ಕರ್ನಾಟಕದ ಬೈಂದೂರು ಮೂಲದವನಾದ ನಾನು, ಕಳೆದ 15 ವರ್ಷಗಳಿಂದ ಕತಾರಿನಲ್ಲಿ ವಾಸಿಸುತ್ತಿದ್ದು, ಇಲ್ಲಿ ಒಂದು ದಶಕದಲ್ಲಿ ಆದ ಬೆಳವಣಿಗೆಗಳನ್ನು ಪ್ರತ್ಯಕ್ಷವಾಗಿ ಗಮನಿಸುತ್ತಿರುವುದು ಮಾತ್ರವಲ್ಲದೆ, ಕತಾರ್ ದೇಶದ ಕೆಲವು ಕಾಮಗಾರಿಗಳಲ್ಲಿ ಕೆಲಸವನ್ನೂ ಸಹ ನಿರ್ವಹಿಸಿದ್ದೇನೆ.
Advertisement
2022ರ ಫಿಫಾ ಅಂತಾರಾಷ್ಟ್ರೀಯ ಕಾಲ್ಚೆಂಡಿನ ಪಂದ್ಯಾವಳಿಗಳ ಸಲುವಾಗಿ ಸಂಪೂರ್ಣ ನಗರವನ್ನೇ ಮಾರ್ಪಾಡು ಮಾಡಲಾಗಿತ್ತು. ರಸ್ತೆಗಳ ನವೀಕರಣ, ಕಟ್ಟಡ ನಿರ್ಮಾಣ, ನೂತನ ಕ್ರೀಡಾಂಗಣಗಳ ಕಾಮಗಾರಿ, ಮೆಟ್ರೋ ರೈಲು ಸಂಪರ್ಕ, ವಿದ್ಯುತ್ ಶಕ್ತಿ, ವಿಮಾನ ನಿಲ್ದಾಣದ ವಿಸ್ತೀರ್ಣ ಇವೆಲ್ಲವೂ ಪಂದ್ಯಾವಳಿಗಳ ಸಲುವಾಗಿ ದೇಶದಲ್ಲಿ ಮಾಡಿದ ಅಭಿವೃದ್ಧಿಗಳು.ಈಗ ಇಲ್ಲಿ ಬೇಕಾದ ಎಲ್ಲ ಸೌಲಭ್ಯಗಳಿವೆ. ಇನ್ನು ಪ್ರತೀ ವರ್ಷವೂ ಉನ್ನತ ಮಟ್ಟದ ಪಂದ್ಯಾವಳಿಗಳನ್ನು ಆಯೋಜನೆ ಮಾಡುವುದು ಅತೀ ಸುಲಭ. ಇಂತಹದೊಂದು ಬೃಹತ್ ಗಾತ್ರದ ಸರಣಿ ಏಷ್ಯನ್ ಫುಟ್ಬಾಲ್ ಕಪ್ 2023- 24. ಜನವರಿ 12ರಂದು ಮೊದಲ ಫುಟ್ಬಾಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ನೋಡಲು ಅವಕಾಶ ದೊರಕಿತು. ಅನಂತರ 2024ರ ಜನವರಿ 13ರಂದು ಭಾರತ ದೇಶದ ರಾಷ್ಟ್ರಗೀತೆಯನ್ನು 40,000 ಜನರು ಇರುವ ಕ್ರೀಡಾಂಗಣದಲ್ಲಿ ಕೇಳಬೇಕೆಂಬ ಆಸೆ ಪೂರೈಸಿತು.
Related Articles
Advertisement
ಕತಾರಿನ ಕ್ರಿಕೆಟ್ ತಂಡವು ಅಷ್ಟು ಪ್ರಖ್ಯಾತವಲ್ಲ. ಆದರೆ ಫುಟ್ಬಾಲ್ ತಂಡವು 2022ನೇ ಫಿಫಾದಲ್ಲೂ ಪಾಲ್ಗೊಂಡಿತ್ತು. ಆದರೆ ಜಯಿಸಲಿಲ್ಲವಷ್ಟೇ. ಭಾರತದ ಫುಟ್ಬಾಲ್ ತಂಡವು ಉತ್ತಮ ಪ್ರದರ್ಶನ ನೀಡಿತು, ಆದರೆ ಜಯಿಸಲಾಗಲಿಲ್ಲ. ನಾಯಕರಾದ ಸುನಿಲ್ ಛೆತ್ರಿ ಅತ್ಯುತ್ತಮ ಆಟಗಾರರು. ತಮ್ಮ ದೇಶಕ್ಕೆ ಹೊಡೆದಿರುವ ಅತೀ ಹೆಚ್ಚು ಗೋಲುಗಳಿಗೆ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿರುವ ವ್ಯಕ್ತಿ ಸುನಿಲ್ ಛೆತ್ರಿ. ಆದರೆ ಅವರೊಬ್ಬರಿಂದಲೇ 11 ಜನರ ತಂಡದ ಪಂದ್ಯ ಗೆಲ್ಲಲಾಗದು. ಬೇರೆ ಆಟಗಾರರು ಬಹಳ ಚತುರತೆ, ಪರಿಶ್ರಮದಿಂದ ಆಡಿದರೂ ಎದುರಾಳಿಗಳ ಪ್ರಹಾರ ಬಹಳ ತೀಕ್ಷ್ಣ ಹಾಗೂ ಅತೀ ವೇಗವಾಗಿತ್ತು. ಭಾರತ ತಂಡವು ಇನ್ನೂ ಹೆಚ್ಚು ಅಭ್ಯಾಸ ಮಾಡಬೇಕು ಎನ್ನುವ ವಿಷಯವನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಸಮಸ್ತ ಭಾರತೀಯರು ಒಪ್ಪಲೇಬೇಕಾಗುತ್ತದೆ.
ಎದುರಾಳಿಗಳನ್ನು ಗಮನಿಸಿದರೆ ನಮ್ಮ ದೇಶದ ತಂಡದಲ್ಲಿ ಏನೋ ಕೊರತೆ ಇದೆ ಎಂಬ ಅಭಿಪ್ರಾಯ ಬಾರದೆ ಇರದು. ಅನ್ನ-ಆಹಾರ, ಸ್ವಾಸ್ಥ್ಯ ಪರಿಸರ, ವಾತಾವರಣ, ದೃಢ ಮೈಕಟ್ಟು, ಅಭ್ಯಾಸ, ಶಕ್ತಿ-ಸಂಯಮ ಇಂತಹ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಹಂತದವರೆಗಾದರೂ ಭಾರತದ ಆಟಗಾರರು ಬಂದಿರುವವರಲ್ಲ ಎಂಬ ಸಂತಸವು ಆಗುತ್ತದೆ. ನೇಪಾಲ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ಥಾನ ಮುಂತಾದ ದೇಶಗಳ ತಂಡಗಳು ಇಂತಹ ಪಂದ್ಯಾವಳಿಗಳಲ್ಲಿ ಕಾಣಸಿಗದು. ಆದರೆ ಭಾರತ ದೇಶದ ತಂಡವು ಏಷ್ಯನ್ ಫುಟ್ಬಾಲ್ ಕಪ್ – 2023 ಪಂದ್ಯಾವಳಿಯಲ್ಲಿ ಕಾಲಿಟ್ಟಿರುವುದು ನಿಜವಾಗಲೂ ಒಂದು ಸಾಧನೆಯೇ. ಬರುವ ವರ್ಷಗಳಲ್ಲಿ ಕ್ರಿಕೆಟಿನಂತೆ ಫುಟ್ಬಾಲ್ ಆಟಕ್ಕೂ ಪ್ರಾಧಾನ್ಯತೆ ದೊರೆಯಲಿ.ಇನ್ನೂ ಪ್ರತಿಭಾ ಶಾಲಿ ಆಟಗಾರರು ಸೇರ್ಪಡೆಯಾಗಿ, ಉನ್ನತ ಮಟ್ಟಕ್ಕೆ ಭಾರತದ ಫುಟ್ಬಾಲ್ ಕೀರ್ತಿ ಏರಲಿ ಎಂದು ಆಶಿಸೋಣ. ಕಳೆದ ವಾರ ಭಾರತ ದೇಶದ ಫುಟ್ಬಾಲ್ ತಂಡದವರ ಜತೆ ಭೋಜನಕೂಟದಲ್ಲಿ ಚರ್ಚೆ ನಡೆಸಿದೆವು. ಅವರ ಅಭಿಪ್ರಾಯವನ್ನು ಸ್ವೀಕರಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭಕೋರಿ ಕತಾರಿನಿಂದ ಬೀಳ್ಕೊಡುಗೆ ನೀಡಲಾಯಿತು.