Advertisement
ಹೈದರಾಬಾದ್‌ನಲ್ಲಿ ಬೆನ್ನಟ್ಟಿಕೊಂಡು ಬಂದು ಬೆದರಿಸಿದ ಪರಿ ಕಂಡಾಗ ನ್ಯೂಜಿಲ್ಯಾಂಡ್ ರಾಯ್‌ಪುರದಲ್ಲಿ ರಾಯಭಾರ ಮಾಡೀತೆಂದೇ ಭಾವಿಸಲಾಗಿತ್ತು. ಆದರೆ ಅದು ಸೊಲ್ಲೆತ್ತದೆ ಶರಣಾಯಿತು. ತೀವ್ರ ಪೈಪೋಟಿ ನಿರೀಕ್ಷಿಸಿದವರಿಗೆ ಈ ಪಂದ್ಯವೊಂದು ಅಚ್ಚರಿಯಾಗಿ, ಒಗಟಾಗಿ ಕಂಡಿತು. ಹೀಗಾಗಿ ಇಂದೋರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸುವ ಲಕ್ಷಣ ದಟ್ಟವಾಗಿದೆ.
ಸರಣಿಯನ್ನು ವಶಪಡಿಸಿಕೊಂಡರೂ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಗೆಹರಿದಿಲ್ಲ ಎಂಬುದನ್ನು ಗಮನಿಸಬೇಕು. ಈವರೆಗಿನ ಎರಡೂ ಪಂದ್ಯಗಳಲ್ಲಿ ಮಿಂಚಿದ್ದು ಆರಂಭಿಕರಾದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ಮಾತ್ರ. ಗಿಲ್ ಹೈದರಾಬಾದ್‌ನಲ್ಲಿ ದ್ವಿಶತಕ ಬಾರಿಸಿದ ಬಳಿಕ ರಾಯ್‌ಪುರದಲ್ಲಿ ಅಜೇಯ 40 ರನ್ ಮಾಡಿ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು. ನಾಯಕ ರೋಹಿತ್ ಕ್ರಮವಾಗಿ 34 ಹಾಗೂ 51 ರನ್ ಕೊಡುಗೆ ಸಲ್ಲಿಸಿದರು. ಆದರೆ ಮಧ್ಯಮ ಕ್ರಮಾಂಕದವರ ಕೊಡುಗೆ ಮಾತ್ರ ಲೆಕ್ಕಕ್ಕೆ ಸಿಗದಷ್ಟು ಕಡಿಮೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
Related Articles
Advertisement
ವಿಶ್ವಕಪ್ ಆರಂಭವಾಗುವುದರೊಳಗೆ ಕೊಹ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ.ಶ್ರೇಯಸ್ ಅಯ್ಯರ್ ಗೈರಲ್ಲಿ ಅವಕಾಶ ಪಡೆದ ಸೂರ್ಯಕುಮಾರ್ ಯಾದವ್ ಇನ್ನೂ “360 ಡಿಗ್ರಿ’ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಹಾಗೆಯೇ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಕೂಡ ಸಿಡಿದಿಲ್ಲ. ಈ ಪಂದ್ಯ ಮುಗಿದೊಡನೆ ಟಿ20 ಸರಣಿ ಇರುವುದರಿಂದ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ವಿಸ್ಫೋಟಕಗೊಳ್ಳಬೇಕಾದ ಅಗತ್ಯವಿದೆ. ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಯೊಂದು ಸಂಭವಿಸಬಹುದಾದರೆ ಮತ್ತೋರ್ವ ಬಿಗ್ ಹಿಟ್ಟರ್ ರಜತ್ ಪಾಟೀದಾರ್ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಾರು.
ಇಂದೋರ್ ಬ್ಯಾಟಿಂಗ್ ಟ್ರ್ಯಾಕ್?ಹೈದರಾಬಾದ್‌ನಲ್ಲಿ ಲಯ ಕಳೆದುಕೊಂಡಿದ್ದ ಭಾರತದ ಬೌಲಿಂಗ್ ವಿಭಾಗ ರಾಯ್‌ಪುರದಲ್ಲಿ ಒಮ್ಮೆಲೇ ಹರಿತಗೊಂಡಿದ್ದನ್ನು ಮರೆಯುವಂತಿಲ್ಲ. ಸಿರಾಜ್-ಶಮಿ ಕಿವೀಸ್ ಮೇಲೆ ಘಾತಕವಾಗಿ ಎರಗಿದ್ದರು. ಇಲ್ಲಿ ಪರಿವರ್ತನೆ ಮಾಡಿಕೊಳ್ಳುವುದಿದ್ದರೆ ಎಕ್ಸ್‌ಪ್ರೆಸ್ ವೇಗಿ ಉಮ್ರಾನ್ ಮಲಿಕ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಆಡಬಹುದು. ಇವರಿಬ್ಬರೂ ಈ ಸರಣಿಯಲ್ಲಿ ಅವಕಾಶ ಪಡೆದಿಲ್ಲ. ಸಣ್ಣ ಬೌಂಡರಿಯಾದ ಕಾರಣ ಇಂದೋರ್ ಪಿಚ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಬೌಲರ್‌ಗಳಿಗೆ ದೊಡ್ಡ ಸವಾಲು ಎದುರಾದೀತು. ನ್ಯೂಜಿಲ್ಯಾಂಡ್‌ಗೆ ಏನಾಯಿತು?
ಹೈದರಾಬಾದ್‌ನಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಬಂದ ನ್ಯೂಜಿಲ್ಯಾಂಡ್ ರಾಯ್‌ಪುರದಲ್ಲಿ 108 ರನ್ನಿಗೆ ಕುಸಿದದ್ದು ಅರ್ಥವಾಗದ ಸಂಗತಿ. ಒಂದಿಷ್ಟಾದರೂ ಪ್ರತಿಷ್ಠೆ ಗಳಿಸಬೇಕಾದರೆ ಅವರ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಚೇತರಿಕೆ ಕಾಣಬೇಕಾದುದು ಅಗತ್ಯ. ಕಳೆದ 30 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕಿವೀಸ್ ಬ್ಯಾಟರ್ 40 ಪ್ಲಸ್ ರನ್ ಗಳಿಸಿದ್ದು ಕೇವಲ 7 ಸಲ. ಬ್ರೇಸ್‌ವೆಲ್ ಮತ್ತು ಸ್ಯಾಂಟ್ನರ್ ಮಾತ್ರ ಹೆಚ್ಚು ಪರಿಣಾಮ ಬೀರಿದ್ದಾರೆ. ಅಗ್ರ ಕ್ರಮಾಂಕದಿಂದ ರನ್ ಹರಿದು ಬಂದರಷ್ಟೇ ನ್ಯೂಜಿಲ್ಯಾಂಡ್‌ನಿಂದ ಪ್ರತಿರೋಧ ನಿರೀಕ್ಷಿಸಬಹುದು.