Advertisement
ಕರಾವಳಿಯ ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಾಲ್ವರು ಸದಸ್ಯರ ಅವಧಿ ಜೂ. 10ಕ್ಕೆ ಕೊನೆಯಾಗಲಿದ್ದು, ಆ ಸ್ಥಾನಗಳಿಗೆ ಜೂ. 10ರಂದು ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಈಗಾಗಲೇ ಕಣಕ್ಕಿಳಿಸಿವೆ. ಇದರಲ್ಲಿ ಕರಾವಳಿಗರಿಗೆ ಅವಕಾಶ ಸಿಕ್ಕಿಲ್ಲ. ಆಸ್ಕರ್ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು, 2016ರ ಜೂ. 11ರಂದು ಕರ್ನಾಟಕ ವಿಧಾನಸಭೆಯಿಂದ ಕಾಂಗ್ರೆಸ್ ಹಾಲಿ ಅಭ್ಯರ್ಥಿ ಜೈರಾಂ ರಮೇಶ್ ಜತೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಸ್ಕರ್ ನಿಧನದ ಹಿನ್ನೆಲೆಯಲ್ಲಿ ಅವರ ಸ್ಥಾನ ಕರಾವಳಿಯ ನಾಯಕರಿಗೆ ಲಭಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಿಕ್ಕಿಲ್ಲ. ಹಾಗಾಗಿ ರಾಜ್ಯಸಭೆಯಲ್ಲಿ ಕರ್ನಾಟಕ ಕರಾವಳಿಗರ ಧ್ವನಿ ಮೊಳಗದು.
ಕರಾವಳಿಗರಿಗೆ ರಾಜ್ಯಸಭಾ ಸದಸ್ಯ ಸ್ಥಾನದ ಇತಿಹಾಸ ಮದ್ರಾಸ್ ಆಸೆಂಬ್ಲಿಯಿಂದ ಪ್ರಾರಂಭ ವಾಗಿತ್ತು. ಬಿ.ವಿ. ಕಕ್ಕಿಲ್ಲಾಯ ಅವರು ಮದ್ರಾಸ್ ಅಸೆಂಬ್ಲಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ 1957-60 ರ ವರೆಗೆ ಬೆನಗಲ್ ಶಿವರಾವ್, 1952, 1954ರಲ್ಲಿ ಕೆ.ಎಸ್. ಹೆಗ್ಡೆ, 1972ರಿಂದ 1977ರ ವರೆಗೆ ಟಿ.ಎ. ಪೈ ಸದಸ್ಯರಾಗಿದ್ದರು. 1980ರಲ್ಲಿ ಬಿ. ಇಬ್ರಾಹಿಂಗೆ ಅವಕಾಶ ಲಭಿಸಿತ್ತು. 1994ರಿಂದ 2000 ಹಾಗೂ 2002ರಿಂದ 2008ರ ವರೆಗೆ ಜನಾರ್ದನ ಪೂಜಾರಿ ಪ್ರತಿನಿಧಿಸಿದ್ದರು. ಆಸ್ಕರ್ ಫೆರ್ನಾಂಡಿಸ್ 1998ರಿಂದ 2021ರ ವರೆಗೆ ನಿರಂತರವಾಗಿ 4 ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಈ ಬಾರಿ ಕಾಂಗ್ರೆಸ್‌ನಲ್ಲಿ ರಾಜ್ಯಸಭೆಗೆ ಅಭ್ಯರ್ಥಿ ಯಾಗಿ ಕರಾವಳಿಯ ನಾಯಕರೊಬ್ಬರ ಹೆಸರು ಕೇಳಿಬಂದಿತ್ತು. ಕಳೆದ ಬಾರಿ ಕಾಂಗ್ರೆಸ್ ವಿಧಾನಸಭೆಯಲ್ಲಿ ಹೆಚ್ಚಿನ ಸದಸ್ಯ ಬಲ ಹೊಂದಿದ್ದ ಹಿನ್ನೆಲೆಯಲ್ಲಿ ಎರಡು ಸದಸ್ಯತ್ವ ಅವಕಾಶ ದಿಂದಾಗಿ ಆಸ್ಕರ್ ಮತ್ತು ಜೈರಾಂ ರಮೇಶ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕಾಂಗ್ರೆಸಿಗೆ ಸ್ವಂತ ಬಲದಿಂದ ಒಂದು ಸ್ಥಾನ ಮಾತ್ರ ಗೆಲ್ಲಲು ಮಾತ್ರ ಅವಕಾಶವಿದೆ. ಹಾಗಾಗಿ ಜೈರಾಂ ರಮೇಶ್ ಅವರನ್ನು ಕಣಕ್ಕಿಳಿಸಿದೆ. ಎರಡನೇ ಸ್ಥಾನಕ್ಕೆ ಮನ್ಸೂರ್ ಆಲಿ ಖಾನ್ ಅವರನ್ನು ಆಯ್ಕೆ ಮಾಡಿದೆ.
Related Articles
Advertisement
ಸಚಿವ ಸ್ಥಾನಕರಾವಳಿಯ ನಾಯಕರು ರಾಜ್ಯಸಭಾ ಸದಸ್ಯರಾಗಿದ್ದಾಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಟಿ.ಎ. ಪೈ ಅವರು ರಾಜ್ಯಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಇಂದಿರಾ ಗಾಂಧಿಯವರ ಸರಕಾರದಲ್ಲಿ ರೈಲ್ವೇ, ಬೃಹತ್ ಕೈಗಾರಿಕೆ, ಉಕ್ಕು ಮತ್ತು ಗಣಿ ಖಾತೆಗಳ ಸಚಿವರಾಗಿದ್ದರು. ಆಸ್ಕರ್ ಫೆರ್ನಾಂಡಿಸ್ ಯುಪಿಎ ಸರಕಾರದಲ್ಲಿ ಯೋಜನಾನುಷ್ಠಾನ, ಕಾರ್ಮಿಕ ಇಲಾಖೆ, ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾಗಿದ್ದರು. – ಕೇಶವ ಕುಂದರ್