ಹರಾರೆ: ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಮೊದಲ ಅಂತಾರಾಷ್ಟ್ರೀಯ ಸರಣಿಗೆ ಭಾರತ ಸಜ್ಜಾಗಿದೆ. ಜಿಂಬಾಬ್ವೆ ವಿರುದ್ದದ ಐದು ಪಂದ್ಯಗಳ ಟಿ20 ಸರಣಿ ಶನಿವಾರ ಹರಾರೆಯಲ್ಲಿ ಆರಂಭವಾಗಲಿದೆ. ವಿಶೇಷವೆಂದರೆ ಟಿ20 ವಿಶ್ವಕಪ್ ನಲ್ಲಿ ಆಡಿದ ಒಬ್ಬನೇ ಒಬ್ಬ ಆಟಗಾರ ಜಿಂಬಾಬ್ವೆ ವಿರುದ್ದದ ಮೊದಲೆರಡು ಪಂದ್ಯಗಳಲ್ಲಿ ಆಡುವುದಿಲ್ಲ.
ಟಿ20 ವಿಶ್ವಕಪ್ ಸ್ಕ್ವಾಡ್ ನಲ್ಲಿದ್ದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರು ಈ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆದರೆ ಬಾರ್ಬಡಾಸ್ ನಲ್ಲಿ ಚಂಡಮಾರುತದ ಕಾರಣದಿಂದ ಭಾರತಕ್ಕೆ ಮರಳುವುದು ವಿಳಂಬವಾದ ಕಾರಣ ಮೊದಲೆರಡು ಪಂದ್ಯಗಳಿಂದ ತಪ್ಪಿಸಿಕೊಂಡಿದ್ದಾರೆ.
ಜಿಂಬಾಬ್ವೆ ಸರಣಿಗೆ ಯುವ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಶುಭ್ಮನ್ ಗಿಲ್ ತಂಡದ ನಾಯಕರಾಗಿದ್ದಾರೆ. ಈ ಸರಣಿಯಲ್ಲಿ ಯಾರು ತಂಡದ ಆರಂಭಿಕ ಬ್ಯಾಟರ್ ಗಳು ಎಂಬ ಕುತೂಹಲವೊಂದಿತ್ತು. ಅದು ಈಗ ತಣಿದಿದೆ. ನಾಯಕ ಗಿಲ್ ಅದಕ್ಕೆ ಉತ್ತರ ನೀಡಿದ್ದಾರೆ.
“ಅಭಿಷೇಕ್ ಶರ್ಮಾ ನನ್ನೊಂದಿಗೆ ಆರಂಭಿಕರಾಗಿ ಇರುತ್ತಾರೆ. ರುತುರಾಜ್ ಗಾಯಕ್ವಾಡ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ” ಎಂದು ಗಿಲ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದ ಅಭಿಷೇಕ್ ಹೊಸ ಸಂಚಲನ ಮೂಡಿಸಿದ್ದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಶರ್ಮಾ ಹೊಸ ಬಗೆಯ ಟಿ20 ಬ್ಯಾಟಿಂಗ್ ನ್ನು ಎಲ್ಲರೂ ಕೊಂಡಾಡಿದ್ದರು. ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಪಂಜಾಬ್ ಬ್ಯಾಟರ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಜಿಂಬಾಬ್ವೆಯ ಭಾರತ ಪ್ರವಾಸ 2024: ಪೂರ್ಣ ವೇಳಾಪಟ್ಟಿ
1ನೇ T20I ಜುಲೈ 6, ಶನಿವಾರ
2ನೇ T20I ಜುಲೈ 7, ಭಾನುವಾರ
3ನೇ T20I ಜುಲೈ 10, ಬುಧವಾರ
4ನೇ T20I ಜುಲೈ 13, ಶನಿವಾರ
5ನೇ T20I ಜುಲೈ 14, ಭಾನುವಾರ