ಪೋರ್ಟ್ ಆಫ್ ಸ್ಪೇನ್: ಮುಂಬರುವ ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಅಧಿಕೃತಗೊಂಡಿದೆ. ಈ ಹಿಂದೆ ಪ್ರಕಟವಾದಂತೆ ಇತ್ತಂಡಗಳ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು.
ಕೆರಿಬಿಯನ್ ದ್ವೀಪಕ್ಕೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜು. 20-24). ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದೆಂಬುದು ವಿಂಡೀಸ್ ಕ್ರಿಕೆಟ್ ಪಾಲಿಗೆ ಸಂಭ್ರಮದ ಸಂಗತಿ.
ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತದ ಮೊದಲ ಸರಣಿಯಾಗಲಿದೆ. ಟೆಸ್ಟ್ ಸರಣಿ ಬಳಿಕ ಏಕದಿನ, ಅನಂತರ ಟಿ20 ಮುಖಾಮುಖಿ ನಡೆಯಲಿದೆ.
ಆರಂಭದಲ್ಲಿ 3 ಟಿ20 ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿತ್ತು. ಆದರೆ ಅಮೆರಿಕದಲ್ಲೂ 2 ಪಂದ್ಯಗಳನ್ನು ಆಡಲು ಬಿಸಿಸಿಐ ಒಪ್ಪಿದ ಬಳಿಕ ಟಿ20 ಪಂದ್ಯಗಳ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲಾಯಿತು. ಇವು ಫ್ಲೋರಿಡಾದಲ್ಲಿ ನಡೆಯಲಿವೆ.
“ವೇಳಾಪಟ್ಟಿಯನ್ನು ಅಧಿಕೃತಗೊಳಿಸಿ ಪ್ರಕಟಿಸಲು ಖುಷಿಯಾಗುತ್ತಿದೆ. ಪ್ರವಾಸಿ ಭಾರತ ವಿರುದ್ಧದ ಈ ಸರಣಿ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನ ಮೂಡಿಸಲಿದೆ ಎಂಬ ನಿರೀಕ್ಷೆ ನಮ್ಮದು’ ಎಂಬುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ ಹೇಳಿದರು.