ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿಯ (Border Gavaskar Trophy) ಮೊದಲ ಪಂದ್ಯದಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಮೂರನೇ ದಿನದಾಟದ ಲಂಚ್ ವಿರಾಮದ ವೇಳೆ ಭಾರತ ತಂಡವು ಒಂದು ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿದ್ದು, 321 ರನ್ ಮುನ್ನಡೆಯಲ್ಲಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 172 ರನ್ ಮಾಡಿದ್ದ ಭಾರತವು ರವಿವಾರ ಒಂದು ವಿಕೆಟ್ ಕಳೆದುಕೊಂಡಿತಾದರೂ ಉತ್ತಮ ಸ್ಥಿತಿಯಲ್ಲಿದೆ.
ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಶನಿವಾರದ ಆಟದ ಅಂತ್ಯದಲ್ಲಿ 90 ರನ್ ಗಳಿಸಿದ್ದ ಜೈಸ್ವಾಲ್ ಇಂದು ಭರ್ಜರಿ ಸಿಕ್ಸರ್ ನೊಂದಿಗೆ ಶತಕ ಪೂರೈಸಿದರು. ಪರ್ತ್ ನಲ್ಲಿ ಶತಕ ಬಾರಿಸಿದ ಕೇವಲ ಮೂರನೇ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು. ಈ ಮೊದಲು ಸುನೀಲ್ ಗಾವಸ್ಕರ್ ಮತ್ತು ವಿರಾಟ್ ಕೊಹ್ಲಿ ಪರ್ತ್ (ವಾಕಾ) ನಲ್ಲಿ ಶತಕ ಬಾರಿಸಿದ್ದಾರೆ.
62 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ಅವರು ಇಂದು ಉತ್ತಮ ಆಟವಾಡುತ್ತಿದ್ದರು. ಆದರೆ 77 ರನ್ ಗಳಿಸಿದ್ದ ವೇಳೆ ಸ್ಟಾರ್ಕ್ ಎಸೆತದಲ್ಲಿ ಕೀಪರ್ ಕ್ಯಾರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮತ್ತೋರ್ವ ಕನ್ನಡಿಗ ದೇವದತ್ತ ಪಡಿಕ್ಕಲ್ ಕ್ರೀಸ್ ನಲ್ಲಿದ್ದು 75 ರನ್ ಮಾಡಿದ್ದಾರೆ. ಜೈಸ್ವಾಲ್ 141 ರನ್ ಗಳಿಸಿ ಆಡುತ್ತಿದ್ದಾರೆ.
ಇದೇ ವೇಳೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ವಿಕೆಟ್ ಗೆ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದ ಭಾರತೀಯ ಜೋಡಿ ಎಂದು ಇತಿಹಾಸ ಬರೆದಿದ್ದಾರೆ. ರಾಹುಲ್ ಮತ್ತು ಜೈಸ್ವಾಲ್ ಆರಂಭಿಕ ಟೆಸ್ಟ್ನ 3 ನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ 201 ರನ್ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. 1986 ರಲ್ಲಿ ಸಿಡ್ನಿಯಲ್ಲಿ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಅವರ 191 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆಸ್ಟ್ರೇಲಿಯಾದಲ್ಲಿ ಭಾರತದ ಅತ್ಯಧಿಕ ಮೊದಲ ವಿಕೆಟ್ ಜೊತೆಯಾಟವಾಗಿದ್ದು ಮಾತ್ರವಲ್ಲದೆ, 200 ರನ್ ಜೊತೆಯಾಟವಾಡಿದ ಭಾರತೀಯ ಆರಂಭಿಕ ಜೋಡಿಯಾಯಿತು.