Advertisement

UV Fusion: ಅನಂತ ನೆನಪುಗಳು; ಎಸ್ತರ್‌ ಅನಂತಮೂರ್ತಿ

03:54 PM Sep 04, 2023 | Team Udayavani |

ಅಕ್ಕರೆಯ ಹಿರಿಜೀವ ಎಸ್ತರ್‌ ಅನಂತಮೂರ್ತಿ ಅವರನ್ನು ಅನಂತ ನೆನಪುಗಳೊಂದಿಗೆ ಆಲನಹಳ್ಳಿಯಲ್ಲಿರು ಅವರ ತೋಟದಲ್ಲಿ ಭೇಟಿಯಾಗಲು ನನಗೆ ಅವಕಾಶ ದೊರೆತದ್ದೇ ಸುದಿನ ಎಂದು ಹೇಳಬಹುದು. ಎಂಭತ್ತರ ವಯಸ್ಸಿನಲ್ಲೂ ಅವರ ಜೀವನೋತ್ಸಾಹ, ಚೈತನ್ಯವನ್ನು ಕಂಡು ನಾನು ಬೆರಗಾದೆ.

Advertisement

ಅನಂತಮೂರ್ತಿಯವರ ಆತ್ಮಕಥೆ “ಸುರಗಿ’ ಓದಿದಾಗಿನಿಂದಲೂ ನನದೊಂದು ಕುತೂಹಲ. ಅನಂತಮೂರ್ತಿಯವರ ಮಡದಿಯಾಗಿ ಎಸ್ತರ್‌ ಅವರು ಹೇಗಿದ್ದರು ಎಂದು. ಅವರೊಂದಿಗಿನ ಒಡನಾಟದಲ್ಲಿ, ಒಡನಾಡಿಯಾಗಿ ಬೆರೆತ ಕ್ಷಣಗಳನ್ನು ತಿಳಿಯಬೇಕೆಂಬ ಆಸೆ. ಆ ನಿಟ್ಟಿನಲ್ಲಿ ನಿಮ್ಮೊಂದಿಗೆ ಮಾತನಾಡಬಹುದ ಎಂದು ಕೇಳಿದ ಕೂಡಲೇ “ಅಯ್ಯೋ ಅದಕ್ಕೇನು  ಮಾತನಾಡು’ ಎಂದು ಅವರು ನಗೆ ಬೀರಿದರು. ನನಗೆ ಒಂದಷ್ಟು ಧೈರ್ಯ ತುಂಬಿತು ಆ ನಗು.

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ ಎಂಬ ಲೋಕ ಪ್ರಸಿದ್ಧ ಮಾತಿಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಅವರ ಹಸನ್ಮುಖವೇ ಉತ್ತರ.

ಅನಂತಮೂರ್ತಿಯವರ ಬರವಣಿಗೆ ಕುರಿತು ಮಾತನಾಡುತ್ತಾ ನಾನು ಇಂತಹ ಒಬ್ಬ ಜೀನಿಯಸ್‌ ಪ್ರಸಿದ್ಧ ವ್ಯಕ್ತಿಯ ಹೆಂಡತಿಯಾಗಿದ್ದೇನೆ ಎಂಬುದು ಅವರಿದ್ದಾಗ ಗೊತ್ತಾಗಲೇ ಇಲ್ಲ. ಕೆಲವೊಮ್ಮೆ ಅವರ ಪುಸ್ತಕಗಳ ಮೊದಲ ಓದುಗಳು ನಾನೇ ಆಗಿರುತ್ತಿದ್ದೆ ಎಂದು ನೆನಪಿನಾಳಕ್ಕೆ ಜಾರಿದರು ಎಸ್ತರ್‌.

ಅವರು ಓದು ಬರಹಗಳಲ್ಲಿ ಎಷ್ಟು ಮಗ್ನರಾಗಿರುತ್ತಿದ್ದರೆಂದರೆ ಎಂದು ಹೇಳುತ್ತಾ ಒಂದು ಘಟನೆಯನ್ನು ನೆನಪಿಸಿದರು. ಮನೆಯಲ್ಲಿ ಏನೋ ಗೊಂದಲ ವಿದ್ದದ್ದಕ್ಕಾಗಿ ಅನಂತಮೂರ್ತಿಯವರು ಒಂದು ವಾರ ಮನೆ ಬಿಟ್ಟು ಎಲ್ಲರನ್ನೂ ಗಾಬರಿಯಾಗುವಂತೆ ಮಾಡಿದ್ದರಂತೆ. ಎಲ್ಲ ಕಡೆ ಹುಡುಕಿ ಕಂಗಾಲಾದ ಮೇಲೆ ಒಂದು ವಾರದ ಅನಂತರ ಭಾರತೀಪುರ ಕಾದಂಬರಿಯನ್ನು ರಚಿಸಿ ಮನೆಗೆ ತೆರಳಿದ್ದರಂತೆ.

Advertisement

ಅನಂತಮೂರ್ತಿಯವರು ಮತ್ತು ಅವರ ನಿಲುವಿನ ಬಗಗೆ ಹೇಳುತ್ತಾ ಅನಂತಮೂರ್ತಿಯವರು ನೇರ ವ್ಯಕ್ತಿತ್ವದವರಾಗಿದ್ದರು. ಅವರು ಪರಂಪರೆಯನ್ನು ಧಿಕ್ಕರಿಸುವ ಮನೋಧರ್ಮದವರಾಗಿರಲಿಲ್ಲ. ಎಲ್ಲ ಹಬ್ಬಗಳನ್ನು ನಾವು ಮನೆಮಂದಿ ಬಹಳ ಸಂತೋಷವಾಗಿ ಆಚರಿಸುತ್ತಿದ್ದೇವು ಎಂದ ಅವರು, ಪತಿಯ ಕೊನೆಯ ದಿನಗಳನ್ನು ನೆನೆಯುತ್ತಾ ಉತ್ಕಟ ಜೀವನ ಪ್ರೀತಿ ಹೊಂದಿದ್ದ ಅವರು ಒಂಟಿಯಾಗಲು ಎಂದಿಗೂ ಭಯಪಟ್ಟವರಲ್ಲ ಆಪರೇಷನ್‌ ಥಿಯೇಟರ್‌ ಪ್ರವೇಶಿಸುವಾಗಲೂ ಅವರ ಕಿರುನಗೆ ಈಗಲೂ ಕಣ್ಣ ಮುಂದಿದೆ ಎಂದು ಹೇಳಿ 2014 ಆಗಸ್ಟ್‌ 22ಸಂಜೆ 6.30ಕ್ಕೆ ಅವರು ತಮ್ಮೊಂದಿಗೆ ಬಾಹ್ಯವಾಗಿ ಇಲ್ಲವಾದದ್ದನ್ನು ನೆನೆದು ಕ್ಷಣಕಾಲ ಎಸ್ತರ್‌ ದುಃಖೀತರಾದರು.

ಅನಂತಮೂರ್ತಿಯವರ ಅಪೇಕ್ಷೆಯಂತೆ ಆಲನಹಳ್ಳಿ ತೋಟದ ಬಿಲ್ವಪತ್ರೆ ಗಿಡದ ಬುಡಕ್ಕೆ ಅವರ ಚಿತಾಭಸ್ಮವನ್ನು ಹಾಕಲಾಯಿತು ಎಂದು ಹೇಳುತ್ತಾ ಗಿಡ ಮರವಾದದ್ದನ್ನು ನೋಡುತ್ತಾ ನಿಟ್ಟುಸಿರು ಬಿಟ್ಟು ಮೌನವಾದರು. ಎಲ್ಲರನ್ನೂ ಬೆನ್ನುತಟ್ಟಿ ಮಾತನಾಡಿಸುವ ಅವರ ವರ್ಚಸ್ಸು ಎಂದಿಗೂ ಮಸುಕಾದದ್ದೇ ಇಲ್ಲ ಎಂದವರ ಮಾತುಗಳಲ್ಲಿ ಗಂಡನ ಬಗ್ಗೆ ಇದ್ದ ಹೆಮ್ಮೆ ಕಾಣಿಸುತ್ತಿತ್ತು.

ಅನಂತಮೂರ್ತಿ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ, ಸಾಹಿತ್ಯ ಕೃಷಿಗೆ, ತೊಂದರೆಯಾಗದಂತೆ ಕುಟುಂಬವನ್ನು ಮುನ್ನಡೆಸಿ, ಅವರ ಜೀವನ ಪ್ರೀತಿಯ ಚೇತನದ ಒಂದು ಭಾಗವಾಗಿ ಸದಾ ಏಳು ಬೀಳುಗಳಲ್ಲಿ ಅವರೊಡನಿದ್ದು,  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಎಂಬ ಮಾತಿಗೆ ನಿದರ್ಶನದಂತಿರುವ ಎಸ್ತರ್‌ ಅವರಿಗೆ ಪ್ರೀತಿಯ ಶರಣು.

-ಲಾವಣ್ಯ ಎನ್‌.

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next