ಕಾನ್ಪುರ: ಎರಡೂವರೆ ದಿನಗಳ ಕಾಲ ಮಳೆಯ ಕಾರಣದಿಂದ ಪಂದ್ಯ ನಡೆಯದಿದ್ದರೂ ಬಾಂಗ್ಲಾ ವಿರುದ್ದದ ಕಾನ್ಪುರ ಟೆಸ್ಟ್ ಪಂದ್ಯವು ಫಲಿತಾಂಶದತ್ತ ಸಾಗುತ್ತಿದೆ. ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಭಾರತವು ಕೇವಲ 34.4 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 52 ರನ್ ಮುನ್ನಡೆ ಸಾಧಿಸಿದೆ.
107 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ಇಂದು 233 ರನ್ ಗಳಿಗೆ ಆಲೌಟಾಯಿತು. ಮೊಮಿನುಲ್ ಹಕ್ ಶತಕ (107 ರನ್) ಗಳಿಸಿ ಮಿಂಚಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಟಿ20 ಶೈಲಿಯ ಆಟಕ್ಕೆ ಮುಂದಾಯಿತು. ನಾಯಕ ರೋಹಿತ್ ಮತ್ತು ಜೈಸ್ವಾಲ್ ಮೂರು ಓವರ್ ನಲ್ಲಿಯೇ 50 ರನ್ ಗಡಿ ದಾಟಿಸಿದರು. ರೋಹಿತ್ ಕೇವಲ 11 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 23 ರನ್ ಮಾಡಿದರೆ, ಜೈಸ್ವಾಲ್ 51 ಎಸೆತಗಳಲ್ಲಿ 72 ರನ್ ಚಚ್ಚಿದರು.
ಗಿಲ್ 39 ರನ್ ಮಾಡಿದರೆ, ವಿರಾಟ್ ಕೊಹ್ಲಿ 47 ರನ್ ಗಳಿಸಿ ಔಟಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 43 ಎಸೆತಗಳಲ್ಲಿ 68 ರನ್ ಗಳಿಸಿದರು.
ಅತೀ ವೇಗದ 50, 100, 150, 200 ರನ್ ದಾಖಲೆ
ಇದೇ ವೇಳೆ ಭಾರತವು ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ 50, 100, 150, 200 ರನ್ ಗಳಿಸಿದ ತಂಡವೆಂಬ ದಾಖಲೆ ಬರೆಯಿತು. 3 ಓವರ್ ನಲ್ಲಿ 50 ರನ್, 10.1 ಓವರ್ ನಲ್ಲಿ 100 ರನ್, 18.2 ಓವರ್ ನಲ್ಲಿ 150 ರನ್ ಮತ್ತು 24.3 ಓವರ್ ನಲ್ಲಿ 200 ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು.