ಕಿಂಗ್‌ಸ್ಟನ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಜೋಡಿ ಮೊದಲ ವಿಕೆಟ್‌ಗೆ 64 ರನ್ ಬಾರಿಸಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಭದ್ರ ಅಡಿಪಾಯ ಹಾಕಿದ್ದಾರೆ.
ಭಾನುವರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಕೊಹ್ಲಿ ಆರಂಭಿಕನಾಗಿ ಇಳಿದು ಅಚ್ಚರಿ ಮೂಡಿಸಿದರು.
ಧವನ್ ಜತೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 5.3 ಓವರ್‌ಗೆ ತಂಡದ ಮೊತ್ತವನ್ನು 64 ರನ್‌ಗೆ ತೆಗೆದುಕೊಂಡು ಹೋದರು. ಆದರೆ ಈ ಹಂತದಲ್ಲಿ ಕೊಹ್ಲಿ ವೇಗಿ ಕೆಸ್ರಿಸ್ ವಿಲಿಯಮ್ಸ್ ಎಸೆತದಲ್ಲಿ ಸುನೀಲ್ ನಾರಾಯಣ್‌ಗೆ ಕ್ಯಾಚ್ ನೀಡಿದರು. 22 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರು. ಹಾಗೇ ತಂಡದ ಮೊತ್ತ 65 ರನ್ ಆಗುತ್ತಿದ್ದಂತೆ ಧವನ್ ರನೌಟ್‌ಗೆ ಬಲಿಯಾದರು. ರನ್ ಕದಿಯುವಲ್ಲಿ ರಿಷಭ್ ಪಂತ್ ಮತ್ತು ಧವನ್ ನಡುವಿನ ಉಂಟಾದ ಗೊಂದಲ ಭಾರತದ ಮತ್ತೂಂದು ವಿಕೆಟ್ ಕಳೆದುಕೊಳ್ಳುವಂತೆ ಮಾಡಿತು. ಕೇವಲ 12 ಎಸೆತ ಎದುರಿಸಿದ ಧವನ್ 5 ಬೌಂಡರಿ ಸೇರಿದಂತೆ 23 ರನ್ ಬಾರಿಸಿದರು.
ಪಂತ್, ಕಾರ್ತಿಕ್ ಭರ್ಜರಿ ಆಟ:ಕೊಹ್ಲಿ, ಧವನ್ ವಿಕೆಟ್ ಕಳೆದುಕೊಂಡ ಮೇಲೆ 3ನೇ ವಿಕೆಟ್‌ಗೆ ಪಂತ್ ಮತ್ತು ದಿನೇಶ್ ಕಾರ್ತಿಕ್ ಜತೆಯಾದರು. ಈ ಜೋಡಿ ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ನಂತರ ಅಬ್ಬರದ ಆಟ ಆಡಿದರು. ಅಕ್ಷರಶಃ ವಿಂಡೀಸ್ ಬೌಲರ್‌ಗಳನ್ನು ಚೆಂಡಾಡಿದರು. 15 ಓವರ್ ಅಂತ್ಯವಾದಾಗ ಭಾರತ 2 ವಿಕೆಟ್‌ಗೆ 140 ರನ್ ಬಾರಿಸಿತ್ತು. ಪಂತ್ 28 ಎಸೆತಕ್ಕೆ ಅಜೇಯ 24 ರನ್ ಬಾರಿಸಿದರೆ, ಸ್ಫೋಟಕವಾಗಿ ಬ್ಯಾಟಿಂಗ್ ಪ್ರದರ್ಶಿಸಿದ ಕಾರ್ತಿಕ್ 28 ಎಸೆತದಲ್ಲಿ ಅಜೇಯ 48 ರನ್ ಬಾರಿಸಿ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಭಾರತ 15 ಓವರ್‌ಗೆ 140/2 (ಕೊಹ್ಲಿ 39, ದಿನೇಶ್ ಕಾರ್ತಿಕ್ ಅಜೇಯ 48, ರಿಷಭ್ ಪಂತ್ ಅಜೇಯ 24, ಕೆಸ್ರಿಕ್ ವಿಲಿಯಮ್ಸ್ 22ಕ್ಕೆ1)