿ ಅಂದಿನ ಗರ್ವನರ್ ಯೊಬ್ಬರು ಅವಳು ಬಿಡಿಸಿದ ಪೈಟಿಂಗ್ ಗಳನ್ನು ಕೊಳ್ಳುತ್ತಾರೆ, ಮುನಿಭಾ ಪೈಟಿಂಗ್ ಗಳನ್ನು ಬಿಡಿಸಿ ಖ್ಯಾತಿಯನ್ನುಗಳಿಸುತ್ತಾಳೆ. ಎಲ್ಲೆಡೆಯೂ ಪೈಟಿಂಗ್ ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ.
ಆಸ್ಪತ್ರೆಯಿಂದ ಮನೆಗೆ ಬಂದರೂ ಅವಳು ತನ್ನ ಭಾವನೆಗಳನ್ನು ಪೈಟಿಂಗ್ ಮೂಲಕ ವ್ಯಕ್ತಪಡಿಸೋದು ನಿಲ್ಲಿಸದೇ ಮುಂದುವರೆಯುತ್ತಾಳೆ. ತಾನು ತಾಯಿಯಾಗದೇ ತಾಯಿತನದ ಪ್ರೀತಿ ತನ್ನಲ್ಲಿ ಎಂದಿಗೂ ಇರುತ್ತದೆ ಎಂದು, ದತ್ತು ಮಗುವನ್ನು ಪಡೆಯಲು ಮುಂದಾಗುತ್ತಾಳೆ,ದತ್ತು ಮಗುವನ್ನು ಪಡೆದು ನಡೆಯಲಾಗದ ಸ್ಥಿತಿಯಲ್ಲೂ ಮಗುವಿಗೆ ತಾಯಿಯ ಮಮಕಾರವನ್ನು ನೀಡಿ ಸಾಕಿ ಸಲಹುತ್ತಾಳೆ. ನೀಲ್ ಎನ್ನುವ ಪುಟ್ಟ ಮಗು ತಾಯಿಯನ್ನು ಅರಿತು ತಾಯಿಯ ಬಾಳಿಗೆ ನಗುವಿನ ಚಿಲುಮೆಯಾಗಿ ಬಾಳುತ್ತಾನೆ. ಬೆಳೆಯುತ್ತಾನೆ.
ಎದ್ದು ನಿಲ್ಲದೆ ಇದ್ರು ಮುಂದೆ ಬಂದಳು :
ಬದುಕಿನೊಂದಿಗೆ ಹೋರಾಟ ಮಾಡಿದ ಮುನಿಭಾ ಮಜಾರಿ ಪೈಟಿಂಗ್ ಗಳ ಹಲವಾರು ಪ್ರದರ್ಶನವನ್ನು ಏರ್ಪಡಿಸುತ್ತಾಳೆ.2014 ರ ನವೆಂಬರ್ ನಲ್ಲಿ ಇಸ್ಲಾಮಬಾದ್ ನಲ್ಲಿ ನಡೆದ ಟೆಡ್ ಎಕ್ಸ್ ಕಾರ್ಯಕ್ರಮದಲ್ಲಿ ನೀಡಿದ ಮಾತು ದೇಶ-ವಿದೇಶಗಳಲ್ಲಿ ಜನರ ಮನಸ್ಸು ಗೆದ್ದು ಸ್ಪೂರ್ತಿದಾಯಕವಾಗುತ್ತದೆ.
2015 ರ ಬಿಬಿಸಿಯ 100 ಧೈರ್ಯವಂತ ಮಹಿಳೆಯರ ಪಟ್ಟಿಯಲ್ಲಿ ಮುನಿಭಾ ಒಬ್ಬರಾಗಿದ್ದಾರೆ. 2017 ರಲ್ಲಿ ಮಲೇಷ್ಯಾ ವಿಕಾನ್ ನಲ್ಲಿ ಪ್ರೇರಣೆ ನೀಡುವ ಮಾತು,ಅದೇ ವರ್ಷದಲ್ಲಿ ದುಬೈಯಲ್ಲಿ ವಿಕಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಸ್ಪೂರ್ತಿದಾಯಕವಾಗುವ ರೀತಿಯಲ್ಲಿ ಬದುಕಿನ ಹೋರಾಟವನ್ನು ಹಂಚಿಕೊಳ್ಳುತ್ತಾರೆ.
ಸಮಾಜ ಸೇವೆಯಲ್ಲಿ ತೃಪ್ತಿ:
ಮುನಿಭಾ ಮಜಾರಿಯನ್ನು ಪಾಕಿಸ್ತಾನದ ‘ಐರನ್ ಲೇಡಿ’ ಎಂದು ಕರೆಯಲಾಗುತ್ತದೆ. ವಿಶ್ವ ಸಂಸ್ಥೆಯ ಮಹಿಳಾ ಸಂಘಟನೆಯ ಪಾಕಿಸ್ತಾನದ ರಾಯಭಾರಿಯಾಗಿರುವ ಮುನಿಭಾ,ಸಾಮಾಜಿಕ ಕಾರ್ಯಕರ್ತೆಯಾಗಿಯೂ ಹತ್ತು ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ. ಅಫ್ಘಾನ್ ಹಾಗೂ ಸೋಮಾಲಿಯ ನಿರಾಶ್ರಿತರಿಗೆ ತನ್ನ ಪೈಟಿಂಗ್ ಗಳನ್ನು ಮಾರಿ ಬಂದ ಲಾಭದಿಂದ ವಿಶ್ವಸಂಸ್ಥೆಯ ಮುಖಾಂತರ ನೀಡುವುದರ ಮೂಲಕ ನಿರಾಶ್ರಿತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಲಿಂಗ ತಾರತಮ್ಯದ ವಿರುದ್ಧ ಧ್ವನಿ ಏರಿಸಿ ಅನ್ಯಾಯಕ್ಕೆ ಒಳಗಾದ ಜನಾಂಗದ ಜೊತೆ ನಿಂತಿದ್ದಾರೆ.ಮಕ್ಕಳ ಅಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ ವಿಶ್ವಸಂಸ್ಥೆಯ ಜೊತೆಗೆ ಸಹಾಯಕರಾಗಿ ಇಳಿದ್ದಿದ್ದಾರೆ.
ವೀಲ್ ಚೇರ್ ನಲ್ಲೇ ಕೂತು ಬಣ್ಣದ ಜಗತ್ತು ಕಂಡಳು :
ಎದ್ದು ನಿಲ್ಲದೆ ಇದ್ರು,ಎಲ್ಲವನ್ನೂ ಕೂತುಕೊಂಡೆ ಸಾಧಿಸಿದ ಮುನಿಭಾ ಟೋನಿ & ಗೈ ಎನ್ನುವ ಜಾಹೀರಾತು ಸಂಸ್ಥೆಯ ಉತ್ಪನ್ನಗಳಿಗೆ ಪ್ರಚಾರಕಿಯಾಗಿ ಪಾಕಿಸ್ತಾನದ ಮೊದಲ ವೀಲ್ ಚೇರ್ ಮಾಡೆಲ್ ಎನ್ನುವ ಗರಿಕೆಯನ್ನು ಪಡೆದುಕೊಂಡಳು.ಇಷ್ಟೆ ಅಲ್ಲದೆ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಗೆ ನಿರೂಪಕಳಾಗಿ ಮಿಂಚುತ್ತಾಳೆ.ಹಾಡುಗಳನ್ನು ಬರೆಯುತ್ತಾರೆ, ತಾವೇ ಹಾಡುತ್ತಾರೆ.
ಮುನಿಭಾ ಮಜಾರಿ ಇವತ್ತಿಗೂ ವೀಲ್ ಚೇರ್ ನಲ್ಲಿ ಕೂತು ಜಗತ್ತಿನ ನಾನಾ ಭಾಗಕ್ಕೆ ಹೋಗಿ ಸಾವಿರಾರು ಜನರ ಮುಂದೆ ಧೈರ್ಯವಾಗಿ ಮಾತನಾಡುತ್ತಾರೆ, ಇನ್ನೊಬ್ಬರಿಗೆ ಧೈರ್ಯ ತುಂಬುತ್ತಾರೆ,ಕುಗ್ಗಿದ ಜನರಿಗೆ ಸ್ಪೂರ್ತಿಯ ಚೆಲುಮೆಯಾಗುತ್ತಾರೆ..
ಕೊರತೆಗಳನ್ನು ಹೇಳುತ್ತಾ ಕೂರುವ ಬದಲು ಅದನ್ನು ನೀಗಿಸುವ ಒಂದು ಪ್ರಯತ್ನ ನಮ್ಮದಾಗ ಬೇಕು.ಆಗ ನಮ್ಮಲ್ಲೂ ಇಂಥ ನೂರಾರು ಮುನಿಭಾ ಹುಟ್ಟಬಹುದು.
-ಸುಹಾನ್ ಶೇಕ್