ಆಕ್ಲಂಡ್: ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಗೆದ್ದ ಜೋಶ್ ನಲ್ಲಿ ಏಕದಿನ ಸರಣಿ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಆಕ್ಲಂಡ್ ನ ಈಡನ್ ಪಾರ್ಕ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 50 ಓವರ್ ಗಳಲ್ಲಿ ಏಳು ವಿಕೆಟ್ ಗೆ 306 ರನ್ ಗಳಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಧವನ್ ಪಡೆಗೆ ಉತ್ತಮ ಆರಂಭ ದೊರಕಿತು. ನಾಯಕ ಧವನ್ ಮತ್ತು ಗಿಲ್ ಮೊದಲ ವಿಕೆಟ್ ಗೆ 124 ರನ್ ಜೊತೆಯಾಟವಾಡಿದರು. ಇಬ್ಬರೂ ತಲಾ ಅರ್ಧಶತಕ ಬಾರಿಸಿದರು. 50 ರನ್ ಗಳಿಸಿದ ಗಿಲ್ ಫರ್ಗ್ಯುಸನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ನಾಯಕ ಧವನ್ 72 ರನ್ ಗೆ ಔಟಾದರು.
ವಿಕೆಟ್ ಕೀಪರ್ ಪಂತ್ ಕೇವಲ 15 ರನ್ ಮಾಡಿ ಔಟಾದರು. ಸೂರ್ಯಕುಮಾರ್ ಯಾದವ್ ಅವರು ಕೇವಲ ನಾಲ್ಕು ರನ್ ಮಾಡಿ ಅಗ್ಗಕ್ಕೆ ಔಟಾದರು. ಇದರ ಮಧ್ಯೆ ಕ್ರೀಸ್ ಕಚ್ಚಿ ನಿಂತ ಶ್ರೇಯಸ್ ಅಯ್ಯರ್ ನಾಲ್ಕು ಸಿಕ್ಸರ್ ನೆರವಿನಿಂದ 80 ರನ್ ಗಳಿಸಿದರು. ಅವರಿಗೆ ನೆರವು ನೀಡಿದ ಸಂಜು ಸ್ಯಾಮ್ಸನ್ 36 ರನ್ ಮಾಡಿದರು. ಕೊನೆಯಲ್ಲಿ ಸಿಡಿದ ವಾಷಿಂಗ್ಟನ್ ಸುಂದರ್ ಕೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿದರು. ಸುಂದರ್ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.
ಇದನ್ನೂ ಓದಿ:FIFA 2022 ಗೆಲುವಿನ ಅಭಿಯಾನ ಆರಂಭಿಸಿ ಪೋರ್ಚುಗಲ್: ವಿಶ್ವದಾಖಲೆಯ ಗೋಲು ಹೊಡೆದ ರೊನಾಲ್ಡೊ
ಕಿವೀಸ್ ಪರ ಟಿಮ್ ಸೌಥಿ ಮತ್ತು ಲ್ಯೂಕಿ ಫರ್ಗ್ಯುಸನ್ ತಲಾ ಮೂರು ವಿಕೆಟ್ ಕಿತ್ತರು. ಧವನ್ ವಿಕೆಟ್ ಕಿತ್ತ ವೇಳೆ ಟಿಮ್ ಸೌಥಿ ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು.
ಭಾರತ ತಂಡದಲ್ಲಿ ಇಂದು ಉಮ್ರಾನ್ ಮಲಿಕ್ ಮತ್ತು ಅರ್ಶದೀಪ್ ಸಿಂಗ್ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.