Advertisement

ಹಸಿರು ವಲಯದಲ್ಲೂ ಸೋಂಕು ದೃಢ!

10:59 AM May 06, 2020 | mahesh |

ಬೆಂಗಳೂರು: ನಗರದ ಹಸಿರು ವಲಯಗಳಲ್ಲಿ ಸೋಮವಾರದಿಂದ ತುಸು ಸಡಿಲಿಕೆ ನೀಡಿದ ಬೆನ್ನಲ್ಲೇ ಹಸಿರು ವಲಯದಲ್ಲೂ ಕೊರೊನಾ ಸೋಂಕು ಪ್ರಕರಣಗಳು ದೃಢಪಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಬಿಟಿಎಂ ಲೇಔಟ್‌ ವಾರ್ಡ್‌ನ ಇಕೋಬಾ ವಾರ್ಡ್‌ನಲ್ಲಿ ವಾಸವಾಗಿರುವ 30 ವರ್ಷದ ಗರ್ಭಿಣಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಮಹಿಳೆ ಕೋವಿಡ್ ಇರುವ ಪ್ರದೇಶದಲ್ಲಿ ಓಡಾಡಿರುವುದಾಗಲಿ ಅಥವಾ ಸೋಂಕು ದೃಢಪಟ್ಟವರ ಸಂಪರ್ಕದಲ್ಲಾಗಲೀ ಇರಲಿಲ್ಲ. ಅಲ್ಲದೆ, ಲಾಕ್‌ಡೌನ್‌ ಹಿನ್ನೆಲೆ ಮನೆಯಿಂದ ಹೊರಗೆ ತೆರಳಿರಲಿಲ್ಲ ಹಾಗೂ ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಕೋವಿಡ್  ಸೋಂಕು ಹೇಗೆ ತಗುಲಿದೆ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ.

Advertisement

ಸೋಂಕು ದೃಢಪಟ್ಟ ಮಹಿಳೆಯು ಗರ್ಭಿಣಿಯರು ಸಾಮಾನ್ಯವಾಗಿ ಎಚ್‌ಐವಿ ಪರೀಕ್ಷೆಗೆ ಒಳಪಡುವ ರೀತಿಯಲ್ಲೇ ಕೊರೊನಾ ಸೋಂಕು ಪರೀಕ್ಷೆಗೂ ಒಳಗಾಗಿದ್ದು, ಈ ವೇಳೆ ಕೋವಿಡ್ ದೃಢಪಟ್ಟಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಬಿಎಂಪಿಯ ಪೂರ್ವ ವಿಭಾಗದ ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌ ಅವರು, ಗರ್ಭಿಣಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ವರದಿಯ ಬಗ್ಗೆ ಗೊಂದಲ ಹಾಗೂ ಅನುಮಾನಗಳಿದ್ದು, ಮತ್ತೂಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಹಿಳೆಯ ಸಂಬಂಧಿಕರು ಹಾಗೂ ಪ್ರಾಥಮಿಕ
ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೊಂಗಸಂದ್ರದಲ್ಲಿ ಮತ್ತೂಂದು ಪ್ರಕರಣ: ಬಿಹಾರ ಮೂಲದ ಕೂಲಿ ಕಾರ್ಮಿಕನ ಮೂಲಕ 30ಜನರಿಗೆ ಹೊಂಗಸಂದ್ರದಲ್ಲಿ ಸೋಂಕು ದೃಢಪಟ್ಟಿತ್ತು. ಈಗ ಗುಜರಿ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತೂಬ್ಬ(45) ವ್ಯಕ್ತಿಯಲ್ಲಿ ಕೋವಿಡ್ ದೃಢ ಪಟ್ಟಿದೆ. ಸೋಂಕು ದೃಢಪಟ್ಟ ವ್ಯಕ್ತಿಯು ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದ್ದು, ಇವನ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಾಗೂ ಮನೆಯವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಸುರೇಶ್‌ ತಿಳಿಸಿದ್ದಾರೆ.

ರಾತ್ರೋ ರಾತ್ರಿ ಕ್ವಾರಂಟೈನ್‌
ರಿಜೆಂಟಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಸಹಾಯಕ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ವಾಸವಾಗಿದ್ದ ಶಿವಾಜಿನಗರದ ಚಾಂದಿನಿ ಚೌಕ್‌ನ ನಿರ್ದಿಷ್ಟ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ 72ಮಂದಿಯನ್ನು ಸೋಮವಾರ ರಾತ್ರಿ ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ, ಹೋಟೆಲ್‌ನಲ್ಲಿ ಸೋಂಕಿತ ವ್ಯಕ್ತಿ ಬಟ್ಟೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇತನೊಂದಿಗೆ ಸಂಪರ್ಕದಲ್ಲಿದ್ದ 18 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇತ್ತೀಚೆಗೆ ಶಿಫಾ ಆಸ್ಪತ್ರೆಯಲ್ಲಿನ ವೈದ್ಯರಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ನರ್ಸ್‌ಗಳನ್ನು ಸಹ ರಿಜೆಂಟಾ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ನರ್ಸ್‌ಗಳ ಕ್ವಾರಂಟೈನ್‌ ಅವಧಿ (14ದಿನ) ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಪರೀಕ್ಷೆ ನಡೆಸಲಾಗಿದ್ದು, ಸಹಾಯಕ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ
ಎಂದು ಶಿವಾಜಿನಗರ ಆರೋಗ್ಯಾಧಿಕಾರಿ ಡಾ.ಶಿವೇಗೌಡ ಮಾಹಿತಿ ನೀಡಿದರು.

ಕರ್ತವ್ಯ ಹಾಜರಿಗೆ ಪ್ರಮಾಣ ಪತ್ರ ಕಡ್ಡಾಯ
ಬಿಎಂಟಿಸಿಯ ಪ್ರತಿಯೊಬ್ಬ ಸಿಬ್ಬಂದಿ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಯಿಂದ ತಪಾಸಣೆಗೊಳಪಟ್ಟು, ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆದ ನಂತರ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಫ‌ರ್ಮಾನು ಹೊರಡಿಸಲಾಗಿದೆ. ಸಾಂಕ್ರಾಮಿಕ ರೋಗ ಕೋವಿಡ್‌-19 ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸುವುದು ಅತ್ಯವಶ್ಯಕ. ಈ ಹಿನ್ನೆಲೆ ಯಲ್ಲಿ ತಪಾಸಣೆಗೊಳಪಟ್ಟು ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರ ಪಡೆಯುವುದು ಅತ್ಯಗತ್ಯ. ಹಾಗೂ ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಿತ್ಯ ಪ್ರತಿಯೊಬ್ಬ ನೌಕರರನ್ನು ಥರ್ಮಲ್‌ ಸ್ಕ್ಯಾನರ್‌ನಿಂದ ತಪಾಸಣೆ ಮಾಡಿ, ಸದೃಢ ಎಂದು ಕಂಡುಬಂದರೆ ಮಾತ್ರ ಕರ್ತವ್ಯ ನಿರ್ವಹಿಸಲು ಅನುಮತಿ
ನೀಡಬೇಕು ಎಂದು ಬಿಎಂಟಿಸಿ ಆದೇಶದಲ್ಲಿ ಸೂಚಿಸಿದೆ. ಆದರೆ, 35 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಏಕಕಾಲದಲ್ಲಿ ವೈದ್ಯಕೀಯ ಪ್ರಮಾಣಪತ್ರ ಕಷ್ಟ ಎನ್ನಲಾಗಿದೆ.

Advertisement

ಒನ್‌ ಟೈಮ್‌ ಟು ವೇ ಪಾಸ್‌
ರಾಜ್ಯ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ‘ಒನ್‌ ಟೈಮ್‌ ಒನ್‌ ಡೆ, ಒನ್‌ ವೇ ಪಾಸ್‌’ ಪಡೆದಿದ್ದು, ಅವುಗಳನ್ನು ಎರಡು ಬದಿ ( ಟು-ವೇ) ಪಾಸ್‌ ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಮೇ 2. ರಂದು ಲಾಕ್‌ಡೌನ್‌ ಸಡಿಲಿಕೆ ಮಾಡಿ ವಲಸೆ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಅವರ ಊರುಗಳಿಗೆ ತೆರಳಲು ಒಂದು ಬಾರಿ ಅವಕಾಶ ಕಲ್ಪಿಸಲು ಒನ್‌ ಟೈಮ್‌ ಒನ್‌ ಡೆ ಒನ್‌ ವೇ ಪಾಸ್‌ ನೀಡಲು ಆದೇಶಿಸಲಾಗಿತ್ತು. ಅದನ್ನು ಪರಿಷ್ಕರಿಸಿ ಮಂಗಳವಾರ ಒನ್‌ ಟೈಮ್‌ ಟು ವೆ ಪಾಸ್‌ ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಅಂತರ ಕಾಪಾಡದಿದ್ದರೆ ದಂಡ ?
ರಾಜ್ಯ ಸರ್ಕಾರದ ಆದೇಶದ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ಮೇಲೂ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದ್ದು, 200ರೂ. ದಂಡ ವಿಧಿಸಲು ಚಿಂತಿಸಿದೆ. ತುಸು ಸಡಿಲಿಕೆ ಬಳಿಕ ನಗರದಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳದೆ ಯಾರೇ ನಿಂತುಕೊಂಡರೂ, ದಂಡ ತೆರಬೇಕಾಗುತ್ತದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ
ವಿಧಿಸಲಾಗುತ್ತಿದ್ದ ದಂಡ ಮೊತ್ತವನ್ನು ಒಂದು ಸಾವಿರದಿಂದ 200ರೂ.ಗೆ ಬಿಬಿಎಂಪಿ ಇಳಿಸಿದೆ.

ಮುಖಗವಸು ಬಳಸಬಹುದು: ಸ್ಪಷ್ಟನೆ
ಮಾಸ್ಕ್ ದಂಡ ವಿಧಿಸುವ ಆದೇಶ ಜಾರಿ ಮಾಡಿದ ಮೇಲೆ ಕರವಸ್ತ್ರವನ್ನು ಬಳಸುವ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಬಿಬಿಎಂಪಿಯ ಅಧಿಕಾರಿಗಳಲ್ಲೂ ಸಾಕಷ್ಟು ಗೊಂದಲವಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಮುಖವನ್ನು ಮುಚ್ಚಿಕೊಳ್ಳುವಂತಹ ಯಾವುದೇ ಬಟ್ಟೆ, ಕರವಸ್ತ್ರವನ್ನೂ ಮಾಸ್ಕ್ ರೀತಿ ಬಳಸಬಹುದು. ಮುಖವನ್ನು  ಬಟ್ಟೆಯಿಂದ ಮುಚ್ಚಿ ಕೊಂಡರೂ ದಂಡ ವಿಧಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ಓಡಾಡುವವರಿಗೆ ಬಿಬಿಎಂಪಿಯ ಕಿರಿಯ ಹಾಗೂ ಹಿರಿಯ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ಗ‌ಳು ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ರಿಜೆಂಟಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಂಕು ದೃಢಪಟ್ಟ ಸಹಾಯಕ ಸಿಬ್ಬಂದಿಯ ಸಂಪರ್ಕದಲ್ಲಿದ್ದ 72 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರು ವಾಸವಾಗಿದ್ದ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ನಿರ್ದಿಷ್ಟ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ಗೆ ಸೇರಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಆದರೆ, ಶಿವಾಜಿನಗರವನ್ನು
ಕಂಟೈನ್ಮೆಂಟ್‌ ಝೋನ್ ಗೆ ತರುವ ಪ್ರಸ್ತಾವನೆ ಇಲ್ಲ
● ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next