ನವದೆಹಲಿ:ಇಬ್ಬರು ಸಾಧ್ವಿಯರ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲುಶಿಕ್ಷೆಗೆ ಗುರಿಯಾಗಿ, ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳ ಹೊರಬೀಳತೊಡಗಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೈದೀಪ್ ಸಿಂಗ್ ಅವರು, ಗುರ್ಮೀತ್ ಸಿಂಗ್ ಗೆ 20 ವರ್ಷ ಜೈಲುಶಿಕ್ಷೆ, 30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ ಸಂದರ್ಭದಲ್ಲಿ ಡೇರಾ ಬಾಬಾ ಕುಸಿದು ಬಿದ್ದು, ಅಳತೊಡಗಿದ್ದ. ನಾನು ಬದುಕಲು ಇಚ್ಚಿಸುವುದಿಲ್ಲ, ನನ್ನ ನೇಣಿಗೇರಿಸಿ ಎಂದು ಅಲವತ್ತುಕೊಂಡಿದ್ದ.
ಏತನ್ಮಧ್ಯೆ ಸುನಾರಿಯ ಜೈಲಿನಲ್ಲಿ ಕಳೆದ 9 ತಿಂಗಳು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಶುಕ್ರವಾರ ಹೊರಬಂದಿರುವ ದಲಿತ ಮುಖಂಡ ಕಿರಾದ್ ಪತ್ರಕರ್ತರ ಜೊತೆ ಮಾತನಾಡುತ್ತ ಡೇರಾ ಬಾಬಾನ ಜೈಲಿನೊಳಗಿನ ದಿನಗಳ ವಿವರವನ್ನು ಬಹಿರಂಗಗೊಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ನಾನೇನು ತಪ್ಪು ಮಾಡಿದ್ದೇನೆ ಅಂತ ದೇವರು ನನಗೆ ಈ ಶಿಕ್ಷೆ ನೀಡಿದ್ದಾನೆ ಎಂದು ದಿನಂಪ್ರತಿ ಮಕ್ಕಳಂತೆ ಗೋಳಾಡುತ್ತಿದ್ದಾನಂತೆ. ಆಗಸ್ಟ್ 25ರಂದು ರಾತ್ರಿ ಗುರ್ಮೀತ್ ಏನನ್ನೂ ತಿಂದಿರಲಿಲ್ಲವಂತೆ. ರಾತ್ರಿ ನೆಲದ ಮಲಗಿ ತನ್ನ ವಿಧಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಎಂದು ವರದಿ ವಿವರಿಸಿದೆ.
ಕೇವಲ ಬಿಸ್ಲೇರಿ ನೀರನ್ನು ಕೇಳಿ ಕುಡಿದಿದ್ದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಳಿಕ ಸ್ವಲ್ಪ ಹಾಲು, ಟೀ, ಬಿಸ್ಕೆಟ್ ತಿಂದಿರುವುದಾಗಿ ಕಿರಾದ್ ತಿಳಿಸಿದ್ದಾರೆ. ಗುರ್ಮೀತ್ ಜೀವಕ್ಕೆ ಅಪಾಯ ಇರುವುದರಿಂದ ಗುರ್ಮೀತ್ ನನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಿರುವುದಾಗಿ ಹೇಳಿದರು.