ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆರಂಭದಲ್ಲಿ ಮುಗ್ಗರಿಸಿದರೂ ನಂತರ ಜಯದ ಲಯ ಕಂಡುಕೊಂಡ ಭಾರತದ ವನಿತೆಯರ ತಂಡ ಇಂದು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ,
ಗ್ರೂಪ್ ಹಂತದ ಕೊನೆಯ ಪಂದ್ಯವಾಡಿದ ಭಾರತ ಇಂದು 4-3 ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲು ಬಾರಿಸಿ ಮಿಂಚಿದರು. 4ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿದ ವಂದನಾ, ನಂತರ 17 ಮತ್ತು 49ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮತ್ತೊಂದು 32ನೇ ನಿಮಿಷದಲ್ಲಿ ನೇಹಾ ಗೋಯಲ್ ಗಳಿಸಿದರು.
ಇದನ್ನೂ ಓದಿ:ಬಿಲ್ಗಾರಿಕೆ: ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ ಅತನು ದಾಸ್
ದಕ್ಷಿಣ ಆಫ್ರಿಕಾ ಪರ 15ನೇ ನಿಮಿಷದಲ್ಲಿ ಟೆರ್ರಿನ್ ಗ್ಲಾಸ್ಬಿ, 30ನೇ ನಿಮಿಷದಲ್ಲಿ ನಾಯಕಿ ಎರಿನ್ ಹಂಟರ್, ಮರಿಜೆನ್ ಮರಾಯಸ್ 39ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಭಾರತ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆಯಲು ಇನ್ನೂ ಅವಕಾಶವಿದೆ. ಇಂದು ಸಂಜೆ ನಡೆಯುವ ಬ್ರಿಟನ್- ಐರ್ಲೆಂಡ್ ಪಂದ್ಯದ ಫಲಿತಾಂಶದ ಮೇಲೆ ಇದು ಅವಲಂಬಿತವಾಗಿದೆ. ಈ ಪಂದ್ಯದಲ್ಲಿ ಐರ್ಲೆಂಡ್ ಸೋತರೆ ಅಥವಾ ಪಂದ್ಯ ಡ್ರಾ ಆದರೆ ಭಾರತಕ್ಕೆ ಕ್ವಾರ್ಟರ್ ಫೈನಲ್ ಟಿಕೆಟ್ ಸಿಗಲಿದೆ.