ಹುಬ್ಬಳ್ಳಿ: ಸರಕಾರ ಹಾಗೂ ಆರೋಗ್ಯ ಸಚಿವರ ಪ್ರತಿಷ್ಠೆ ಮತ್ತು ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಪ್ರತಿಭಟನಾನಿರತ ವೈದ್ಯರನ್ನು ಕರೆದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ಮಂಡನೆ ವಿಚಾರದಲ್ಲಿ ಆರೋಗ್ಯ ಸಚಿವರು ಹಾಗೂ ಸರಕಾರ ಯಾವ ಕಾರಣಕ್ಕಾಗಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಖಾಸಗಿ ವೈದ್ಯರ ಮುಷ್ಕರದಿಂದ ತುರ್ತು ಸೇವೆ ದೊರೆಯದೆ ಅಮಾಯಕರು ಬಲಿಯಾಗುತ್ತಿದ್ದಾರೆ.
ವೈದ್ಯರ ಮುಷ್ಕರ ಮುಂದುವರಿದರೆ ಇನ್ನಷ್ಟು ಸಾವು-ನೋವುಗಳ ಸಂಖ್ಯೆ ಹೆಚ್ಚಲಿದೆ. ಕೂಡಲೇ ಮುಖ್ಯಮಂತ್ರಿಗಳು ವೈದ್ಯರನ್ನು ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಬೇಕಾಗಿದೆ. ಕೆಲ ಕಾರ್ಪೋರೇಟ್ ಆಸ್ಪತ್ರೆಗಳು ಜನ ಸಾಮಾನ್ಯರನ್ನು ಸುಲಿಯುವ ಕೆಲಸ ಮಾಡುತ್ತಿವೆ.
ಒಂದಿಷ್ಟು ವೈದ್ಯರು ಮಾಡುವ ತಪ್ಪಿನಿಂದ ಇಡೀ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.80ರಷ್ಟು ಖಾಸಗಿ ವೈದ್ಯರ ಮೇಲೆ ಅವಲಂಬನೆಯಾಗಿರುವುದರ ಪರಿಣಾಮ ವೈದ್ಯರ ಮುಷ್ಕರದಿಂದ ತುರ್ತು ಸೇವೆಗೆ ಪರದಾಡುವಂತಾಗಿದೆ.
ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಾರೆ ಎಂಬುವುದು ಸರಕಾರಕ್ಕೆ ಮುಂಚಿತವಾಗಿಯೇ ಗೊತ್ತಿತ್ತು. ಆದರೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸದೆ ಏಕಾಏಕಿ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವುದು ಬೇಜವಾಬ್ದಾರಿ ಆಡಳಿತಕ್ಕೆ ಉದಾಹರಣೆ. ಈ ಮಸೂದೆ ಮಂಡನೆಯಾಗುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ.
ಮಸೂದೆ ಮಂಡನೆಯಾಗುವುದರಿಂದ ದೊಡ್ಡ ಬದಲಾವಣೆ ಆಗುತ್ತದೆ ಎಂಬ ನಂಬಿಕೆ ನನಗಿಲ್ಲ. ಒಬ್ಬ ವ್ಯಕ್ತಿಗಾಗಿ ಎಲ್ಲರೂ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆಡಳಿತ ಪಕ್ಷದ ಶಾಸಕರು ನಮ್ಮ ಮುಂದೆ ನೋವು ತೋಡಿಕೊಂಡಿದ್ದಾರೆ. ಕೂಡಲೇ ಸರಕಾರ ಪ್ರತಿಷ್ಠೆಯನ್ನು ಬಿಟ್ಟು ರಾಜ್ಯ ಜನತೆಯ ಹಿತದೃಷ್ಟಿಯಿಂದ ಪ್ರತಿಭಟನಾನಿರತ ವೈದ್ಯರನ್ನು ಕರೆದು ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.