Advertisement

Indias Defense Instrument: ಜಗತ್ತಿನ ಶಕ್ತಿಶಾಲಿ ಸ್ಫೋಟಕ ಸೆಬೆಕ್ಸ್‌-2!

01:08 AM Jul 09, 2024 | Team Udayavani |

ರಕ್ಷಣ ವಲಯದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿರುವ ಭಾರತವು “ಸೆಬೆಕ್ಸ್‌-2′ ಎಂಬ ಅತ್ಯಾಧುನಿಕ ಹಾಗೂ ಜಗತ್ತಿನ ಶಕ್ತಿಶಾಲಿ ಸ್ಫೋಟಕವನ್ನು ಅಭಿವೃದ್ಧಿಪಡಿಸಿ, ಇತ್ತೀಚೆಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಈ ಮೂಲಕ ಭಾರತವು ರಕ್ಷಣ ಸಾಧನಗಳಲ್ಲಿ ಸ್ವಾವಲಂಬಿಯಾಗುವತ್ತ ದಾಪುಗಾಲು ಹಾಕಿದೆ. ಸ್ವದೇಶಿಯಾಗಿ ನಿರ್ಮಿಸಲಾದ ಸೆಬೆಕ್ಸ್‌-2 ಸ್ಫೋಟಕದ ಸಾಮರ್ಥ್ಯ ಹಾಗೂ ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಭಾರತವು ನೂತನ ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಕೇವಲ ಆಮದು ಮಾಡಿಕೊಳ್ಳುವುದಲ್ಲದೇ ದೇಶೀಯವಾಗಿಯೂ ನಿರ್ಮಾಣ ಮಾಡುವ ಮೂಲಕ ಸ್ವಾವಲಂಬನೆಯನ್ನು ಸಾಧಿಸುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ “ಸೆಬೆಕ್ಸ್‌-2′ (SEBEX 2) ಸ್ಫೋಟಕವನ್ನು ಅಭಿವೃದ್ಧಿಪಡಿಸಿದೆ.

ಸಂಪೂರ್ಣ ಸ್ವದೇಶಿ ನಿರ್ಮಿತ ಈ ನೂತನ ಸ್ಫೋಟಕ ಟಿಎನ್‌ಟಿ (ಟ್ರೈನೈ ಟ್ರೊಟೊಲ್ಯೂನ್‌) ಸ್ಫೋಟಕಕ್ಕಿಂತ ಎರಡು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, ಜಗತ್ತಿನಲ್ಲೇ  ಅತ್ಯಂತ ಮಾರಕ ಸ್ಫೋಟಕ ಎಂಬ ಹೆಗ್ಗಳಿಕೆ ಪಡೆದಿದೆ. ಭಾರತೀಯ ನೌಕಾ ಸೇನೆಯಿಂದ ಪ್ರಮಾಣೀಕೃತಗೊಂಡ ಸೆಬೆಕ್ಸ್‌-2 ಸ್ಫೋಟಕ, ತನ್ನ ವಿಶೇಷತೆಗಳಿಂದ ಸದ್ಯ ಜಾಗತಿಕ ರಕ್ಷಣ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಏನಿದು ಸೆಬೆಕ್ಸ್‌-2?:
ಸೆಬೆಕ್ಸ್‌-2 (SEBEX 2) ಮಾರಕ ಸ್ಫೋಟಕವಾಗಿದ್ದು, ವಿಶ್ವದಲ್ಲೇ ಪರಮಾಣುವಲ್ಲದ ಅತ್ಯಂತ ಶಕ್ತಿಶಾಲಿ ಹಾಗೂ ಗರಿಷ್ಠ ಪರಿಣಾಮ ಬೀರುವ ಸ್ಫೋಟಕವಾಗಿದೆ! ಸಿಡಿತಲೆ, ವೈಮಾನಿಕ ಬಾಂಬ…, ಫಿರಂಗಿ ಶೆಲ್‌ಗ‌ಳು ಹಾಗೂ ಇತರ ಶಸ್ತ್ರಾಸ್ತ್ರಗಳಲ್ಲಿ ಸೆಬೆಕ್ಸ್‌-2 ಸ್ಫೋಟಕವನ್ನು ಬಳಸಬಹು ದಾಗಿದ್ದು, ಇದರಿಂದ ಶಸ್ತ್ರಾಸ್ತ್ರಗಳ ತೂಕ ಹೆಚ್ಚಿಸದೇ, ಅವುಗಳ ಸ್ಫೋಟಕ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ.

ಮೇಕ್‌ ಇನ್‌ ಇಂಡಿಯಾ ಉಪಕ್ರಮ:
ಮಹಾರಾಷ್ಟ್ರದ ಎಕನಾಮಿಕ್‌ ಎಕ್ಸ್‌ಪ್ಲೋಸಿವ್ಸ್‌ ಲಿಮಿಟೆಡ್‌  ಕಂಪೆನಿ ಮೇಕ್‌ ಇನ್‌ ಇಂಡಿಯಾ ಯೋಜನೆಯ ಭಾಗವಾಗಿ ಸೆಬೆಕ್ಸ್‌-2 ಸ್ಫೋಟಕವನ್ನು ಅಭಿವೃದ್ಧಿಪಡಿಸಿದೆ. ಇದು ಹೈ ಮೆಲ್ಟಿಂಗ್‌ ತಂತ್ರಜ್ಞಾನದ ಆಧಾರವಾಗಿ ರೂಪಿಸಲಾಗಿದೆ. ಈ ತಂತ್ರಜ್ಞಾನದಿಂದಲೇ ಅದರ ತೀವ್ರತೆ ದ್ವಿಗುಣವಾಗಿ ನಿರ್ದಿಷ್ಟ ಗುರಿಗೆ ಹೆಚ್ಚಿನ ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ. ಸೆಬೆಕ್ಸ್‌-2 ಸ್ಫೋಟಕವನ್ನು ಸಾಕಷ್ಟು ಪರೀಕ್ಷೆ ಹಾಗೂ ಪರಿಶೀಲನೆಗೆ ಒಳಪಡಿಸಿದ ಮೇಲೆ ಭಾರತೀಯ ನೌಕಾಸೇನೆ ತನ್ನ ರಕ್ಷಣ ರಫ್ತು ಪ್ರಚಾರ ಯೋಜನೆಯಡಿ ಇದನ್ನು ಪ್ರಮಾಣೀಕರಿಸಿದೆ. ಸ್ಫೋಟಕವನ್ನು ದೇಸಿಯವಾಗಿ ಅಭಿವೃದ್ಧಿ ಗೊಳಿಸುವ ಮೂಲಕ ಭಾರತ ರಕ್ಷಣ ವಲಯದಲ್ಲಿ ಮತ್ತಷ್ಟು ಆತ್ಮನಿರ್ಭರವಾಗಿದೆ.

Advertisement

ಸೆಬೆಕ್ಸ್‌-2 ವಿಶ್ವದ ಅತ್ಯಂತ ಮಾರಕ ಸ್ಫೋಟಕ
ಟೆಎನ್‌ಟಿ (ಟ್ರೈನೈಟ್ರೊಟಾಲ್ವಿನ್‌) ಇದೊಂದು ಹಳದಿ ಬಣ್ಣದ ಸ್ಫೋಟಕ ವಸ್ತು. ಯಾವುದೇ ಸ್ಫೋಟಕವಾಗಲಿ, ಅದರ ಸಾಂದ್ರತೆಯನ್ನು ಟಿಎನ್‌ಟಿಯೊಂದಿಗೆ ಅಳೆಯುತ್ತಾರೆ. ಹಾಗಾಗಿ ಟಿಎನ್‌ಟಿಯನ್ನು ಸ್ಫೋಟಕ ಅಳೆಯುವ ಮಾಪನವನ್ನಾಗಿ ಬಳಸಲಾಗುತ್ತದೆ. ವಿಶ್ವದ ಬಹುತೇಕ ಸ್ಫೋಟಕಗಳು ಟಿಎನ್‌ಟಿಗೆ ಹೋಲಿಸಿದರೆ 1.25ರಿಂದ 1.30ರಷ್ಟು ಪಟ್ಟು ಹೆಚ್ಚು ತೀವ್ರತೆ ಹೊಂದಿವೆ. ಸದ್ಯ ಭಾರತದ ಬ್ರಹ್ಮೋಸ್‌ ಕ್ಷೀಪಣಿಯಲ್ಲಿ ಬಳಸುವ ಸ್ಫೋಟಕ ಟಿಎನ್‌ಟಿಗಿಂತ 1.50ರಷ್ಟು ಪರಿಣಾಮಕಾರಿಯಾಗಿದ್ದರೆ, ನೂತನ ಸೆಬೆಕ್ಸ್‌-2 ಸ್ಫೋಟಕ ಟಿಎನ್‌ಟಿಗೆ ಹೋಲಿಸಿದರೆ 2.01ರಷ್ಟು ಪಟ್ಟು ಅಗಾಧ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರಸ್ತುತ ಸೆಬೆಕ್ಸ್‌-2 ವಿಶ್ವದಲ್ಲೇ ಅತ್ಯಂತ ಮಾರಕ ಸ್ಫೋಟಕವೆಂದು ಪರಿಗಣಿಸಲಾಗಿದೆ.

10 ಕೆ.ಜಿ.ಯಿಂದ 40 ಮೀ. ಪ್ರದೇಶ ಸಂಪೂರ್ಣ ಧ್ವಂಸ
1 ಗ್ರಾಂ ಟಿಎನ್‌ಟಿ ಸ್ಫೋಟಕ 4,184 ಜೂಲ್ಸ್‌ (ಶಕ್ತಿಯ ಅಳತೆಗೆ ಉಪಯೋಗಿಸುವ ಮಾಪನ) ಶಕ್ತಿಯನ್ನು ಹೊರಹಾಕುತ್ತದೆ. ಅದೇ 10 ಕೆ.ಜಿ. ಟಿಎನ್‌ಟಿ ಸ್ಫೋಟವಾದರೆ, ಕಂಪನ ಅಲೆಗಳು ಹಾಗೂ ಉಷ್ಣಾಂಶ ಸೇರಿಕೊಂಡ 41.84 ಮೆಗಾಜೂಲ್ಸ್‌ ಶಕ್ತಿ ಹೊರಹೊಮ್ಮುತ್ತದೆ. ತೆರೆದ ಭೂ ಪ್ರದೇಶದಲ್ಲಿ 10 ಕೆ.ಜಿ. ಟಿಎನ್‌ಟಿ ಸ್ಫೋಟಕ 15-20 ಮೀ. ವ್ಯಾಪ್ತಿಯಲ್ಲಿ ಹಾನಿಯುಂಟು ಮಾಡುತ್ತದೆ. ಪ್ರಸ್ತುತ ಸೆಬೆಕ್ಸ್‌-2 ಟಿಎನ್‌ಟಿಗಿಂತ ದ್ವಿಗುಣವಾದ್ದರಿಂದ 30-40 ಮೀ. ನಷ್ಟು ಹಾನಿಗೊಳಿಸುತ್ತದೆ. ಆದರೆ ದಾಳಿ ಮಾಡುವ ಸ್ಥಳ, ವಾತಾವರಣ, ಎತ್ತರ ಹಾಗೂ ಅಡೆತಡೆಗಳ ಆಧಾರದ ಮೇಲೆ ಸ್ಫೋಟಕದ ವ್ಯಾಪ್ತಿ ವ್ಯತ್ಯಾಸವಾಗಬಹುದು.

ಇದು ಅಣು ಬಾಂಬ್‌ಗಿಂತ ವಿಭಿನ್ನ
ಅಣು ಬಾಂಬ್‌ ಹಾಗೂ ಸೆಬೆಕ್ಸ್‌-2 ಎರಡೂ ಪ್ರತ್ಯೇಕ ಸ್ಫೋಟಕಗಳು. ಅಣು ಬಾಂಬ್‌ ಸ್ಫೋಟಗೊಂಡರೆ, ಭಾರೀ ಪ್ರಮಾಣದ ಕಂಪನ ಅಲೆ, ಉಷ್ಣಾಂಶ, ವಿಕಿರಣ ಹೊರಹಾಕಿ, ದೀರ್ಘ‌ ಕಾಲದವರೆಗೆ ವಾತಾವರಣ ಹಾಗೂ ಜೀವರಾಶಿಗಳ ಮೇಲೆ ಹಾನಿ ಮಾಡುತ್ತದೆ. ಆದರೆ ಸೆಬೆಕ್ಸ್‌-2 ದೀರ್ಘ‌ ಕಾಲದ ಪರಿಣಾಮ ಹೊಂದದೆ, ಆ ಕ್ಷಣಕ್ಕೆ ಮಾತ್ರ ತೀವ್ರ ಹಾನಿಯುಂಟು ಮಾಡುತ್ತದೆ.

ಸೆಬೆಕ್ಸ್‌-2 ಮೀರಿಸುವ ಸ್ಫೋಟಕ ಶೀಘ್ರ!
ಇಇಎಲ್‌ ಕಂಪನಿ ತನ್ನ ಅನ್ವೇಷಣೆಯನ್ನು ಕೇವಲ ಸೆಬೆಕ್ಸ್‌-2ಗೆ ಮಾತ್ರ ಸೀಮಿತಗೊಳಿಸದೆ, ಅದಕ್ಕಿಂತಲೂ ಪರಿಣಾಮಕಾರಿ ಸ್ಫೋಟಕ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ನೂತನ ಸ್ಫೋಟಕ ಟಿಎನ್‌ಟಿಗಿಂತ 2.3ರಷ್ಟು ಮಾರಕವಾಗಬಹುದು ಎನ್ನಲಾಗಿದೆ. ಮುಂದಿನ 6 ತಿಂಗಳಲ್ಲಿ ಮತ್ತಷ್ಟು ಸುಧಾರಿತಗೊಂಡ ನೂತನ ಸ್ಫೋಟಕ ಅಭಿವೃದ್ಧಿಗೊಳ್ಳುವ ನಿರೀಕ್ಷೆಯಿದೆ.

ಇನ್ನೆರಡು ಸ್ಫೋಟಕಗಳ ಪ್ರಮಾಣೀಕರಣ
ಭಾರತೀಯ ನೌಕಾ ಸೇನೆ ಸೆಬೆಕ್ಸ್‌-2 ಜತೆಗೆ ಇಇಎಲ್‌ ಕಂಪೆನಿಯ ಸಿಟ್‌ಬೆಕ್ಸ್‌-1 ಥರ್ಮೋಬಾರಿಕ್‌ ಸ್ಫೋಟಕವನ್ನೂ ಪ್ರಮಾಣೀಕರಿಸಿದೆ. ಇದನ್ನು ಕೈಯಲ್ಲಿ ಹಿಡಯಬಹುದಾದ ಲಾಂಚರ್‌ ಹಾಗೂ ವಿಮಾನಗಳಿಂದ ಉಡಾವಣೆ ಮಾಡ ಬಹುದು. ತೀವ್ರ ಶಾಖದೊಂದಿಗೆ ಸ್ಫೋಟಕದ ಅವಧಿ ವಿಸ್ತರಿಸುವ ಸಿಟ್‌ಬೆಕ್ಸ್‌- 1 ಬಂಕರ್‌, ಸುರಂಗಗಳ ಮೇಲಿನ ದಾಳಿಗೆ ಬಳಸಬಹುದಾಗಿದೆ. ಸ್ಫೋಟಕಗಳ ಸಂಗ್ರಹಣೆ, ಸಾಗಣೆ ಮತ್ತು ಕಾರ್ಯಾಚರಣೆಯಲ್ಲಿ ಸುರಕ್ಷೆ ಬಹು ನಿರ್ಣಾಯಕವಾಗಿದೆ. ಇದನ್ನು ಪರಿಹರಿಸಲು, ನೌಕಾಪಡೆಯು ಇಇಎಲ್‌ ಅಭಿವೃದ್ಧಿಪಡಿಸಿದ ಸೂಕ್ಷ್ಮವಲ್ಲದ ಸಿಮೆಕ್ಸ್‌-4 ಸ್ಫೋಟಕ ಪ್ರಮಾಣೀಕರಿಸಿದೆ. ಇದು ಪ್ರಮಾಣಿತ ಸ್ಫೋಟಕಗಳಿಗಿಂತ ಸುರಕ್ಷಿತವಾಗಿದ್ದು, ಅಪಾಯದ ಸಂದರ್ಭಗಳನ್ನು ಕಡಿಮೆಗೊಳಿಸುತ್ತದೆ. ಸುರಕ್ಷೆ ಪ್ರಾಮುಖ್ಯದ ಜಲಾಂತರ್ಗಾಮಿ ಸಿಡಿತಲೆಗಳಲ್ಲಿ ಸಿಮೆಕ್ಸ್‌-4 ಬಳಸಬಹುದಾಗಿದೆ.

ವಿದೇಶಗಳಿಂದ ಸೆಬೆಕ್ಸ್‌ ಖರೀದಿಗೆ ಆಫ‌ರ್‌?
ಸೆಬೆಕ್ಸ್‌-2 ಸ್ಫೋಟಕದ ಆವಿಷ್ಕಾರದಿಂದ ಕೇವಲ ಭಾರತದ ರಕ್ಷಣ ವಲಯ ಮಾತ್ರ ಬಲಿಷ್ಠವಾಗದೇ, ಜಾಗತಿಕ ಮಟ್ಟದ ರಕ್ಷಣ ಮಾರುಕಟ್ಟೆಯಲ್ಲಿ ಭಾರತದ ಈ ಸಾಧನೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ರಕ್ಷಣ ಪಡೆಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಉನ್ನತ ಹಾಗೂ ಉತ್ಕೃಷ್ಟಗೊಳಿಸಲು ಸದಾ ಬಯಸುತ್ತವೆ. ತನ್ನ ಅಗಾಧ ಪರಿಣಾಮ ಹಾಗೂ ಸುಧಾರಿತ ಸೆಬೆಕ್ಸ್‌-2 ಸ್ಫೋಟಕ ಈಗಾಗಲೇ ವಿವಿಧ ದೇಶಗಳ ರಕ್ಷಣ ವಲಯಗಳನ್ನು ಆಕರ್ಷಿಸಿದ್ದು, ಇದಕ್ಕೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಹುಟ್ಟುಹಾಕಿದೆ. ಶಸ್ತ್ರಾಸ್ತ್ರಗಳ ತೂಕ, ಆಕಾರ ಯಾವೂದನ್ನೂ ಬದಲಾಯಿಸದೇ ಅದರಲ್ಲಿ ಸೆಬೆಕ್ಸ್‌-2 ಸ್ಫೋಟಕ ಬಳಸಬಹುದಾಗಿದೆ. ಇದೇ ವೈಶಿಷ್ಟ್ಯಕ್ಕೆ ಬೇರೆ ದೇಶಗಳು ಇದನ್ನು ಖರೀದಿಸಲು ಮುಂದಾಗುವ ಸಾಧ್ಯತೆಗಳಿವೆ.

ಜಗತ್ತಿನ ಮಾರಕ ಸ್ಫೋಟಕಗಳು
ಸೆಬೆಕ್ಸ್‌-2  ಹೆಮೆಕ್ಸ್‌ ಟಿಎನ್‌ಟಿ, ಪಿಇಟಿಎನ್‌ (ಪೆಂಟಾಎರಿಥ್ರಿ ಟಾಲ್‌ ಟೆಟ್ರಾನೈಟ್ರೆಟ್‌) ಆರ್‌ಡಿಎಕ್ಸ್‌ (ರಾಯಲ್‌ ಡೆಮಾಲಿಶ‌ನ್‌ ಎಕ್ಸಪ್ಲೊಸಿವ್‌) ಟಿಎಟಿಪಿ (ಟ್ರೈಸೆಟಾನ್‌ ಟ್ರಿಪರಾಕ್ಸೆ„ಡ್‌) ಅಜಿರೊಅಜೈಡ್‌ ಎಜೈಡ್‌

 

– ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next