Advertisement

ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್‌ವೇ ಕಾಮಗಾರಿ

01:00 AM Feb 05, 2023 | Team Udayavani |

ಮಂಗಳೂರು: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ನಾಲ್ಕು ತಿಂಗಳುಗಳ ಕಾಲ ಹಗಲಿನ ವೇಳೆ ಬಳಕೆಗೆ ಲಭ್ಯವಿರದು. ರನ್‌ವೇ ಪುನಾರಚನೆ ಕಾಮಗಾರಿಯಿಂದಾಗಿ ವಿಮಾನಗಳು ರಾತ್ರಿ ಮಾತ್ರ ಹಾರಾಟ ನಡೆಸಲಿವೆ. ಹೀಗಾಗಿ ಮಂಗಳೂರಿನಿಂದ ಇತರೆಡೆಗೆ ವಿಮಾನದಲ್ಲಿ ಪ್ರಯಾಣಿಸಬೇಕಾದವರು ಅನಿ ವಾರ್ಯವಾಗಿ ತೊಂದರೆ ಅನುಭವಿಸಲಿದ್ದಾರೆ.

Advertisement

ನಿಲ್ದಾಣದಲ್ಲಿ ಮಹತ್ವದ ರನ್‌ವೇ ಮರು ರಚನೆ (ರೀಕಾಪೆìಟಿಂಗ್‌) ಕಾಮಗಾರಿ ಜ. 27ರಿಂದ ಆರಂಭವಾಗಿದ್ದು, ಮೇ 31ರ ವರೆಗೆ ನಡೆಯಲಿದೆ. ರವಿವಾರ ಮತ್ತು ರಾಷ್ಟ್ರೀಯ ರಜಾದಿನ ಹೊರತುಪಡಿಸಿ ನಾಲ್ಕು ತಿಂಗಳುಗಳ ಕಾಲ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ರನ್‌ವೇ ಬಳಕೆಗೆ ಲಭ್ಯವಿರದು. ಇಷ್ಟು ಸುದೀರ್ಘ‌ ಅವಧಿಗೆ ವಿಮಾನ ಸೇವೆ ಹಗಲು ಲಭ್ಯವಿಲ್ಲದಿರುವುದು ಪ್ರಯಾಣಿಕರಿಗೆ ಕಷ್ಟ ತರಲಿದೆ.

ಸಾಮಾನ್ಯವಾಗಿ ಬೆಳಗ್ಗಿನಿಂದ ಸಂಜೆಯ ವರೆಗೆ ವಿಮಾನ ಪ್ರಯಾಣಿಕರಿಗೆ ಮಂಗಳೂರಿಗೆ ಆಗಮನ-ನಿರ್ಗಮನ ಕಷ್ಟವೇನಲ್ಲ. ಆದರೆ ಸದ್ಯ ವಿಮಾನ ಪ್ರಯಾಣ ಸಮಯ ಮುಂಜಾನೆ 4 ಅಥವಾ 5 ಗಂಟೆಗೆ ಇರುವುದರಿಂದ ಪ್ರಯಾಣಿಕರು ಮಧ್ಯರಾತ್ರಿಯೇ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದೆ.

ಮಂಗಳೂರಿನಿಂದ ಬೆಂಗಳೂರು, ಮುಂಬಯಿ ಅಥವಾ ಇತರ ಕಡೆಗೆ ಹೋಗಿ, ಅಲ್ಲಿಂದ ಬೇರೆ ಕಡೆಗೆ ಪ್ರಯಾಣಿಸುವ ವಿಮಾನ ಪ್ರಯಾ ಣಿಕರಿಗೆ ಇದು ಮತ್ತೊಂದುಕಿರಿಕಿರಿ. ಯಾಕೆಂದರೆ ಮಧ್ಯಾಹ್ನ ಇತರ ಏರ್‌ಪೋರ್ಟ್‌ಗೆ ತಲುಪ ಬೇಕಾದವರು ಈಗ ಮುಂಜಾನೆ ಅಥವಾ ಒಂದು ದಿನದ ಮುನ್ನವೇ ಮಂಗಳೂರಿನಿಂದ ತೆರಳಬೇಕಾಗುತ್ತದೆ.

“ಫ್ಲೈಟ್ ಡಿಲೇ’:
ದಿನವಿಡೀ ಸುಸ್ತು!
ಕಾಮಗಾರಿಯಿಂದಾಗಿ ಬೆಳಗ್ಗೆ 9.30ರ ಮೊದಲು ಮತ್ತು ಸಂಜೆ 6 ಗಂಟೆಯ ಅನಂತರ ಮಾತ್ರ ರನ್‌ವೇ ತೆರೆದಿರುತ್ತದೆ. ಒಂದು ವೇಳೆ ಈ ಗಡುವಿನ ಕೊನೆಯ ಹಂತದಲ್ಲಿ ಯಾವುದೇ ವಿಮಾನ ಆಗಮನ/ನಿರ್ಗಮನ ತಡವಾದರೆ ಪ್ರಯಾಣಿಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಎರಡು ದಿನಗಳ ಹಿಂದೆ ಬೆಳಗ್ಗೆ 9.20ಕ್ಕೆ ಮಂಗಳೂರಿನಿಂದ ಮಸ್ಕತ್‌ಗೆ ವಿಮಾನ ತೆರಳಲು ಸಿದ್ಧವಾಗಿತ್ತು. ಆ ವೇಳೆಗೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಅದನ್ನು 9.35ಕ್ಕೆ ಸರಿ ಪಡಿಸಲಾಯಿತಾದರೂ 5 ನಿಮಿಷ ಮುನ್ನ ರನ್‌ವೇ ಮುಚ್ಚುಗಡೆ ಆಗಿ ಸಂಚಾರಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ ಪ್ರಯಾಣಿಕರು ಸಂಜೆಯ ವರೆಗೆ ನಿಲ್ದಾಣದಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಒದಗಿತು. ಕೊನೆಗೆ ವಿಮಾನ ಸಂಜೆ

Advertisement

6.25ಕ್ಕೆ ಸಂಚರಿಸಿತು!
ಕೇಂದ್ರ ಗೃಹ ಸಚಿವರಿಗೂ ಅಡ್ಡಿ
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ. 11ರಂದು ಮಧ್ಯಾಹ್ನ ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಅವರು ಮಂಗಳೂರಿಗೆ ಆಗಮಿಸಲಿದ್ದರು. ಆದರೆ ರನ್‌ವೇ ಕಾಮಗಾರಿಯಿಂದಾಗಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಪುತ್ತೂರಿಗೆ ಹೆಲಿಕಾಪ್ಟರ್‌ನಲ್ಲಿ ಬರಲಿದ್ದಾರೆ. ಆದರೆ ರಾತ್ರಿ ಮಂಗಳೂರು ರನ್‌ವೇ ತೆರೆದಿರುವ ಕಾರಣ ಇಲ್ಲಿಂದಲೇ ಮರು ಪ್ರಯಾಣ ಕೈಗೊಳ್ಳಲಿದ್ದಾರೆ. ಚುನಾವಣೆ ಸನಿಹದಲ್ಲಿರುವ ಕಾರಣ ಇನ್ನೂ ಹಲವು ನಾಯಕರ ಸಂಚಾರ ಬದಲಾವಣೆಗೆ ರನ್‌ವೇ ಮುಚ್ಚುಗಡೆ ಕಾರಣವಾಗಲಿದೆ!

ಏನಿದು ಕಾಮಗಾರಿ?
2,450 ಮೀ. ಉದ್ದ ಮತ್ತು 45 ಮೀ. ಅಗಲದ ಮಂಗಳೂರಿನ ಕಾಂಕ್ರೀಟ್‌ ರನ್‌ವೇಯನ್ನು 2006ರ ಮೇ ತಿಂಗಳಿನಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಎರಡು ರನ್‌ವೇಗಳಿರುವ ಕರ್ನಾಟಕದ ಮೊದಲ ಹಾಗೂ ಕಾಂಕ್ರೀಟ್‌ ರನ್‌ವೇ ಹೊಂದಿರುವ ಮೊದಲ ನಿಲ್ದಾಣವಿದು. ರನ್‌ವೇಯನ್ನು ಅದರ ಸೂಕ್ಷ್ಮ ಮತ್ತು ಮ್ಯಾಕ್ರೋ ವಿನ್ಯಾಸವನ್ನು ಸುಧಾರಿಸಲು ಪುನಾರಚನೆ ಮಾಡಲಾಗುತ್ತಿದ್ದು, ಕಾಮಗಾರಿ ರನ್‌ವೇ ಸೆಂಟರ್‌ಲೈನ್‌ ದೀಪಗಳ ರಚನೆಯನ್ನೂ ಒಳಗೊಂಡಿದೆ. ಪ್ರತೀ ದಿನ ಹಗಲಿನಲ್ಲಿ ಕೆಲವೇ ಮೀಟರ್‌ ಕಾಮಗಾರಿ ನಡೆಸಿ ರಾತ್ರಿ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರಾತ್ರಿ ಮತ್ತು ಕಡಿಮೆ ಗೋಚರ ಪರಿಸ್ಥಿತಿಗಳಲ್ಲಿ ವಿಮಾನ ಉಡ್ಡಯನ-ಅವತರಣಗಳಿಗೆ ಸಹಾಯವಾಗಲಿದೆ.

ರನ್‌ವೇ ಸುರಕ್ಷೆಯನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ರೀಕಾಪೆìಟಿಂಗ್‌ ಕಾಮಗಾರಿ ಅಗತ್ಯವಾಗಿ ನಡೆಯಬೇಕು. ಆದರೆ ಈ ವೇಳೆ ಪ್ರಯಾಣಿಕರಿಗೆ ಅನನುಕೂಲ ಆಗದಂತೆ ಕಾಮಗಾರಿ ತುರ್ತಾಗಿ ನಡೆಸುವುದಕ್ಕಾಗಿ ಅಥವಾ ರನ್‌ವೇ ಮುಚ್ಚುಗಡೆ ಅವಧಿ ಕಡಿಮೆ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಮಂಗಳೂರು-ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಿಸಿದರೆ ಉತ್ತಮ.
– ಗಣೇಶ್‌ ಕಾಮತ್‌,
ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಂಗಳೂರು

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next