Advertisement

ಒಳ ಮೀಸಲಾತಿ: ಕಷ್ಟವಾದರೂ ಜಾರಿಗೆ ಯೋಗ್ಯ

07:30 AM Mar 16, 2018 | |

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆಯೋಗ ನಿಗದಿಪಡಿಸಿದೆ. ಈ ವರದಿಯನ್ನು ಅಂಗೀಕರಿಸಿ ಮುಂದಿನ ಕ್ರಮಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ನ್ಯಾ. ಎ.ಜೆ ಸದಾಶಿವ ಆಯೋಗ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ.

Advertisement

ಮೀಸಲಾತಿ ಇದೆ. ಆದರೆ ಶೇ. 15ರಷ್ಟಿರುವ ಮೀಸಲಾತಿ ಗುಂಪಿನ ಜೊತೆ ತಾನು ಸ್ಪರ್ಧಿಸಲಾರೆ. ತನಗೇ ಪ್ರತ್ಯೇಕ ಮೀಸಲಾತಿ ಬೇಕೆನ್ನುವ ಕೂಗು. ಈಗಿರುವ ಮೀಸಲಾತಿ ವ್ಯವಸ್ಥೆಯಲ್ಲಿ ತನಗೆ ಸಿಗಬೇಕಾದ ಪಾಲು ಸಿಕ್ಕಿಲ್ಲ ಎಂಬ ಆಕ್ರೋಶ. ಇದಕ್ಕಾಗಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಎರಡು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಈ ವರ್ಗದ ಒತ್ತಡಕ್ಕೆ ಮಣಿದು ಹನ್ನೆರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ವರದಿ ನೀಡಿ ಆರು ವರ್ಷಗಳಾಗಿದ್ದು ಅದೀಗ ಹೆಚ್ಚು ಸುದ್ದಿಯಲ್ಲಿದೆ. 

ಎರಡು ದಶಕಗಳ ಹಿಂದೆ ಆಂಧ್ರಪ್ರದೇಶ ಸರಕಾರ ಮಾಡಿದ್ದ ಪರಿಶಿಷ್ಟ ಜಾತಿಯ ವರ್ಗೀಕರಣ ಅಲ್ಲಿನ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟಿನಲ್ಲಿ ಸಂವಿಧಾನ ಬಾಹಿರ ಎನ್ನುವ ಕಾರಣಕ್ಕೆ ಜಾರಿಗೆ ಬರಲಿಲ್ಲ. ಇದು ತಿಳಿದೂ ಕರ್ನಾಟಕ ಸರಕಾರ ಇದೇ ಕ್ರಮ ಕೈಗೊಂಡಿತು. ಎಡಗೈ (ಮಾದಿಗ) ಸಂಬಂಧಿತ ಜಾತಿಗಳ ಒತ್ತಡಕ್ಕೆ ಮಣಿದು ಎಸ್‌.ಎಂ.ಕೃಷ್ಣ ಸರಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕಾರ್ಯಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿತು. ಆ ನಂತರ 2005ರಲ್ಲಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜನತಾದಳದ ಮೈತ್ರಿ ಸರಕಾರ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಿತು. ಈ ಆಯೋಗವು ಆರು ವರ್ಷಗಳ ನಂತರ ಬಿಜೆಪಿ ಆಳ್ವಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರಿಗೆ ಜೂನ್‌ 15, 2012ರಂದು ವರದಿ ಸಲ್ಲಿಸಿತು.

ನ್ಯಾ. ಸದಾಶಿವ ಆಯೋಗದ ವರದಿಯು ಆಂಧ್ರ ಸರಕಾರ ನೇಮಿಸಿದ್ದ ನ್ಯಾ. ರಾಮರಾಜು ವರದಿಯ ಪಡಿಯಚ್ಚಿನಂತಿದೆ. ನ್ಯಾಯಾಲಯಗಳಲ್ಲಿ ತಿರಸ್ಕೃತಗೊಂಡ ಮತ್ತು ಸಂವಿಧಾನ ತಿದ್ದುಪಡಿ ಮಾಡದೆ ಜಾರಿ ಮಾಡಲಾಗದ ವರದಿ ಇದು. ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರವೂ ಈ ವರದಿಯನ್ನು ಒಪ್ಪಿಕೊಳ್ಳಲಾಗದೆ ಮತ್ತು ಒಪ್ಪಿಕೊಂಡರೂ ಜಾರಿ ಮಾಡಲಾಗದ ಅಸಹಾಯಕ ಸ್ಥಿತಿಗಾಗಿ ತಿಣುಕಾಡುತ್ತಿದೆ.

ಈ ವಾಸ್ತವ ಸ್ಥಿತಿ, ಒಳಮೀಸಲಾತಿ ಹೋರಾಟಗಾರರಿಗೂ ಗೊತ್ತಿದೆ. ತಮ್ಮ ಹೋರಾಟವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡು ಹಟ ಹಿಡಿದು ಸರಕಾರದ ಕುತ್ತಿಗೆ ಮೇಲೆ ಕುಳಿತಿದ್ದಾರೆ. ವಿಧಾನಸಭೆಗೆ ಚುನಾವಣೆ ಹತ್ತಿರ ಬಂದಿರುವ ಈ ದಿನಗಳಲ್ಲಿ ಈ ವರ್ಗವನ್ನು ಸಮಾಧಾನಪಡಿಸಲು ಸರಕಾರ ಆದಿ ಜಾಂಬವ ಅಭಿವೃದ್ಧಿ ನಿಗಮ ರಚನೆ ಮತ್ತು ರಾಜ್ಯಸಭೆಗೆ ಈ ವರ್ಗಕ್ಕೆ ಸೇರಿದವರೊಬ್ಬರಿಗೆ ಪ್ರಾತಿನಿಧ್ಯ ನೀಡುವಂತಹ ಹಲವು ಕ್ರಮಗಳನ್ನು ಕೈಗೊಂಡಿದೆ. ನ್ಯಾ. ಎ.ಜೆ. ಸದಾಶಿವ ಅವರು, ಸರಕಾರಕ್ಕೆ ವರದಿ ಸಲ್ಲಿಸಿದ ಬಳಿಕ 2012ರ ಜೂನ್‌ 15ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶೇ.15ರ ಮೀಸಲಾತಿಯನ್ನು 101 ಜಾತಿಗಳಿಗೆ ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿ ರುವುದನ್ನು ವಿವರಿಸಿದ್ದರು. ಈ ಮೀಸಲಾತಿಯಲ್ಲಿ ಎಡಗೈ ಸಂಬಂಧಿತ ಜಾತಿಗಳಿಗೆ ಶೇ. 6, ಬಲಗೈ ಸಂಬಂಧಿತ ಜಾತಿಗಳಿಗೆ ಶೇ.5, ಸ್ಪಶ್ಯ ಜಾತಿಗಳಿಗೆ ಶೇ. 3 ಮತ್ತು ಇತರೆ ಪರಿಶಿಷ್ಟ ಜಾತಿಗಳಿಗೆ ಶೇ.1ನ್ನು ಹಂಚಲಾಗಿದೆ ಎಂದು ತಿಳಿಸಿದ್ದರು. ಇದಿಷ್ಟು ವಿವರದ ಮೇಲೆಯೇ ಆಯೋಗದ ವರದಿಯ ಜಾರಿಗೆ ಒತ್ತಾಯ ಮತ್ತು ವಿರೋಧ ಕೇಳಿ ಬರುತ್ತಲೇ ಇದೆ. ಹಾಗೆಯೇ ಹಲವು ವೇದಿಕೆಗಳಲ್ಲಿ ಈ ಮಾಹಿತಿಯ ಮೇಲೆ ಚರ್ಚೆ ಮತ್ತು ಸಂವಾದ ಗಿರಕಿ ಹೊಡೆಯುತ್ತಿದೆ. ಆಯೋಗದ ವರದಿಯನ್ನು ಸರಕಾರ ಅಧಿಕೃತವಾಗಿ ಬಹಿರಂಗಪಡಿಸದ ಕಾರಣ ಸಾರ್ವಜನಿಕವಾಗಿ ಇದರ ಬಗೆಗೆ ಹೆಚ್ಚಿನ ವಿವರ ತಿಳಿಯಲಾಗಿಲ್ಲ. ನ್ಯಾ. ಸದಾಶಿವ ಆಯೋಗದ ವರದಿಯ ಪೂರ್ಣ ವಿವರ ದೊರೆತಿರುವ ಪ್ರಕಾರ ಒಳ ಮೀಸಲಾತಿಗಾಗಿ ವರ್ಗೀಕರಣಕ್ಕೆ ಅವಕಾಶ ಇರುವುದಾಗಿ ಆಶಯ ವ್ಯಕ್ತಪಡಿಸಲಾಗಿದೆ. ಆಯೋಗವು ತನ್ನ ವರದಿಯಲ್ಲಿ ಆಂಧ್ರ ಸರಕಾರದ ಮನವಿಯ ಮೇರೆಗೆ ಹಿಂದಿನ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯಾದ ಉಷಾ ಮೆಹ್ರಾ ಅವರನ್ನು ನೇಮಕ ಮಾಡಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲದ ಕಾರಣ ಮುಂದೇನು ಮಾಡಬೇಕೆನ್ನುವ ಬಗೆಗೆ ಅಧ್ಯಯನ ಮಾಡಿ ಸೂಕ್ತ ಸಲಹೆಗಳನ್ನು ನೀಡಬೇಕೆಂದು ಆಯೋಗಕ್ಕೆ ತಿಳಿಸಲಾಗಿತ್ತು. ಈ ಪ್ರಕಾರ ನ್ಯಾ. ಉಷಾ ಮೆಹ್ರಾ ಅವರು ಸಲ್ಲಿಸಿರುವ ವರದಿಯು ವರ್ಗೀಕರಣಕ್ಕೆ ಕೈಗೊಳ್ಳಬಹುದಾದ ಸಂವಿಧಾನ ತಿದ್ದುಪಡಿಯ ಕ್ರಮಗಳನ್ನು ಸೂಚಿಸಿರುವುದಾಗಿ ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಹೇಳಲಾಗಿದೆ. ಆದರೆ ಕೇಂದ್ರ ಸರಕಾರವು ಈ ವರದಿ ಬಗೆಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲದಿರುವುದರಿಂದ ಆಂಧ್ರ ಮತ್ತು ಕರ್ನಾಟಕದಲ್ಲಿ ಈ ವರ್ಗೀಕರಣ ಬೇಡಿಕೆಯ ಹೋರಾಟವನ್ನು ಜೀವಂತವಾಗಿ ಇಟ್ಟಂತಾಗಿದೆ. ವರ್ಗೀಕರಣ ವರದಿಯ ಜಾರಿಗೆ ಹತ್ತಾರು ಕ್ರಮ ಕೈಗೊಂಡು ಕೈ ಸುಟ್ಟುಕೊಂಡಿರುವ ಆಂಧ್ರ ಸರಕಾರವಂತೂ ಇತ್ತೀಚಿನ ವರ್ಷಗಳಲ್ಲಿ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿ ಕೈಚೆಲ್ಲಿ ಕುಳಿತಿದೆ. ಆಂಧ್ರ ಪ್ರದೇಶ ಸರಕಾರದ ವರ್ಗೀಕರಣ ಕ್ರಮಕ್ಕೆ ನ್ಯಾಯಾಲಯಗಳಲ್ಲಿ ಸೋಲುಂಟಾದರೂ, ರಾಜ್ಯದ ನ್ಯಾ. ಸದಾಶಿವ ಆಯೋಗವು ತನ್ನ ಕಾರ್ಯವನ್ನು ನಿರ್ವಹಿಸಲು ಬೇಕಾದ ಕರಾರುವಕ್ಕಾದ ಮಾಹಿತಿಗಾಗಿ ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಜನರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದೆ. ಸಮೀಕ್ಷೆ ನಡೆಸುವ ಹಿನ್ನೆಲೆಯಲ್ಲಿ 25.11.2005ರ ಸಭೆಗೆ ವಿಧಾನ ಮಂಡಲದಲ್ಲಿ ಇರುವ ಪರಿಶಿಷ್ಟ ಜಾತಿಯನ್ನು ಪ್ರತಿನಿಧಿಸುವ ಎಲ್ಲ ಶಾಸಕರಿಗೆ ಆಮಂತ್ರಣ ಕಳುಹಿಸಲಾಗಿತ್ತು.

Advertisement

ಆದರೆ ಈ ಸಭೆಗೆ ಬಂದವರು ಎಚ್‌. ಆಂಜನೇಯ, ಜಲಜಾ ನಾಯ್ಕ, ಪ್ರಕಾಶ್‌ ರಾಥೋಡ್‌ ಮತ್ತು ಮಲ್ಲಾಜಮ್ಮ ಮಾತ್ರ ಎಂದು ಆಯೋಗವು ಪರಿಶಿಷ್ಟ ಜಾತಿಯ ಪ್ರತಿನಿಧಿಗಳ ನಿರಾಸಕ್ತಿಯ ಬಗೆಗೆ ವಿಷಾದ‌ ವ್ಯಕ್ತಪಡಿಸಿದೆ. ಸಮೀಕ್ಷೆ ಕಾರ್ಯವನ್ನು ನಡೆಸುವುದಕ್ಕಾಗಿ 03.07.2006ರಂದು ಸರಕಾರದ ಮುಖ್ಯಕಾರ್ಯದರ್ಶಿ ಅವರ ಕೊಠಡಿಯಲ್ಲಿ ಹಣಕಾಸು, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಗಳ ಪ್ರಿನ್ಸಿಪಲ್‌ ಕಾರ್ಯದರ್ಶಿಗಳು ಮತ್ತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧಿಕಾರಿಯ ಸಭೆಯನ್ನೂ ನಡೆಸಲಾಯಿತು. ಸಮೀಕ್ಷೆಯ ಕಾರ್ಯವನ್ನು ಮುಂದುವರಿಸಲೇಬೇಕಾಗಿದ್ದರಿಂದ ಆಯೋಗ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾಮಾಜಿಕ ಕಾರ್ಯ ಕರ್ತರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದಿರುವಾಗಿ ವರದಿಯಲ್ಲಿ ಹೇಳಲಾಗಿದೆ. ಆಯೋಗವು ಎಲ್ಲ ಜಿಲ್ಲಾಧಿಕಾರಿಗಳ ಸಹಕಾರದೊಡನೆ 25.05.2006ರಿಂದ 11.07.2007 ಅವಧಿಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ನಾಯಕರಿಂದ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಿಸಿರುವುದಾಗಿ ಹೇಳಿಕೊಂಡಿದೆ. ಈ ಮಾಹಿತಿ ಜೊತೆಗೆ ಹಂಪಿ, ಗುಲ್ಬರ್ಗ, ಕರ್ನಾಟಕ, ಬೆಂಗಳೂರು, ಮಂಗಳೂರು ಮತ್ತು ಕುವೆಂಪು ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಮತ್ತು ಸಂಶೋಧನಾ ವಿದ್ಯಾರ್ಥಿ ಗಳಿಂದಲೂ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಿಸಲಾಗಿದೆ.

ಸ್ಪೃಶ್ಯ ಜಾತಿಗಳನ್ನುಇ ಕೈಬಿಡಲು ಆಗ್ರಹ
 ಈ ಎಲ್ಲಾ ಸಭೆಗಳಲ್ಲಿ ಕೇಳಿಬಂದ ಪ್ರಮುಖ ಅಂಶ ಎಂದರೆ: ಪರಿಶಿಷ್ಟ ಜಾತಿಯ ವರ್ಗೀಕರಣದ ಪರವಾದ ಬೆಂಬಲ. ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿರುವ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳಿಗೆ ಹೆಚ್ಚಿನ ಮೀಸಲಾತಿಯ ಅನುಕೂಲಗಳು ಸಿಗಬೇಕು. ಆದರೆ ಹೊಲೆಯ (ಬಲಗೈ) ಸಂಬಂಧಿತ ಜಾತಿಗಳ ಮತ್ತು ಲಂಬಾಣಿ, ಬೋವಿ, ಕೊರಚ ಕೊರಮ ಜಾತಿಗಳ ಪ್ರತಿನಿಧಿಗಳು ವರ್ಗೀಕರಣ ಬೇಡ ಎನ್ನುವ ಮನವಿ ಮಾಡಿದರು. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳನ್ನು ತೆಗೆಯಬೇಕು ಎನ್ನುವ ಬೇಡಿಕೆಯನ್ನು ಎಡಗೈ ಮತ್ತು ಬಲಗೈ ಜಾತಿಗಳ ಪ್ರತಿನಿಧಿಗಳು ವಾದ ಮಂಡಿಸಿದರು. ಒಂದು ವೇಳೆ ಲಂಬಾಣಿ, ಬೋವಿ, ಕೊರಚ, ಕೊರಮ ಮುಂತಾದ ಸ್ಪೃಶ್ಯ ಜಾತಿಗಳನ್ನು ಪಟ್ಟಿಯಲ್ಲೇ ಮುಂದುವರಿಸುವು ದಾದರೆ ಶೇ. 15 ಇರುವ ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಹೆಚ್ಚಿಸಬೇಕು ಎಂದು ಬಲಗೈ ಜಾತಿಯ ಪ್ರತಿನಿಧಿಗಳು ಸಲಹೆ ಮಂಡಿಸಿದ್ದಾಗಿ ಆಯೋಗ ಹೇಳಿದೆ. ಹಾಗೆಯೇ ಸ್ಪೃಶ್ಯ ಜಾತಿಗಳ ಪ್ರತಿನಿಧಿಗಳು ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡಬೇಕೆಂಬ ಒತ್ತಾಯವನ್ನು ಬಲವಾಗಿ ವಿರೋಧಿಸಿದ್ದಾಗಿ ವರದಿ ಹೇಳುತ್ತದೆ. ಆಯೋಗವು ಸಹಾ ಸ್ಪೃಶ್ಯ ಜಾತಿಗಳನ್ನು ಪಟ್ಟಿಯಿಂದ ಕೈಬಿಡಲು ಒಲವು ತೋರಿಲ್ಲ. 

ಈ ಮುಂಚೆ ಜಿಲ್ಲೆಗಳಲ್ಲಿ ನಡೆಸಿದ ಸಭೆಗಳಲ್ಲಿ ಕೇಳಿಬಂದ ಮತ್ತೂಂದು ಪ್ರಮುಖ ಅಭಿಪ್ರಾಯ: ಕೆನೆಪದರ (ಕ್ರೀಮಿ ಲೇಯರ್‌) ನೀತಿಯನ್ನು ಜಾರಿಗೆ ತರಬೇಕು ಎಂಬುದು. ಒಂದು ತಲೆಮಾರಿನವರೆಗೆ ಮಾತ್ರ ಮೀಸಲಾತಿಯನ್ನು ನೀಡಬೇಕು. ಹಾಗೆಯೇ ಐಎಎಸ್‌, ಐಪಿಎಸ್‌, ಐಎಫ್ಎಸ್‌ ಅಧಿಕಾರಿಗಳು ಮತ್ತು ಸಚಿವರುಗಳ ಮಕ್ಕಳಿಗೆ ಯಾವುದೇ ರೀತಿಯ ಮೀಸಲಾತಿ ಸೌಲಭ್ಯವನ್ನು ನೀಡಬಾರದೆಂಬುದು. 

ಆಯೋಗವು ತನ್ನ ಈ ಕಾರ್ಯದಲ್ಲಿ ಸಲಹೆ ಸಹಕಾರ ನೀಡುವಂತೆ ಪದೇ ಪದೆ ಮನವಿ ಮಾಡಿದರೂ, ದಲಿತ ವರ್ಗದ ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ ಎಂದು ಆಯೋಗ ವಿಷಾದ ವ್ಯಕ್ತಪಡಿಸಿರುವುದು ವಿಶೇಷ.

 ಕೆನೆಪದರ ನೀತಿ ಜಾರಿಗೆ ಸಲಹೆ
ಭಾರತೀಯ ಜನಗಣತಿ ರಿಜಿಸ್ಟ್ರಾರ್‌ ಅವರ ಪ್ರಕಾರ 2011ರಲ್ಲಿ ನಡೆಸಿದ ಜನಗಣತಿಯಂತೆ ಕರ್ನಾಟಕದ ಒಟ್ಟು ಜನಸಂಖ್ಯೆ 6,11,30,704. ಈ ಜನಗಣತಿಯಂತೆ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 96,66,104. ಈ ಒಟ್ಟು ಮಂದಿಯಲ್ಲಿÉ ಶೇ.23.61 ಮಂದಿ ನಗರಗಳಲ್ಲಿ ಮತ್ತು ಶೇ.76.39 ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಈ ಜನಗಣತಿಯಲ್ಲಿ ಕಂಡು ಬಂದ ವಿಶೇಷ‌ ಎಂದರೆ ಪರಿಶಿಷ್ಟ ಜಾತಿಗೆ ಸೇರಿದ್ದರೂ, ಸುಮಾರು 6,02,320 ಮಂದಿ ತಾವು ಯಾವ ಜಾತಿಗೆ ಸೇರಿದವರು ಎಂಬ ವಿವರ ನೀಡಲು ನಿರಾಕರಿಸಿರುವುದು. ನ್ಯಾ. ಸದಾಶಿವ ಆಯೋಗವು ನಡೆಸಿರುವ ಜಾತಿ ಸಮೀಕ್ಷೆಯ ಬಗೆಗೆ ಹಲವು ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯ ಬಡಾವಣೆಗಳು ಪ್ರತ್ಯೇಕ ವಾಗಿದ್ದು, ಅಲ್ಲಿ ಸಮೀಕ್ಷೆ ನಡೆಸುವುದು ಸುಲಭ. ಆದರೆ ಬೆಂಗಳೂರು ಮುಂತಾದ ನಗರಗಳಲ್ಲಿ ಪರಿಶಿಷ್ಟ ಜಾತಿಯ ಜನರೂ ಇತರೆ ಜಾತಿಗಳ ಜನರು ವಾಸಿಸುವ ಬಡಾವಣೆಗಳಲ್ಲಿ ಸ್ವಂತ ಇಲ್ಲವೇ ಬಾಡಿಗೆ ಮನೆಗಳಲ್ಲಿ ವಾಸವಾಗಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಪರಿಶಿಷ್ಟ ಜಾತಿಯ ಜನರನ್ನು ಮಹಾ ನಗರಗಳಲ್ಲಿ ಹೇಗೆ ಮತ್ತು ಎಲ್ಲಿ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ ಎಂದು ಹಲವರು ಪ್ರಶ್ನೆ ಮಾಡುತ್ತಲೇ ಇರುವ ಅಂಶವನ್ನು ತಳ್ಳಿಹಾಕಲಾಗದು. ಸದಾಶಿವ ಆಯೋಗದಿಂದ ನಮ್ಮ ಸಮೀಕ್ಷೆ ನಡೆದೇ ಇಲ್ಲ ಎನ್ನುವ ವ್ಯಾಪಕ ದೂರುಗಳಿವೆ. ಹಾಗಾಗಿಯೇ ಈ ವರದಿ ಅವೈಜ್ಞಾನಿಕ‌ ಎಂಬ ಟೀಕೆ‌ಗಳು ಕೇಳಿ ಬರುತ್ತಿವೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಮುಂತಾದ ಸ್ಪಶ್ಯ ಜಾತಿಗಳನ್ನು ತೆಗೆಯಬೇಕೆಂದು ಅಸ್ಪೃಶ್ಯ ವರ್ಗದಿಂದ ಬಂದ ಜಾತಿಗಳ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಜಾತಿಗಳನ್ನು ದಿವಂಗತ ದೇವರಾಜ ಅರಸು ಕಾಲದಲ್ಲಿ ಹೇಗೆ ಸೇರಿಸಲಾಯಿತು ಎನ್ನುವ ಪ್ರಶ್ನೆಗಳಿಗೆ ಆಯೋಗದ ಈ ವರದಿ ಯಲ್ಲಿ ಉತ್ತರ ಸಿಗುತ್ತದೆ.

ಮೈಸೂರು ಪ್ರಾಂತ್ಯವು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಆಳ್ವಿಕೆಯಲ್ಲಿದ್ದಾಗ, 1921ರಲ್ಲಿ ನಿಮ್ನ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಆಗ ಆ ಪಟ್ಟಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ, ಲಂಬಾಣಿ, ಬೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಆರ್ಥಿಕವಾಗಿ ಹಿಂದುಳಿದವರೆಂದು ಗುರುತಿಸಲಾಯಿತು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆದಾಗ ಮೈಸೂರು ರಾಜ್ಯಕ್ಕೆ ಮದ್ರಾಸ್‌, ಅಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕೆಲವು ಪ್ರದೇಶಗಳು ಸೇರ್ಪಡೆಯಾದವು. ದೇಶಕ್ಕೆ ಸ್ವಾತಂತ್ರÂ ಬಂದಾಗ ಈ ಹಿಂದೆ ರಾಜ್ಯವನ್ನಾಳುತ್ತಿದ್ದ ರಾಜಪ್ರಮುಖರಿಗೆ ಪತ್ರ ಬರೆದು, ಪರಿಶಿಷ್ಟ ಜಾತಿಗಳ ವಿವರ ಕೇಳಲಾಗಿತ್ತು. ಆ ದಿನಗಳಲ್ಲಿ ಮೈಸೂರು ಪ್ರಾಂತ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಲಂಬಾಣಿ, ಬೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಿ ಅವರಿಗೆ ಮೀಸಲಾತಿ ಸವಲತ್ತುಗಳನ್ನು ನೀಡುತ್ತಿರುವುದಾಗಿ ಕೇಂದ್ರ ಸರಕಾರಕ್ಕೆ ತಿಳಿಸಲಾಗಿತ್ತು. ಅದರಂತೆ 1950ರಲ್ಲಿ ಸಿದ್ಧಪಡಿಸಿದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಈ ಸ್ಪೃಶ್ಯ ಜಾತಿಗಳೂ ಸೇರಿ ಕೊಂಡವು. “It appears in 1976 a representation was made to the State Govt. for treating these four castes also as Scheduled Castes by virtue of the provisions of The Area Restriction Removal Act. Accordingly the four castes which were treated as tribes in major portion of the part of Karnataka declared as Scheduled Castes.” 1976ರಲ್ಲಿ ಬಂದ ಪ್ರಾದೇಶಿಕ ನಿರ್ಬಂಧ ಮುಕ್ತ ಕಾಯ್ದೆಯನ್ವಯ ಈ ಪ್ರದೇಶಗಳಲ್ಲಿದ್ದ ಲಂಬಾಣಿ, ಬೋವಿ, ಕೊರಮ ಮತ್ತು ಕೊರಚ ಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಉಳಿದುಕೊಂಡವು ಎಂಬುದಾಗಿ ಆಯೋಗ ಹೇಳುತ್ತದೆ.

ನ್ಯಾ.ಸದಾಶಿವ ಆಯೋಗಕ್ಕೆ ಪೂರಕವಾಗಿ ವಿವಿಧ ಇಲಾಖೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ಎಡಗೈ ಗುಂಪಿನ (ಮಾದಿಗ ಸಂಬಂಧಿತ ಜಾತಿಗಳು) ಜನಸಂಖ್ಯೆ 32,35,517 (ಶೇ. 33.47), ಬಲಗೈ ಗುಂಪಿನ (ಹೊಲೆಯ ಸಂಬಂಧಿತ ಜಾತಿಗಳು) ಜನಸಂಖ್ಯೆ 30,93,693 (ಶೇ. 32.01), ಇತರೆ ಪರಿಶಿಷ್ಟ ಜಾತಿಗಳು 4,49,879 (ಶೇ. 465) ಮತ್ತು ಸ್ಪೃಶ್ಯ ಜಾತಿಗಳ ಜನಸಂಖ್ಯೆ 22,84,642 (ಶೇ. 23.64) ಇದೆ. 

ಜನಸಂಖ್ಯೆಯ ಈ ಆಧಾರದ ಮೇಲೆ ಆಯೋಗವು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿ ಮೀಸಲಾತಿಯ ಪ್ರಮಾಣವನ್ನು ಗೊತ್ತುಪಡಿಸಲಾಗಿದೆ. ಯಾವುದೇ ಒಂದು ವರ್ಗದ ಅಭಿವೃದ್ಧಿ ಯನ್ನು ನಿರ್ಧರಿಸಲು ಬಳಸುವ ಮುಖ್ಯ ಮಾನದಂಡ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ, ಸಾಕ್ಷರತೆ ಮತ್ತು ಶಿಕ್ಷಣ. ಈ ಮಾನದಂಡದ ಪ್ರಕಾರ ಮೊದಲ ಗುಂಪಿನ (ಎಡಗೈ) ಒಟ್ಟು ಸಾಕ್ಷರತೆ 17,63,140 (ಶೇ. 62.15), ಎರಡನೇ ಗುಂಪಿನ (ಬಲಗೈ) 17,96,867 (ಶೇ.65.16), ಮೂರನೇ ಗುಂಪಿನ ಸ್ಪೃಶ್ಯ ಜಾತಿಗಳ ಸಾಕ್ಷರತೆ 2,72,796 (ಶೇ. 68.46) ಮತ್ತು ನಾಲ್ಕನೇ ಗುಂಪು-4 ( ಇತರೆ ಪರಿಶಿಷ್ಟ ಜಾತಿಗಳು) 10,93,305 (ಶೇ.55.65). ಒಟ್ಟಾರೆ ಪರಿಶಿಷ್ಟ ಜಾತಿಯ ಸಾಕ್ಷರತೆ ಪ್ರಮಾಣವು ಶೇ. 61.55 ಎಂದು ವರದಿಯಲ್ಲಿ ಹೇಳಲಾಗಿದೆ.

ಹಾಗೆಯೇ ರಾಜ್ಯ ಸರಕಾರದ ಹುದ್ದೆಗಳನ್ನು ಪಡೆದವರಲ್ಲಿ ಗುಂಪು-1 53,857 ಮಂದಿ (ಶೇ.34.01) ಇದ್ದರೆ ಗುಂಪು-2ರಲ್ಲಿ 67,226 ಮಂದಿ (ಶೆ 42.46), ಗುಂಪು-3ರಲ್ಲಿ 3,906 ಜನರು (ಶೇ.2.47) ಮತ್ತು ಗುಂಪು-4 29,536 ಜನರು (ಶೇ.18.65) ಇದ್ದಾರೆ. ಅಂದರೆ ಈ ಎಲ್ಲಾ ಗುಂಪುಗಳ ಪೈಕಿ ಬಲಗೈ ಗುಂಪಿನವರು ಹೆಚ್ಚು ಹುದ್ದೆಗಳನ್ನು ಪಡೆದಿರುವುದು ಈ ಮಾಹಿತಿಯಿಂದ ಕಂಡು ಬರುತ್ತದೆ. ಹಾಗೆಯೇ ಕೃಷಿ ಭೂಮಿ ಹೊಂದಿರುವುದರಲ್ಲಿ ಗುಂಪು-1 ಸ್ವಂತ ಭೂಮಿ ಹೊಂದಿರು ವವರು 149,080 ಆಗಿದ್ದರೆ ಗುಂಪು-2 ರಲ್ಲಿ 175,720 ಜನರಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿರುವು ದಾಗಿ ಆಯೋಗ ಹೇಳಿದೆ. ಹೀಗೆ ಇನ್ನೂ ಹಲವು ಕ್ಷೇತ್ರಗಳ ಸಮೀಕ್ಷೆ ನಡೆಸಿದ ಮಾಹಿತಿಯನ್ನು ಗಮನಿಸಿದಾಗ ಶಿಕ್ಷಣ, ಕೃಷಿ ಮತ್ತು ಸರಕಾರಿ ಉದ್ಯೋಗ ಪಡೆದಿರುವವರಲ್ಲಿ ಗುಂಪು-1 (ಎಡಗೈ ಸಂಬಂಧಿತ ಜಾತಿಗಳು)ನವರಿಗಿಂತ ಗುಂಪು-2 (ಬಲಗೈ ಸಂಬಂಧಿತ ಜಾತಿಗಳು) ಎಡಗೈ ಗುಂಪಿನ ಜಾತಿಗಳಿಗಿಂತ ಮುಂದಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂಬುದಾಗಿ ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

ಪರಿಶಿಷ್ಟ ಜಾತಿಯ ವಿವಿಧ ಪಂಗಡಗಳಲ್ಲಿ ಹಿಂದಿನಿಂದ ನಡೆದು ಬಂದ ಜೀವನ ಕ್ರಮ, ಕುಲಕಸಬು, ವೃತ್ತಿ, ಸಾಕ್ಷರತೆ, ಶಿಕ್ಷಣ, ಲಭ್ಯವಾಗಿರುವ ಸರಕಾರಿ ಹುದ್ದೆಗಳು ಮತ್ತು ಸರಕಾರದ ಮೀಸಲಾತಿ ಹಾಗೂ ಸವಲತ್ತುಗಳ ಬಳಕೆ, ಸಮೀಕ್ಷೆಯಿಂದ ದೊರೆತ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಮುಂತಾದ ಅಂಶಗಳೆಲ್ಲವನ್ನು ಗಮನಿಸಿ ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿರುವುದಾಗಿ ಆಯೋಗ ಹೇಳಿದೆ.

ಕೊನೆಯಲ್ಲಿ ಆಯೋಗವು ಸರಕಾರಿ ಉದ್ಯೋಗಕ್ಕೆ ಸಂಬಂಧಿ ಸಿದಂತೆ, ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲೂ ಕೆನೆಪದರ (ಕ್ರೀಮಿ ಲೇಯರ್‌) ಪದ್ಧತಿಯನ್ನು ಜಾರಿ ಗೊಳಿಸಬೇಕು. ಈ ಮೀಸಲಾತಿಯನ್ನು ಕ್ಲಾಸ್‌-1, ಕ್ಲಾಸ್‌-2 ನೌಕರರ ಒಂದು ತಲೆ ಮಾರಿನ ಮಕ್ಕಳಿಗೆ ಮಾತ್ರ ಕೊಡಬೇಕು. ಕ್ಲಾಸ್‌-3 ಮತ್ತು ಅದಕ್ಕಿಂತ ಕೆಳಗಿನ ವರ್ಗದ ನೌಕರರ ಎರಡು ತಲೆ ಮಾರಿನವರೆಗೆ ಮೀಸಲಾತಿ ನೀಡಬೇಕು ಎಂದು ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ವರ್ಗಗಳಲ್ಲಿರುವ ಐಎಎಸ್‌, ಐಪಿಎಸ್‌ ಮತ್ತು ಐಎಫ್ಎಸ್‌ ಮತ್ತು ಆ ಹುದ್ದೆಗಳಿಗೆ ಸರಿ ಸಮನಾದ ಅಧಿಕಾರಿಗಳ ಮಕ್ಕಳಿಗೆ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಕೂಡದು. ಹಾಗೆಯೇ ಖಾಸಗಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಉದ್ಯೋಗ ದೊರಕಿಸಲು ಸರಕಾರ ಪ್ರಯತ್ನ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆಯೋಗ ನಿಗದಿಪಡಿಸಿದೆ. ಈ ವರದಿಯನ್ನು ಅಂಗೀಕರಿಸಿ ಮುಂದಿನ ಕ್ರಮಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ನ್ಯಾ. ಎ.ಜೆ ಸದಾಶಿವ ಆಯೋಗವು ರಾಜ್ಯ ಸರಕಾರಕ್ಕೆ ಸಲಹೆ ಮಾಡಿದೆ.

ಶಿವಾಜಿ ಗಣೇಶನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next