Advertisement

100 ಎಕರೆಯಲ್ಲಿ ಕೈಗಾರಿಕಾ ವಲಯ: ರಾಘವೇಂದ್ರ

02:03 AM Sep 09, 2020 | mahesh |

ಬೈಂದೂರು: ಬೈಂದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಬೈಂದೂರಿನ ಜೆ.ಎನ್‌.ಆರ್‌. ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ ಉದ್ಘಾಟಿಸಿ ಮಾತನಾಡಿ, ಬೈಂದೂರು ಕ್ಷೇತ್ರಕ್ಕೆ ಈಗಾಗಲೇ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ಮಂಜೂರಾಗಿದೆ. ಬೈಂದೂರು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ್ದು, ಅದಕ್ಕೆ ದೊರೆಯುವ ಎಲ್ಲ ಅನುದಾನಗಳೂ ಲಭಿಸಲಿವೆ. ಕುಡಿಯುವ ನೀರಿಗಾಗಿ ಕೇಂದ್ರದಿಂದ 200 ಕೋಟಿ ರೂ. ದೊರೆತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ, ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಒಳಾಂಗಣ ಕ್ರೀಡಾಂಗಣ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ 100 ಎಕರೆ ವಿಸ್ತಿರ್ಣದ ಕೈಗಾರಿಕಾ ವಲಯ ಆರಂಭಿಸುವ ಚಿಂತನೆಯಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಸಂಸದರು ವಿಶೇಷ ಆದ್ಯತೆ ನೀಡಿರುವ ಮೂಲಕ ಬೈಂದೂರಿನ ಬಹುನಿರೀಕ್ಷಿತ ಯೋಜನೆಗಳು ಸಾಕಾರಗೊಂಡಿವೆ. ಬೈಂದೂರನ್ನು ಮಾದರಿ ತಾಲೂಕಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಕಂದಾಯ ವಿಭಾಗ: ಉಡುಪಿ ಅಗ್ರಣಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಮತ್ತು ಶಾಸಕರು
ಅಪಾರ ಅನುದಾನ ತಂದಿರುತ್ತಾರೆ. ಅದರ ಸದ್ಬಳಕೆ ಯಾಗಬೇಕಾದರೆ ಅಧಿಕಾರಿಗಳು ಕಾರ್ಯದಕ್ಷತೆಯೂ ಮುಖ್ಯವಾಗುತ್ತದೆ. ಕಂದಾಯ ವಿಭಾಗದಲ್ಲಿ ಬೈಂದೂರು ತಾಲೂಕು ನಿರಂತರವಾಗಿ ಮುನ್ನಡೆಯಲ್ಲಿದೆ. ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಬೈಂದೂರು ಮಾದರಿ ಕ್ಷೇತ್ರವಾಗಿ ರೂಪುಗೊಳ್ಳಬೇಕಾಗಿದೆ ಎಂದರು. ಮೀನುಗಾರಿಕೆಗೆ ತೆರಳಿ ದೋಣಿ ದುರಂತದಲ್ಲಿ ಮೃತಪಟ್ಟ ಕೊಡೇರಿಯ ಕುಟುಂಬಗಳಿಗೆ ಸಹಾಯಧನ ಹಾಗೂ ವಿವಿಧ ಇಲಾಖೆಗಳಿಗೆ ಭೂ ಮಂಜೂರಾತಿ ಹಕ್ಕುಪತ್ರ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಎಸಿ ರಾಜು, ಜಿ.ಪಂ. ಸಿಇಒ ಪ್ರೀತಿ ಗೆಹೋಲೊಟ್‌, ಮಂಗಳೂರು ಪ್ರಾಂತ್ಯ ಅಗ್ನಿಶಾಮಕ ಇಲಾಖೆಯ ಮುಖ್ಯ ಅಧಿಕಾರಿ ಜಿ. ತಿಪ್ಪೇಸ್ವಾಮಿ, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್‌, ನಗರಾಭಿವೃದ್ಧಿ ಅಧಿಕಾರಿ ಅರುಣಪ್ರಭಾ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ, ಮೆಸ್ಕಾಂ ಎಂಜಿನಿಯರಿಂಗ್‌ ಕಾರ್ಯನಿರ್ವಾಹಕ ರಾಜೇಶ್‌, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ಸುರೇಶ್‌ ಬಟ್ವಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಬೈಂದೂರು ಪ.ಪಂ. ಸಿಇಒ ಮೇಬಲ್‌ ಡಿ’ಸೋಜಾ ಪ್ರಸ್ತಾವನೆಗೈದರು. ತಹಶೀಲ್ದಾರ್‌ ಬಿ.ಪಿ. ಪೂಜಾರ್‌ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿನಾಯಕ ಕಾಮತ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next