Advertisement

ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು ನಿವೃತ್ತಿ ಘೋಷಿಸಿದ್ದೇಕೆ?3 ಪುಟದ ಟ್ವೀಟ್ ನಲ್ಲಿದೆ ರಹಸ್ಯ

06:03 PM Nov 02, 2020 | Nagendra Trasi |

ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸೋಮವಾರ(ನವೆಂಬರ್ 02,2020) ತನ್ನ ಸಾಮಾಜಿಕ ಜಾಲತಾಣದಲ್ಲಿ “ನಾನು ನಿವೃತ್ತಿಯಾಗುತ್ತೇನೆ” ಎಂಬ ಶಬ್ದವನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿರುವ ಘಟನೆ ನಡೆದಿದೆ.

Advertisement

25ರ ಹರೆಯದ ಪಿವಿ ಸಿಂಧು ಏಕಾಏಕಿ ನಿವೃತ್ತಿ ಬಗ್ಗೆ ಬರೆದುಕೊಂಡಿರುವುದೇಕೆ? ಅದು ಇಂತಹ ಸಮಯದಲ್ಲಿ ಎಂಬ ಜಿಜ್ಞಾಸೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ ಸಿಂಧು ಬರೆದಿರುವ ಮೂರು ಪುಟಗಳ ದೀರ್ಘ ಪೋಸ್ಟ್ ಅನ್ನು ಓದಿದರೆ ಇದರ ಹಿಂದಿನ ಸತ್ಯಾಂಶ ಬಯಲಾಗುತ್ತದೆ.

ರಿಯೋ ಒಲಿಂಪಿಕ್ ನ ಬೆಳ್ಳಿ ಪದಕ ವಿಜೇತೆ ಸಿಂಧು, ಡೆನ್ಮಾರ್ಕ್ ಓಪನ್ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿರುವುದು ಅಭಿಮಾನಿಗಳು ಗಾಬರಿಗೊಳಗಾಗಿದ್ದರು. ತಾನು ಬ್ಯಾಡ್ಮಿಂಟನ್ ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಉಲ್ಲೇಖಿಸಿದ್ದರು.

ವಿದಾಯ ಘೋಷಿಸಿದ್ದು ಯಾವುದಕ್ಕೆ?

ನಾನೀಗ ಸಂಪೂರ್ಣವಾಗಿ ನನ್ನ ಹೊಸತನದ ಆಲೋಚನೆಗಳೊಂದಿಗೆ ಬರುತ್ತಿದ್ದೇನೆ. ಸಾಕಷ್ಟು ದಿನಗಳಿಂದ ನಾನು ಹೆಣಗಾಡುತ್ತಿದ್ದೇನೆ. ಇದು ನನ್ನಲ್ಲಿ ತಪ್ಪು ಭಾವನೆ ಮೂಡಿಸುತ್ತಿದೆ. ನಿಮಗೂ ಗೊತ್ತಿದೆ. ಆ ಕಾರಣಕ್ಕಾಗಿಯೇ ನಾನು ಈ ಪೋಸ್ಟ್ ಅನ್ನು ಬರೆದಿದ್ದೇನೆ.  ಒಂದು ವೇಳೆ ನೀವು ಆಘಾತ ಅಥವಾ ಗೊಂದಲಕ್ಕೆ ಒಳಗಾಗಬಹುದು. ಆದರೆ ನೀವು ನನ್ನ ಪತ್ರವನ್ನು ಸಂಪೂರ್ಣ ಓದಿದ ನಂತರ ನಿಮಗೆ ನನ್ನ ನಿವೃತ್ತಿ ಯಾವುದಕ್ಕೆ ಎಂಬ ಚಿತ್ರಣ ಸಿಗುತ್ತದೆ ಎಂದು ಸಿಂಧು ಬರೆದುಕೊಂಡಿದ್ದಾರೆ.

Advertisement

ಕೋವಿಡ್ 19 ಸೋಂಕಿನ ಕಾಲಘಟ್ಟ ನನ್ನ ಕಣ್ಣು ತೆರೆಸಿರುವ ಕಾಲವಾಗಿದೆ. ನನ್ನ ಎದುರಾಳಿ ವಿರುದ್ಧ ಪ್ರಬಲ ಪೈಪೋಟಿ ನೀಡಲು ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ. ಈ ಹಿಂದೆಯೂ ಇದೇ ತರಬೇತಿ ಪಡೆಯುತ್ತಿದ್ದೆ, ಆದರೆ ಈ ಕಣ್ಣಿಗೆ ಕಾಣದ ವೈರಸ್ ಅನ್ನು ನಾನು ಹೇಗೆ ಸೋಲಿಸಲಿ? ಇಡೀ ಜಗತ್ತೇ ಇದರ ವಿರುದ್ಧ ಹೋರಾಡುತ್ತಿದೆ. ನನ್ನ ಮುಂದೆ ಹಲವಾರು ಪ್ರಶ್ನೆಗಳು ಸುಳಿದಾಡುತ್ತಿದೆ. ಅಲ್ಲದೇ ಡೆನ್ಮಾರ್ಕ್ ಓಪನ್ ನಲ್ಲಿ ನಾನು ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಂಧು ತಿಳಿಸಿದ್ದಾರೆ.

ನಾನು ನನ್ನ ಬ್ಯಾಡ್ಮಿಂಟನ್ ಕ್ಷೇತ್ರದಿಂದ ನಿವೃತ್ತಿ ಪಡೆಯುತ್ತಿಲ್ಲ, ಬದಲಾಗಿ ಪ್ರಸ್ತುತ ಕೋವಿಡ್ ನ ಸನ್ನಿವೇಶದಿಂದ ನಾನು ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡು ನೆಗೆಟಿವಿಟಿಯಿಂದ, ಪ್ರಸ್ತುತ ಭಯದಿಂದ ಮತ್ತು ಅನಿಶ್ಚಿತತೆಯಿಂದ ನಿವೃತ್ತಿಯಾಗಿ ಮುಂದಿನ ಸ್ಪರ್ಧೆಗೆ ಹೊಸ ಹುಮ್ಮಸ್ಸಿನಿಂದ ಆಟವಾಡಲು ಅಣಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧು ಟ್ವೀಟ್ ನ ಕೊನೆಯಲ್ಲಿ ಟ್ವಿಸ್ಟ್ ನೀಡುವ ಮೂಲಕ ಅಭಿಮಾನಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next