ಭಾಲ್ಕಿ: ಭಾರತೀಯರಾದ ನಾವು ಬಹುದೊಡ್ಡ ಸಂಸ್ಕೃತಿಯ ವಾರಸುದಾರರಾಗಿದ್ದೇವೆ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಿದ್ಧಗಿರಿ ಸಂಸ್ಥಾನ ಮಠ ಕನ್ಹೆರಿಯ ಜಗದ್ಗುರು ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗಳು ಪ್ರತಿಪಾದಿಸಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು ಬರೆದ ಗ್ರಂಥಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಭಾರತೀಯರಾದ ನಾವು 2 ಸಾವಿರಗಳಿಗಿಂತಲೂ ಅಧಿಕ ಭಾಷೆಗಳನ್ನು ಮಾತನಾಡುತ್ತೇವೆ. ಆರು ಧರ್ಮಗಳು ಅಸ್ಥಿತ್ವದಲ್ಲಿರುವ ದೇಶ ನಮ್ಮದು. ಅನೇಕ ಭಾಷಾವಾರ ಪ್ರಾಂತಗಳು, 127 ಪ್ರಕಾರದ ವಾತಾವರಣ ಸೀಮಾ ಪ್ರದೇಶ ಉಳ್ಳ ನಾಡು ನಮ್ಮದು. ಹತ್ತು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವಿರುವ ಅದ್ಭುತ ದೇಶದಲ್ಲಿ ನಾವಿದ್ದೇವೆ ಎಂದರು.
ಜಗತ್ತಿಗೆ ಎಲ್ಲವೂ ಮೊದಲು ತಿಳಿಸಿಕೊಟ್ಟ ದೇಶ ಭಾರತ. ಜಗತ್ತಿಗೆ ಮೊಟ್ಟಮೊದಲು ನಾಗರಿಕ ಶಾಸ್ತ್ರ ತಿಳಿಸಿದವರು ನಮ್ಮವರು. ಆದರೆ ಭಾರತೀಯರಾದ ನಾವೇ ನಮ್ಮವರನ್ನು ನಂಬುವುದಿಲ್ಲ. ನಮ್ಮ ಸಂತರು ತಿಳಿಸಿದ ಮಾತುಗಳಿಗೆ ಮೂಢನಂಬಿಕೆ ಎನ್ನುತ್ತೇವೆ. ಅದೇ ಮಾತು ಪಾಶ್ಚಾತರು ಬರೆದರೆ ಅದನ್ನು ನಂಬುತ್ತೇವೆ. ಇಂತಹ ಗುಲಾಮಗಿರಿಯಲ್ಲಿ ನಾವು ಬಾಳುತ್ತಲಿದ್ದೇವೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ| ಬಸವಲಿಂಗ ಪಟªದ್ದೇವರು, ಜಗದ್ಗುರು ಅದೃಷ್ಟ ಕಾಡ ಸಿದ್ದೇಶ್ವರ ಸ್ವಾಮಿಗಳ ಮಠದಲ್ಲಿ ನಿಶುಲ್ಕ ಗುರುಕುಲ ಮಾದರಿಯ ವಿದ್ಯಾಭ್ಯಾಸ ತಿಳಿಸಿಕೊಡುತ್ತಾರೆ. ಇಲ್ಲಿಯ ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿಗಳು ವೇದಿಕೆಯ ಕೆಳಗೆ ಕುಳಿತು ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗಳ ಪ್ರವಚನ ಆಲಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು ಇದ್ದರು.