Advertisement

ಇಂದಿರಾ ಕ್ಯಾಂಟೀನ್‌ಗೆ ಸಚಿವ ಕೆ.ಜೆ.ಜಾರ್ಜ್‌ ಮೇಲುಸ್ತುವಾರಿ

11:32 AM May 05, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟ, ಉಪಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.

Advertisement

ಜಾರ್ಜ್‌ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌, ಮೇಯರ್‌ ಜಿ.ಪದ್ಮಾವತಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಲಮಂಡಳಿ ಅಧ್ಯಕ್ಷ, ಬಿಬಿಎಂಪಿ ಆಯುಕ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು), ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ-3 ಅವರು ಸದಸ್ಯರಾಗಿರುತ್ತಾರೆ.

ಈ ಮಧ್ಯೆ ಗುರುವಾರ ವಿಧಾನಸೌಧದಲ್ಲಿ ಇಂದಿರಾ ಕ್ಯಾಂಟೀನ್‌ ಅನುಷ್ಠಾನ ಕುರಿತಂತೆ ಸಚಿವ ಕೆ.ಜೆ.ಜಾರ್ಜ್‌ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಆ. 15ರ ಸ್ವಾತಂತ್ರ ದಿನದಂದು ಏಕಕಾಲದಲ್ಲಿ ಕ್ಯಾಂಟೀನ್‌ಗಳು ಆರಂಭವಾಗಲಿವೆ. ಎಲ್ಲಾ ಕ್ಯಾಂಟೀನ್‌ಗಳು ಒಂದೇ ರೀತಿ ಇರಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರವಾರು ವಿಕೇಂದ್ರೀಕೃತ ಅಡುಗೆ ಮನೆಗಳನ್ನು ನಿರ್ಮಿಸಲಾಗುತ್ತದೆ. ಜತೆಗೆ ಕ್ಯಾಂಟೀನ್‌ ಕಟ್ಟಡದ ವ್ಯವಸ್ಥೆಯೂ ಆಗಬೇಕಿದ್ದು, ಇವುಗಳ ಅನುಷ್ಠಾನಕ್ಕೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ ಎಂದರು.

ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಕಾರ್ಯವನ್ನು ಲ್ಯಾಂಡ್‌ ಆರ್ಮಿ ಮೂಲಕ ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಮಿಳುನಾಡಿನ ಕೃಷ್ಣಗಿರಿಯ ಕಾರ್ಖಾನೆಯಲ್ಲಿ ಕ್ಯಾಂಟೀನ್‌ ಮಾದರಿಗಳನ್ನು ತಯಾರಿಸುತ್ತಿದ್ದು, ಪುಣೆ ಮೂಲದ ಕಂಪನಿ ಕೂಡ ಮಾದರಿ ಕ್ಯಾಂಟೀನ್‌ ಒದಗಿಸಲು ಮುಂದೆ ಬಂದಿದೆ. ಮುಖ್ಯಮಂತ್ರಿಗಳು ವೀಕ್ಷಿಸಿದ ಬಳಿಕ ಅಂತಿಮ ಮಾದರಿಯನ್ನು ಆಯ್ಕೆ ಮಾಡಲಾಗುವುದು ಎಂದರು.

ಸರ್ಕಾರ ನಿಗದಿಪಡಿಸುವ ಆಹಾರ ಪದಾರ್ಥಗಳನ್ನು ಒಳಗೊಂಡ ಅಡುಗೆ ತಯಾರಿಸಲು ಮಹಿಳಾ ಸ್ವಸಹಾಯ ಸಂಘಗಳೂ ಸೇರಿ ಆಸಕ್ತರಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಸರ್ಕಾರದ ಷರತ್ತಿನಂತೆ ಈರುಳ್ಳಿ-ಬೆಳ್ಳುಳ್ಳಿ ಬಳಸಿ ಅಡುಗೆ ತಯಾರಿಸುವುದಾದರೆ ಇಸ್ಕಾನ್‌ ಕೂಡ ಟೆಂಡರ್‌ನಲ್ಲಿ ಭಾಗವಹಿಸಬಹುದು. ಸದ್ಯ ತಿಂಡಿಗೆ ಇಡ್ಲಿ, ವಡೆ, ಸಾಂಬಾರ್‌, ಉಪ್ಪಿಟ್ಟು, ಮಧ್ಯಾಹ್ನ ಮತ್ತು ರಾತ್ರಿಗೆ ಊಟ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next