ಮಕಾಯ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯವೂ ಅಂತಿಮ ಓವರ್ ನಲ್ಲಿ ಫಲಿತಾಂಶ ಕಂಡಿತು. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವನ್ನು ಭಾರತ 2 ವಿಕೆಟ್ ಅಂತರದಿಂದ ಗೆದ್ದುಕೊಂಡಿತು.
ಆಸೀಸ್ ವನಿತೆಯರು ನೀಡಿದ 265 ರನ್ ಗುರಿ ಬೆನ್ನತ್ತಿದ್ದ ಭಾರತ ವನಿತೆಯರ ತಂಡ ಎರಡು ವಿಕೆಟ್ ಅಂತರದ ಜಯ ಸಾಧಿಸಿತು. ಮೊದಲೆರಡು ಪಂದ್ಯ ಸೋತು ಸರಣಿ ಸೋತಿದ್ದರೂ ಕೊನೆಯ ಪಂದ್ಯ ಗೆದ್ದ ಮಿಥಾಲಿ ಪಡೆ ಆಸೀಸ್ ಪ್ರವಾಸದ ಮೊದಲ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. 87 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬೆತ್ ಮೂನಿ (52 ರನ್) ಮತ್ತು ಗಾರ್ಡ್ನರ್ (62 ರನ್) ಅರ್ಧಶತಕ ಸಿಡಿಸಿ ನೆರವಾದರು. ಉಳಿದಂತೆ ಅಲಿಸಾ ಹೀಲಿ 35 ರನ್, ಟಹಿಲಾ ಮೆಕ್ ಗ್ರಾತ್ 47 ರನ್ ಕಾಣಿಕೆ ನೀಡಿದರು. ಭಾರತದ ಪರ ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು.
ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್ ಗೆ ಅರ್ಧಶಕತ ಜೊತೆಯಾಟವಾಡಿ ಆರಂಭ ಒದಗಿಸಿದರು. ಮಂಧನಾ 22 ರನ್ ಗೆ ಔಟಾದರು. ಬಳಿಕ ಯಾಸ್ತಿಕಾ ಭಾಟಿಯಾ ಜೊತೆಗೂಡಿದ ಶಫಾಲಿ ಶತಕದ ಜೊತೆಯಟವಾಡಿದರು. ಶಫಾಲಿ 56 ರನ್ ಗಳಿಸಿದರೆ, ಯಾಸ್ತಿಕಾ ಭಾಟಿಯಾ 64 ರನ್ ಗಳ ಇನ್ನಿಂಗ್ಸ್ ಉಪಯುಕ್ತ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ:ಆರ್ ಸಿಬಿ ನಾಯಕತ್ವ ಯಾರಿಗೆ? ಮೂರು ಹೆಸರು ಸೂಚಿಸಿದ ಸಂಜಯ್ ಮಾಂಜ್ರೇಕರ್
ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದ್ದ ಮಿಥಾಲಿ ಪಡೆ ಬಳಿಕ ಸತತ ವಿಕೆಟ್ ಕಳೆದಕೊಂಡಿತು. ರಿಚಾ ಘೋಷ್, ಮಿಥಾಲಿ ರಾಜ್ ಮತ್ತು ಪೂಜಾ ವಸ್ತ್ರಾಕಾರ್ ಬೇಗನೇ ವಿಕೆಟ್ ಒಪ್ಪಿಸಿದರು. ಅಂತ್ಯದಲ್ಲಿ ದೀಪ್ತಿ ಶರ್ಮಾ 31 ರನ್, ಸ್ನೇಹ್ ರಾಣಾ 30 ರನ್ ಗಳಿಸಿದರು.
ಅಂತಿಮ ಓವರ್ ನಲ್ಲಿ ತಂಡಕ್ಕೆ ಗೆಲುವಿಗೆ ನಾಲ್ಕು ರನ್ ಅಗತ್ಯವಿತ್ತು. ಜೂಲನ್ ಗೋಸ್ವಾಮಿ ಮತ್ತು ಮೇಘಾ ಸಿಂಗ್ ಕ್ರೀಸ್ ನಲ್ಲಿದ್ದರು. ಸೋಫಿ ಮೊಲಿನಕ್ಸ್ ಎಸೆದ ಅಂತಿಮ ಓವರ್ ನ ಮೊದಲ ಎಸೆತದಲ್ಲಿ ರನ್ ಬರಲಿಲ್ಲ. ಎರಡನೇ ಎಸೆತಕ್ಕೆ ಮೇಘಾ ಒಂಟಿ ರನ್ ತೆಗೆದರು. ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜೂಲನ್ ಗೆಲುವನ್ನು ಖಚಿತಪಡಿಸಿದರು.