Advertisement

ಮೂರು ಮೈಲುಗಲ್ಲುಗಳ ಮೊಹಾಲಿ ಮುಖಾಮುಖಿ

10:05 PM Mar 03, 2022 | Team Udayavani |

ಮೊಹಾಲಿ: ಒಂದೇ ಟೆಸ್ಟ್‌ ಪಂದ್ಯ ಮೂರು ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಗಲಿರುವ ಕ್ಷಣವಿದು. ಭಾರತ-ಶ್ರೀಲಂಕಾ ನಡುವೆ ಶುಕ್ರವಾರ ಮೊಹಾಲಿಯಲ್ಲಿ ಆರಂಭವಾಗಲಿರುವ ಟೆಸ್ಟ್‌ ಮುಖಾಮುಖೀಗೆ ಇಂಥದೊಂದು ಮಹತ್ವ ಲಭಿಸಿದೆ.

Advertisement

ಮೊದಲಾಗಿ ಇದು ಮಾಜಿ ನಾಯಕ ವಿರಾಟ್‌ ಕೊಹ್ಲಿ ಆಡುತ್ತಿರುವ 100ನೇ ಟೆಸ್ಟ್‌. ಹಾಗೆಯೇ “ವೈಟ್‌ಬಾಲ್‌ ಲೆಜೆಂಡ್‌’ ರೋಹಿತ್‌ ಶರ್ಮ ಭಾರತೀಯ ಟೆಸ್ಟ್‌ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಸಮಯ. ಇವರಿಬ್ಬರ ನಡುವೆ ಪ್ರವಾಸಿ ಶ್ರೀಲಂಕಾ ಪಾಲಿಗೂ ಇದು ಸ್ಮರಣೀಯ ಪಂದ್ಯ. ಅದು 300ನೇ ಟೆಸ್ಟ್‌ ಆಡಲಿಳಿಯಲಿದೆ. ಕೊನೆಯಲ್ಲಿ ಸಂಭ್ರಮಿಸುವವರ್ಯಾರು ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕೌತುಕ!

ಶತಕದ ನಿರೀಕ್ಷೆ :

ವಿರಾಟ್‌ ಕೊಹ್ಲಿ 100ನೇ ಟೆಸ್ಟ್‌ ಆಡಲಿರುವ ಭಾರತದ 12ನೇ ಆಟಗಾರ. ನಿರೀಕ್ಷೆಯೆಂದರೆ, ಇತ್ತೀಚೆಗೆ ಶತಕದ ಬರಗಾಲದಲ್ಲಿರುವ ಕೊಹ್ಲಿ, ತಮ್ಮ “ಶತಕದ ಟೆಸ್ಟ್‌’ನಲ್ಲಿ ಶತಕ ಬಾರಿಸುವರೇ ಎಂಬುದು. ಭಾರತದ ಯಾವ ಬ್ಯಾಟರ್‌ಗಳಿಂದಲೂ ಈ ಸಾಧನೆ ದಾಖಲಾಗಿಲ್ಲ. ಗಾವಸ್ಕರ್‌, ವೆಂಗ್‌ಸರ್ಕಾರ್‌, ಕಪಿಲ್‌, ಸಚಿನ್‌, ದ್ರಾವಿಡ್‌, ಗಂಗೂಲಿ, ಲಕ್ಷ್ಮಣ್‌, ಸೆಹವಾಗ್‌ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಇವರ್ಯಾರಿಗೂ ಸೆಂಚುರಿ ಒಲಿದಿರಲಿಲ್ಲ. ಇದೀಗ ಕೊಹ್ಲಿ ಸರದಿ.

ವಿಶ್ವದ ಕೇವಲ 9 ಬ್ಯಾಟರ್‌ಗಳಷ್ಟೇ ತಮ್ಮ 100ನೇ ಟೆಸ್ಟ್‌ನಲ್ಲಿ ನೂರು ಬಾರಿಸಿದ್ದಾರೆ. ಇವರಲ್ಲಿ ಮೂವರು ಭಾರತದ ವಿರುದ್ಧ ಈ ಸಾಧನೆಗೈದಿದ್ದಾರೆ.

Advertisement

ರೋಹಿತ್‌ ಸಾರಥ್ಯ :

ಈ 90 ವರ್ಷಗಳ ಅವಧಿಯಲ್ಲಿ ಕರ್ನಲ್‌ ಸಿ.ಕೆ. ನಾಯ್ಡು ಅವರಿಂದ ಮೊದಲ್ಗೊಂಡು ವಿರಾಟ್‌ ಕೊಹ್ಲಿ ತನಕ ಭಾರತ 34 ಟೆಸ್ಟ್‌ ನಾಯಕರನ್ನು ಕಂಡಿದೆ. ರೋಹಿತ್‌ ಶರ್ಮ ಭಾರತದ 35ನೇ ಟೆಸ್ಟ್‌ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಏಕಕಾಲಕ್ಕೆ ಮೂರೂ ಮಾದರಿಗಳಲ್ಲಿ ಭಾರತ ತಂಡದ ನೇತೃತ್ವ ವಹಿಸುತ್ತಿರುವ ಕೇವಲ ಮೂರನೇ ಕ್ರಿಕೆಟಿಗ. ಧೋನಿ ಮತ್ತು ಕೊಹ್ಲಿ ಉಳಿದಿಬ್ಬರು.

ರೋಹಿತ್‌ ಶರ್ಮ ಅವರಿಗೆ ಈಗಾಗಲೇ 34 ವರ್ಷ. ಟೆಸ್ಟ್‌ ಕ್ಯಾಪ್ಟನ್ಸಿ ಲಭಿಸುವಾಗ ವಿಳಂಬವಾಗಿದೆ ಎಂಬುದನ್ನು ಒಪ್ಪಲೇಬೇಕು. ಹೆಚ್ಚೆಂದರೆ ಇನ್ನು 3 ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದು. ಅಷ್ಟರಲ್ಲಿ ಅವರು ಭಾರತವನ್ನು ಎಷ್ಟು ಎತ್ತರಕ್ಕೆ ಏರಿಸಬಲ್ಲರು ಎಂಬುದೊಂದು ನಿರೀಕ್ಷೆ.

ಟೀಮ್‌ ಕಾಂಬಿನೇಶನ್‌ :

ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಕೈಬಿಟ್ಟಿರುವುದರಿಂದ ಭಾರತ ಮಿಡ್ಲ್ ಆರ್ಡರ್‌ನಲ್ಲಿ ಬೇರೊಂದು ಕಾಂಬಿನೇಶನ್‌ ರೂಪಿಸಿಕೊಳ್ಳಬೇಕಿದೆ. ಇಲ್ಲಿ ರೇಸ್‌ನಲ್ಲಿರುವವರು ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಮತ್ತು ಹನುಮ ವಿಹಾರಿ. ಇವರಲ್ಲಿ ಗಿಲ್‌ ಮೂಲತಃ ಓಪನರ್‌. ಇವರನ್ನು ವನ್‌ಡೌನ್‌ನಲ್ಲಿ ಆಡಿಸುವ ಸಾಧ್ಯತೆ ಇದೆ. ಇಲ್ಲವಾದರೆ ಅಯ್ಯರ್‌ ಬರಲಿದ್ದಾರೆ. ರಹಾನೆ ಸ್ಥಾನಕ್ಕೆ ವಿಹಾರಿ ಫಿಟ್‌ ಆಗಬಲ್ಲರು.

ಆಲ್‌ರೌಂಡರ್‌ ಸ್ಥಾನ ಜಡೇಜ ಪಾಲಾಗಲಿದೆ. ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಫಿಟ್‌ ಇದ್ದರಷ್ಟೇ ಆಡಬಲ್ಲರು. ಇಲ್ಲವಾದರೆ ಈ ಸ್ಥಾನ ಜಯಂತ್‌ ಯಾದವ್‌ಗೆ ಲಭಿಸಲಿದೆ. ಮೂರನೇ ಸ್ಪಿನ್ನರ್‌ ಆಗಿ ವಿಹಾರಿ ಅವರನ್ನು ಬಳಸಿಕೊಳ್ಳಬಹುದು. ವೇಗಿಗಳ ವಿಭಾಗದಲ್ಲಿ ಶಮಿ, ಬುಮ್ರಾ, ಸಿರಾಜ್‌ಗೆ ಅವಕಾಶ ಹೆಚ್ಚು. ಉಮೇಶ್‌ ಕೂಡ ರೇಸ್‌ನಲ್ಲಿದ್ದಾರೆ.

ಲಂಕೆಗೆ ಕಠಿನ ಸವಾಲು :

ಈಗಾಗಲೇ ಟಿ20ಯಲ್ಲಿ ವೈಟ್‌ವಾಶ್‌ ಅನುಭವಿಸಿರುವ ಶ್ರೀಲಂಕಾ ಪಾಲಿಗೆ ಟೆಸ್ಟ್‌ ಸವಾಲು ಕೂಡ ಸುಲಭದ್ದಲ್ಲ. ತಂಡವಿನ್ನೂ ಗತಕಾಲದ ವೈಭವಕ್ಕೆ ಮರಳಿಲ್ಲ. ನಾಯಕ ದಿಮುತ್‌ ಕರುಣಾರತ್ನೆ ಅವರ ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಚಂಡಿಮಾಲ್‌, ಮ್ಯಾಥ್ಯೂಸ್‌ ಅವರಂಥ ಹಿರಿಯರಿದ್ದರೂ ಇವರೆಲ್ಲ ಚಾರ್ಮ್ ಕಳೆದು ಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್‌ ಎಂಬುಲ್ದೇನಿಯ ಮ್ಯಾಜಿಕ್‌ ಮಾಡಿದರೆ ಹೋರಾಟವೊಂದು ಕಂಡುಬಂದೀತು.

ಮೊಹಾಲಿ ಟ್ರ್ಯಾಕ್‌ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚು. ಆಗ ನಾಲ್ಕೇ ದಿನಗಳಲ್ಲಿ ಅಥವಾ ಇದಕ್ಕೂ ಬೇಗ ಪಂದ್ಯ ಮುಗಿಯಬಹುದು!

299 ಟೆಸ್ಟ್‌ಗಳಲ್ಲಿ  ಶ್ರೀಲಂಕಾ :

ಟೆಸ್ಟ್‌: 299

ಜಯ: 95

ಸೋಲು: 113

ಡ್ರಾ: 91

99  ಟೆಸ್ಟ್‌ಗಳಲ್ಲಿ  ಕೊಹ್ಲಿ :

99-ಟೆಸ್ಟ್‌

7,962-ರನ್‌

50.39-ಸರಾಸರಿ

27-ಶತಕ

28-ಅರ್ಧ ಶತಕ

254-ಸರ್ವಾಧಿಕ  ಅಜೇಯ

896-ಬೌಂಡರಿ

24-ಸಿಕ್ಸರ್‌

100-ಕ್ಯಾಚ್‌

ಕೊಹ್ಲಿ  ಪ್ರಮುಖ ಸಾಧನೆ :

  • ಭಾರತದ ನಾಯಕನಾಗಿ ಅತ್ಯಧಿಕ  254 ರನ್‌ (ಅಜೇಯ).
  • ಸರಣಿಯೊಂದರಲ್ಲಿ ಅತ್ಯಧಿಕ 4 ಶತಕ, ಗಾವಸ್ಕರ್‌ ಜತೆ ಜಂಟಿ ದಾಖಲೆ.
  • 40 ಪಂದ್ಯಗಳಲ್ಲಿ ಗೆಲುವು; ಈ ಯಾದಿಯಲ್ಲಿ 4ನೇ ಸ್ಥಾನ.
  • ಭಾರತದ ಪರ 4ನೇ ಅತ್ಯಧಿಕ ಶತಕ (27).
  • ನಾಯಕನಾಗಿ ಅತೀ ಕಡಿಮೆ ಟೆಸ್ಟ್‌ ಗಳಲ್ಲಿ 5 ಸಾವಿರ ರನ್‌.
  • ಭಾರತದ ಪರ ಅತ್ಯಧಿಕ  7 ದ್ವಿಶತಕ.
  • ನಾಯಕನಾಗಿ  ಅತ್ಯಧಿಕ  7 ದ್ವಿಶತಕ.

ಮುಖಾಮುಖಿ :

ಟೆಸ್ಟ್‌: 44

ಭಾರತ ಜಯ: 20

ಶ್ರೀಲಂಕಾ ಜಯ: 07

ಡ್ರಾ: 17

 

 ಆರಂಭ: 9.30

 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next