Advertisement

ಭಾರತಕ್ಕೆ ಸರಣಿ ಗೆಲುವಿನ ನಿರೀಕ್ಷೆ: ಇಂದು ದ.ಆಫ್ರಿಕಾ ವಿರುದ್ಧ ಐದನೇ  ಟಿ20 ಪಂದ್ಯ

10:57 PM Jun 18, 2022 | Team Udayavani |

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದೆದುರು ಸತತ ಎರಡು ಗೆಲುವಿ ನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ಯುವ ತಂಡವು ರವಿವಾರ ನಡೆಯುವ ಸರಣಿ ನಿರ್ಣಾಯಕ ಐದನೇ ಪಂದ್ಯದಲ್ಲಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಹೋರಾಡಲಿದೆ. ಸರಣಿ ಗೆಲ್ಲುವುದೇ ತಂಡದ ಗುರಿಯಾಗಿದೆ.

Advertisement

ಕಳೆದ ಎಂಟು ದಿನಗಳ ಅಂತರದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಲ್ಕು ಟಿ20 ಪಂದ್ಯಗಳು ನಡೆದಿವೆ. ಯುವ ಆಟಗಾರರನ್ನು ಒಳಗೊಂಡ ಭಾರತೀಯ ತಂಡ ಆರಂಭದ ಎರಡು ಪಂದ್ಯಗಳಲ್ಲಿ ಸೋತಿತ್ತು. ಆದರೆ ವಿಶಾಖಪಟ್ಟಣ ಮತ್ತು ರಾಜ್‌ಕೋಟ್‌ನಲ್ಲಿ ಭರ್ಜರಿ ಅಂತರದ ಗೆಲುವು ಸಾಧಿಸಿದ್ದ ಭಾರತ ಸರಣಿ ನಿರ್ಣಾಯಕದಲ್ಲೂ ಗೆಲ್ಲುವ ಫೇವರಿಟ್‌ ತಂಡವಾಗಿ ಕಾಣಿಸಿಕೊಂಡಿದೆ.

ಮೂರನೇ ಪಂದ್ಯವನ್ನು 47 ಮತ್ತು ನಾಲ್ಕನೇ ಪಂದ್ಯವನ್ನು 82 ರನ್ನುಗಳಿಂದ ಗೆದ್ದಿರುವ ಭಾರತವು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದೆ. ಈ ಎರಡೂ ವಿಭಾಗಗಳಲ್ಲಿ ಪ್ರವಾಸಿ ತಂಡವನ್ನು ಕಟ್ಟಿ ಹಾಕಲು ಯಶಸ್ವಿಯಾಗಿರುವ ಭಾರತ ತಂಡ ಐದನೇ ಪಂದ್ಯದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ.

ಈ ಸರಣಿಯಲ್ಲಿ ದಿನೇಶ್‌ ಕಾರ್ತಿಕ್‌ ನಿರೀಕ್ಷಿತ ನಿರ್ವಹಣೆ ನೀಡಿದ್ದಾರೆ. ಬೌಲಿಂಗ್‌ನಲ್ಲಿ ಹರ್ಷಲ್‌ ಪಟೇಲ್‌ ಮತ್ತು ಆವೇಶ್‌ ಖಾನ್‌ ಮಿಂಚಿದ್ದಾರೆ. ಇನ್ನು ಯಜುವೇಂದ್ರ ಚಹಲ್‌ ತನ್ನ ಐಪಿಎಲ್‌ ತವರು ಮೈದಾನದಲ್ಲಿ ನಿರ್ಣಾಯಕ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದರೆ ಭಾರತ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ವೇಳೆ ಪಂತ್‌ ನಾಯಕತ್ವದಲ್ಲಿ ಭಾರತೀಯ ತಂಡ ಸರಣಿ ಗೆದ್ದರೆ ಮುಂದಿನ ಸರಣಿಗೂ ಪಂತ್‌ ಅವರನ್ನು ನಾಯಕತ್ವದಲ್ಲಿ ಮುಂದುವರಿಸುವ ಸಾಧ್ಯತೆಯಿದೆ. ಆಗ ಹಾರ್ದಿಕ್‌ ಪಾಂಡ್ಯ, ಕೆಎಲ್‌ ರಾಹುಲ್‌ ಕೂಡ ನಾಯಕತ್ವಕ್ಕೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

Advertisement

ಅಗ್ರ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌ ಮತ್ತು ಶ್ರೇಯಸ್‌ ಅಯ್ಯರ್‌ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಇವರೆಲ್ಲ ಭಾರತೀಯ ನೆಲದಲ್ಲಿ ಉತ್ತಮವಾಗಿ ಆಡಿದ್ದರೂ ವಿದೇಶದಲ್ಲಿ ಹೇಗೆ ಆಡುತ್ತಾರೆ ಎಂಬ ಅನುಮಾನ ಇದ್ದೇ ಇರಲಿದೆ. ಈ ಬಗ್ಗೆಯೂ ಕೋಚ್‌ ರಾಹುಲ್‌ ದ್ರಾವಿಡ್‌ ಚಿಂತನೆ ಮಾಡಲಿದ್ದಾರೆ.

ಶ್ರೇಯಸ್‌ ಅಯ್ಯರ್‌ ಈ ಸರಣಿಯುದ್ದಕ್ಕೂ ಆಡಿದ್ದಾರೆ. ಇದರಿಂದಾಗಿ ಮುಂದಿನ ಅಯರ್‌ಲ್ಯಾಂಡ್‌ ವಿರುದ್ಧದ ಟಿ20 ಪಂದ್ಯಕ್ಕಾಗಿ ಅವರ ಬದಲು ಸೂರ್ಯಕುಮಾರ್‌ ಯಾದವ್‌ ಆಡಲಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಐಸಿಸಿ ಕೂಟಗಳು ನಡೆಯಲಿರುವ ಕಾರಣ ದಿನೇಶ್‌ ಕಾರ್ತಿಕ್‌ ಇನ್ನಷ್ಟು ಉತ್ತಮ ಆಟ ಪ್ರದರ್ಶಿಸಬೇಕಾಗಿದೆ. ನಾಲ್ಕನೇ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿರುವ ಅವರು ನಿರ್ಣಾಯಕ ಪಂದ್ಯದಲ್ಲೂ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ಇಡಲಾಗಿದೆ.

ಬೌಲರ್‌ಗಳ ಪೈಕಿ ಭುವನೇಶ್ವರ್‌ ಕುಮಾರ್‌ ಹೊಸ ಚೆಂಡಿನೊಂದಿಗೆ ಗಮನಾರ್ಹ ದಾಳಿ ಸಂಘಟಿಸುವ ಸಾಧ್ಯತೆಯಿದೆ. ಆವೇಶ್‌ ಖಾನ್‌ ಮತ್ತೂಮ್ಮೆ ದಕ್ಷಿಣ ಆಫ್ರಿಕಾದ ಮೇಲೆ ದಾಳಿಗೆ ಸಿದ್ಧವಾಗಿದ್ದಾರೆ. ಸ್ಪಿನ್ನರ್‌ಗಳು ಈ ಸರಣಿಯಲ್ಲಿ ಉತ್ತಮ ಪ್ರಯತ್ನ ನಡೆಸಿದ್ದಾರೆ. ಅಕ್ಷರ್‌ ಪಟೇಲ್‌, ಚಹಲ್‌ ಇನ್ನಷ್ಟು ಬಿಗು ದಾಳಿ ಸಂಘಟಿಸಿದರೆ ಭಾರತ ಗೆಲ್ಲಬಹುದು.

ಬವುಮ ಅನುಮಾನ ?
ನಾಯಕ ತೆಂಬ ಬವುಮ ಗಾಯದಿಂದ ಚೇತರಿಸಿಕೊಳ್ಳದಿದ್ದರೆ ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಇದರಿಂದಾಗಿ ತಂಡ ಒಳ್ಳೆಯ ನಾಯಕ ಮತ್ತು ಆಟಗಾರನೋರ್ವನನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಕಂಠೀರವದಲ್ಲಿ ವಾಹನ ನಿಲುಗಡೆ ಇಲ್ಲ
ಬೆಂಗಳೂರು: ರವಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ 5ನೇ ಟಿ20 ಪಂದ್ಯವನ್ನು ನೋಡಲು ಆಗಮಿಸುವ ಅಭಿಮಾನಿಗಳಿಗಾಗಿ ಕರ್ನಾಟಕ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಹಲವು ವ್ಯವಸ್ಥೆಗಳನ್ನು ಮಾಡಿದೆ. ಆದರೆ ವಾಹನ ನಿಲುಗಡೆಗೆ ಮಾಡಿದ್ದ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ. ಈ ಮುಂಚೆ ಶ್ರೀ ಕಂಠೀರವ ಮೈದಾನದಲ್ಲಿ ವಾಹನ ನಿಲ್ಲಿಸಬಹುದೆಂದು ಕೆಎಸ್‌ಸಿಎ ತಿಳಿಸಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಂಠೀರವದಲ್ಲಿ ಅಭಿಮಾನಿ ಗಳು ವಾಹನ ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇದರ ಬದಲು ಶಾಂತಿನಗರ ಬಸ್‌ ನಿಲ್ದಾಣ, ಯುಬಿ ಸಿಟಿ ಮಾಲ್‌, ಸೇಂಟ್‌ ಜೋಸೆಫ್ ಬಾಲಕರ ಪ್ರೌಢಶಾಲೆ (ಮ್ಯೂಸಿಯಂ ರಸ್ತೆ), ಸೇಂಟ್‌ ಜೋಸೆಫ್ ಇಂಡಿಯನ್‌ ಪ್ರೌಢಶಾಲೆಯಲ್ಲಿ (ವಿಟuಲ ಮಲ್ಯ ರಸ್ತೆ) ವಾಹನಗಳನ್ನು (ದ್ವಿಚಕ್ರ ಮತ್ತು ಕಾರುಗಳು) ನಿಲ್ಲಿಸಬಹುದು ಎಂದು ತಿಳಿಸಿದೆ.

ಪಂದ್ಯ ಆರಂಭ ಸಂಜೆ ರಾತ್ರಿ 7:00

Advertisement

Udayavani is now on Telegram. Click here to join our channel and stay updated with the latest news.

Next