Advertisement

ಪ್ರಚಂಡ ಪೃಥ್ವಿ; ಪ್ರಥಮ ಟೆಸ್ಟ್‌ನಲ್ಲೇ ಶತಕ ಕೀರ್ತಿ

07:27 AM Oct 05, 2018 | |

ರಾಜ್‌ಕೋಟ್‌: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪ್ರಚಂಡ ರೀತಿಯಲ್ಲಿ ಪದಾರ್ಪಣೆಗೈದ ಮುಂಬಯಿಯ “ಟೀನೇಜ್‌ ಸೆನ್ಸೇಶನ್‌’ ಪೃಥ್ವಿ ಶಾ, ವೆಸ್ಟ್‌ ಇಂಡೀಸ್‌ ಎದುರಿನ ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ ಮೊದಲ ದಿನ “ಬ್ಯಾಟಿಂಗ್‌ ಬಾದ್‌ಶಾ’ ಆಗಿ ಮೆರೆದಿದ್ದಾರೆ. ಅಮೋಘ 134 ರನ್‌ ಸಾಧನೆಯೊಂದಿಗೆ ಆರ್ಭಟಿಸಿದ ಶಾ, ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಸಾಧನೆಗೈದು ಭದ್ರ ಭವಿಷ್ಯದ ಸೂಚನೆಯೊಂದನ್ನು ರವಾನಿಸಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟಿಗೆ 364 ರನ್‌ ಪೇರಿಸಿ ಕೆರಿಬಿಯನ್‌ ಬೌಲರ್‌ಗಳ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾಗಿದೆ.

Advertisement

ಪೃಥ್ವಿ ಶಾ ಜತೆಗೆ ಸ್ಥಳೀಯ ಹೀರೋ ಚೇತೇಶ್ವರ್‌ ಪೂಜಾರ ಕೂಡ ಬ್ಯಾಟಿಂಗಿನಲ್ಲಿ ಮಿಂಚಿ 86 ರನ್‌ ಬಾರಿಸಿದರು. ಆದರೆ ತವರಿನ ಟೆಸ್ಟ್‌ನಲ್ಲಿ ಸತತ 2ನೇ ಶತಕ ಬಾರಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಶಾ-ಪೂಜಾರ ದ್ವಿತೀಯ ವಿಕೆಟಿಗೆ 206 ರನ್‌ ಪೇರಿಸುವ ಮೂಲಕ ಭಾರತದ ಕುಸಿತಕ್ಕೆ ತಡೆಯಾದರು. ಆರಂಭಕಾರ ಕೆ.ಎಲ್‌. ರಾಹುಲ್‌ ಪಂದ್ಯದ 6ನೇ ಎಸೆತದಲ್ಲೇ ಗ್ಯಾಬ್ರಿಯಲ್‌ ಬಲೆಗೆ ಬೀಳುವುದರೊಂದಿಗೆ ಟೀಮ್‌ ಇಂಡಿಯಾ ದೊಡ್ಡ ಆಘಾತವೊಂದಕ್ಕೆ ಸಿಲುಕಿತ್ತು. ರಾಹುಲ್‌ ಖಾತೆ ತೆರೆಯದೆ ವಾಪಸಾಗಿ ನಿರಾಸೆ ಮೂಡಿಸಿದರು. ಆಗ ತಂಡದ ಸ್ಕೋರ್‌ ಕೇವಲ 3 ರನ್‌ ಆಗಿತ್ತು.

ನಾಯಕ ವಿರಾಟ್‌ ಕೊಹ್ಲಿ 72 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಶುಕ್ರವಾರ ಶತಕದ ನಿರೀಕ್ಷೆಯೊಂದನ್ನು ಮೂಡಿಸಿದ್ದಾರೆ. ಇವರೊಂದಿಗೆ ಕ್ರೀಸಿನಲ್ಲಿರುವವರು 17 ರನ್‌ ಮಾಡಿರುವ ಕೀಪರ್‌ ರಿಷಬ್‌ ಪಂತ್‌. ಔಟಾದ ಮತ್ತೋರ್ವ ಆಟಗಾರ ಅಜಿಂಕ್ಯ ರಹಾನೆ (41).
ಕಡೇ ಗಳಿಗೆಯಲ್ಲಿ ನಾಯಕ ಜಾಸನ್‌ ಹೋಲ್ಡರ್‌ ಹಿಂದೆ ಸರಿದದ್ದು, ಮೊದಲೇ ಸಾಮಾನ್ಯ ತಂಡವಾಗಿದ್ದ ವೆಸ್ಟ್‌ ಇಂಡೀಸ್‌ ಪಾಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಹೀಗಾಗಿ ಭಾರತದ ಬ್ಯಾಟಿಂಗ್‌ ಸರದಿಗೆ ಬೆದರಿಕೆಯೊಡ್ಡಲು ಪ್ರವಾಸಿ ತಂಡದ ಯಾವುದೇ ಬೌಲರ್‌ಗಳಿಗೂ ಸಾಧ್ಯವಾಗಲಿಲ್ಲ.

ಎಲ್ಲವೂ ಶತಕದೊಂದಿಗೆ ಆರಂಭ
ಪದಾರ್ಪಣ ಪಂದ್ಯಗಳಲ್ಲೆಲ್ಲ ಶತಕ ಬಾರಿಸುವು ದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ 18ರ ಹರೆಯದ ಪೃಥ್ವಿ ಶಾ, ಟೆಸ್ಟ್‌ ಕ್ರಿಕೆಟ್‌ನಲ್ಲೂ ಇದನ್ನು ಪುನರಾವರ್ತಿಸಿ ವಿಜೃಂಭಿಸಿದರು. ಇದಕ್ಕೂ ಮುನ್ನ ರಣಜಿ ಹಾಗೂ ದುಲೀಪ್‌ ಟ್ರೋಫಿ ಕೂಟದ ಚೊಚ್ಚಲ ಪಂದ್ಯದಲ್ಲೇ ಸೆಂಚುರಿ ಬಾರಿಸಿ ಸುದ್ದಿಯಾಗಿದ್ದರು. ದುಲೀಪ್‌ ಟ್ರೋಫಿ ಇತಿಹಾಸದ “ಕಿರಿಯ ಶತಕವೀರ’ನೆಂಬ ಹೆಗ್ಗಳಿಕೆ ಇವರದ್ದಾಗಿದೆ. 50 ಟೆಸ್ಟ್‌ ಪಂದ್ಯಗಳ ಅನುಭವಿಯಂತೆ ಬ್ಯಾಟಿಂಗ್‌ ನಡೆಸಿದ “ಮುಂಬೈಕರ್‌’, ಆರಂಭದಿಂದಲೇ ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದರು. ಲಂಚ್‌ ವೇಳೆಗಾಗಲೇ 75ರ ಗಡಿ ಮುಟ್ಟಿದ್ದರು. 99 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಇನ್ನೇನು ಟೀಗೆ ತೆರಳಬೇಕೆನ್ನುವಾಗ ಬಿಶೂಗೆ ರಿಟರ್ನ್ ಕ್ಯಾಚ್‌ ನೀಡುವ ಮೂಲಕ ತಮ್ಮ ಸೊಗಸಾದ ಆಟಕ್ಕೆ ತೆರೆ ಎಳೆದರು.

ಪೃಥ್ವಿ ಶಾ ಸಾಧನೆ
ಪೃಥ್ವಿ ಶಾ 99 ಎಸೆತಗಳಲ್ಲಿ ಶತಕ ಪೂರೈಸಿ ದರು. ಇದು ಚೊಚ್ಚಲ ಪಂದ್ಯದಲ್ಲೇ ದಾಖಲಾದ ಅತೀ ವೇಗದ 3ನೇ ಶತಕ. ಶಿಖರ್‌ ಧವನ್‌ 85 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆ (ಆಸ್ಟ್ರೇಲಿಯ ವಿರುದ್ಧದ 2012-13ರ ಮೊಹಾಲಿ ಟೆಸ್ಟ್‌).

Advertisement

ಶಾ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ ಭಾರತದ 2ನೇ, ವಿಶ್ವದ 7ನೇ ಕಿರಿಯ ಕ್ರಿಕೆಟಿಗ (18 ವರ್ಷ, 329 ದಿನ). ಭಾರತೀಯ ದಾಖಲೆ ತೆಂಡುಲ್ಕರ್‌ ಹೆಸರಲ್ಲಿದೆ (17 ವರ್ಷ, 107 ದಿನ).

ಶಾ ಪ್ರಥಮ ದರ್ಜೆ (ರಣಜಿ, ದುಲೀಪ್‌ ಟ್ರೋಫಿ) ಹಾಗೂ ಟೆಸ್ಟ್‌ ಕ್ರಿಕೆಟ್‌ ಗಳೆರಡ ರಲ್ಲೂ ಪದಾರ್ಪಣ ಪಂದ್ಯದಲ್ಲೇ ಶತಕ ಹೊಡೆದ ವಿಶ್ವದ 3ನೇ ಕ್ರಿಕೆಟಿಗ. ಜಿ.ಆರ್‌. ವಿಶ್ವನಾಥ್‌, ಆಸ್ಟ್ರೇಲಿಯದ ಡರ್ಕ್‌ ವೆಲ್‌ಹ್ಯಾಮ್‌ ಉಳಿದಿಬ್ಬರು.

ಶಾ ಟೆಸ್ಟ್‌ ಪಂದ್ಯವೊಂದರ ಮೊದಲ ಎಸೆತ ಎದುರಿಸಿದ ಭಾರತದ ಕಿರಿಯ ಆಟಗಾರ. ಹಿಂದಿನ ದಾಖಲೆ ಬುಧಿ ಕುಂದರನ್‌ ಹೆಸರಲ್ಲಿತ್ತು (20 ವರ್ಷ, 113 ದಿನ; ಆಸ್ಟ್ರೇಲಿಯ ವಿರುದ್ಧದ 1959-60ರ ಟೆಸ್ಟ್‌).

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

ಪೃಥ್ವಿ ಶಾ    ಸಿ ಮತ್ತು ಬಿ ಬಿಶೂ    134
ರಾಹುಲ್‌    ಎಲ್‌ಬಿಡಬ್ಲ್ಯು ಗ್ಯಾಬ್ರಿಯಲ್‌    0
ಪೂಜಾರ    ಸಿ ಡೌರಿಚ್‌ ಲೆವಿಸ್‌    86
ಕೊಹ್ಲಿ    ಬ್ಯಾಟಿಂಗ್‌    72
ರಹಾನೆ    ಸಿ ಡೌರಿಚ್‌ ಬಿ ಚೇಸ್‌    41
 ಪಂತ್‌    ಬ್ಯಾಟಿಂಗ್‌    17

ಇತರ        14
ಒಟ್ಟು  (4 ವಿಕೆಟಿಗೆ)    364
ವಿಕೆಟ್‌ ಪತನ: 1-3, 2-209, 3-232, 4-337.

ಬೌಲಿಂಗ್‌:
ಶಾನನ್‌ ಗ್ಯಾಬ್ರಿಯಲ್‌    18-1-66-1
ಕೀಮೊ ಪೌಲ್‌    10-1-41-0
ಶೆರ್ಮನ್‌ ಲೆವಿಸ್‌    12-0-56-1
ದೇವೇಂದ್ರ ಬಿಶೂ    30-1-113-1
ರೋಸ್ಟನ್‌ ಚೇಸ್‌    16-0-67-1
ಕ್ರೆಗ್‌ ಬ್ರಾತ್‌ವೇಟ್‌    3-0-11-0

Advertisement

Udayavani is now on Telegram. Click here to join our channel and stay updated with the latest news.

Next