Advertisement

ಸೌದಿಯಲ್ಲಿನ್ನು ವಿದೇಶಿ ಕಾರ್ಮಿಕರಿಗೆ ನಿರ್ಬಂಧ ಭಾರತೀಯರಿಗೆ ಸಂಕಷ್ಟ

08:23 AM Feb 07, 2018 | Team Udayavani |

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ “ಅಮೆರಿಕ ಫ‌ಸ್ಟ್‌’ ಧ್ಯೇಯ ವಾಕ್ಯದಂತೆ, ಸೌದಿ ಅರೇಬಿಯಾ ಸರಕಾರವೂ ಕಾರ್ಮಿಕ ವಲಯದಲ್ಲಿ ಸ್ಥಳೀಯರಿಗಷ್ಟೇ ಅವಕಾಶ ಕಲ್ಪಿಸುವ ನಿರ್ಧಾರ ಪ್ರಕಟಿಸಿದೆ. ಅದರಂತೆ, 12 ವಲಯಗಳಲ್ಲಿ ಮುಂದಿನ ವರ್ಷದಿಂದ ವಿದೇಶಿ ಕಾರ್ಮಿಕರಿಗೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವ ಡಾ. ಅಲಿ-ಅಲ್‌ ಗಫೀಜ್‌ ಘೋಷಿಸಿದ್ದಾರೆ. ಇದರಿಂದಾಗಿ, ಈ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 30 ಲಕ್ಷ ಭಾರತೀಯರು ಸೇರಿದಂತೆ 1.20 ಕೋಟಿ ವಿದೇಶಿ ಕಾರ್ಮಿಕರ ತಟ್ಟೆಗೆ ಕಲ್ಲು ಬಿದ್ದಂತಾಗಿದೆ. 

Advertisement

ಗಡಿಯಾರ ಮಾರಾಟ ಹಾಗೂ ರಿಪೇರಿ, ಕನ್ನಡಕ, ವೈದ್ಯಕೀಯ ಪರಿಕರ ಹಾಗೂ ಔಷಧಿ, ವಿದ್ಯುತ್‌ ಹಾಗೂ ವಿದ್ಯುನ್ಮಾನ ಪರಿಕರಗಳು, ಕಾರುಗಳ ಬಿಡಿ ಸಾಮಗ್ರಿ, ಕಟ್ಟಡ ನಿರ್ಮಾಣ ಸಾಮಗ್ರಿ, ನೆಲಹಾಸುಗಳು, ಆಟೋಮೊಬೈಲ್‌ ಹಾಗೂ ಮೊಬೈಲ್‌, ಮನೆ ಮತ್ತು ಕಚೇರಿಗಳಿಗೆ ಪೀಠೊಪಕರಣಗಳ ಮಾರಾಟ, ಸಿದ್ಧ ಉಡುಪುಗಳು, ಮಕ್ಕಳ ಹಾಗೂ ಪುರುಷರ ಉಡುಪು ತಯಾರಿಕಾ ಕೇಂದ್ರ, ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಬೇಕರಿ ತಿನಿಸು ತಯಾರಿಕೆ ಮತ್ತು ಮಾರಾಟದಂತಹ ವ್ಯಾಪ್ತಿಗೆ ಒಳಪಡುವ ಅಂಗಡಿಗಳಲ್ಲಿ, ಸೌದಿ ಅರೇಬಿಯಾದ ಕ್ಯಾಲೆಂಡರ್‌ನ (ಹಿಜ್ರಿ) ಮುಂದಿನ ವರ್ಷದಿಂದ ಯಾವುದೇ ವಿದೇಶಿಯರಿಗೆ ಸೇವೆ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಇದು ಹೇಳಿದೆ. ಹಂತ ಹಂತವಾಗಿ ಈ ನಿರ್ಬಂಧದ ಆದೇಶ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ಸ್ಪಷ್ಟನೆ: ನಿರ್ಬಂಧ ವಿಧಿಸಲಾಗಿರುವ ವಲಯಗಳಲ್ಲಿ ಈಗಾಗಲೇ ಒಪ್ಪಂದದ ಮೇರೆಗೆ ಸೇವೆ ಸಲ್ಲಿಸುತ್ತಿರುವವರು ತಮ್ಮ ಒಪ್ಪಂದ ಮುಗಿಯುವವರೆಗೂ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ, ಕೆಲವರಿಗೆ ಕೆಲವು ದಿನಗಳವರೆಗಾದರೂ ಸೇವೆ ಮುಂದುವರಿಸುವ ಅವಕಾಶ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next