ಪುಣೆ: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರು ಗಾಯಗೊಂಡಿದ್ದಾರೆ. ಬೌಲಿಂಗ್ ಮಾಡುತ್ತಿದ್ದ ವೇಳೆ ನೋವಿಗೆ ಒಳಗಾದ ಹಾರ್ದಿಕ್ ಪಾಂಡ್ಯ ಕೂಡಲೇ ಮೈದಾನ ತೊರೆದರು.
ಪಂದ್ಯ 9ನೇ ಓವರ್ ವೇಳೆ ತನ್ನ ಮೊದಲ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಸ್ಲಿಪ್ ಆದರು. ಲಿಟನ್ ದಾಸ್ ನೇರವಾಗಿ ಬಾರಿಸಿದ ಚೆಂಡನ್ನು ನಿಲ್ಲಿಸುವ ಪ್ರಯತ್ನದಲ್ಲಿ ಹಾರ್ದಿಕ್ ಪಾಂಡ್ಯ ಜಾರಿದರು. ಕೂಡಲೇ ಫಿಸಿಯೊ ಮೈದಾನಕ್ಕೆ ಧಾವಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ಮೈದಾನ ತೊರೆಯಬೇಕಾಯಿತು. ಓವರ್ ನ ಉಳಿದ ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದರು.
“ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ಅವರ ಗಾಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರನ್ನು ಸ್ಕ್ಯಾನ್ ಗಾಗಿ ಕರೆದುಕೊಂಡು ಹೋಗಲಾಗುತ್ತಿದೆ” ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ತಂಜಿದ್ ಹಸನ್ 51 ರನ್, ಲಿಟನ್ ದಾಸ್ 66 ರನ್ ಗಳಿಸಿದರು. ಮೊಹಮದುಲ್ಲಾ 46 ರನ್ ಮಾಡಿದರು.
ಭಾರತದ ಪರ ಬುಮ್ರಾ, ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಿತ್ತರು.