Advertisement

ಹರಿಣಗಳ ಹೆಣೆದ “ವಿರಾಟ”ಭಾರತ

06:00 AM Feb 02, 2018 | Team Udayavani |

ಡರ್ಬನ್‌: ಡರ್ಬನ್‌ನ “ಕಿಂಗ್ಸ್‌ಮೀಡ್‌’ ಸ್ಟೇಡಿಯಂನಲ್ಲಿ ಟೀಮ್‌ ಇಂಡಿಯಾವೇ ಕಿಂಗ್‌ ಆಗಿ ಮೆರೆದಿದೆ. ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಇದು ಡರ್ಬನ್‌ನಲ್ಲಿ ಆಫ್ರಿಕಾ ವಿರುದ್ಧ ಭಾರತ ಸಾಧಿಸಿದ ಮೊದಲ ಗೆಲುವು.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ದ. ಆಫ್ರಿಕಾ 8 ವಿಕೆಟಿಗೆ 269 ರನ್‌ ಪೇರಿಸಿದರೆ, ಭಾರತ 45.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 270 ರನ್‌ ಬಾರಿಸಿತು. ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ 33ನೇ ಶತಕದೊಂದಿಗೆ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು (112). ಉಳಿದಂತೆ ರೋಹಿತ್‌ ಶರ್ಮ 20, ಶಿಖರ್‌ ಧವನ್‌ 35, ಅಜಿಂಕ್ಯ ರಹಾನೆ 79 ರನ್‌ ಹೊಡೆದರು. ಕೊಹ್ಲಿ-ರಹಾನೆ ಜೋಡಿಯ 189 ರನ್‌ ಜತೆಯಾಟ ಭಾರತದ ಜಯದಲ್ಲಿ ನಿರ್ಣಾಯಕವೆನಿಸಿತು. 

ದಕ್ಷಿಣ ಆಫ್ರಿಕಾ ಹಾಶಿಮ್‌ ಆಮ್ಲ (18) ಅವರನ್ನು ಬೇಗನೇ ಕಳೆದುಕೊಂಡಿತು. ಆಗ 8ನೇ ಓವರಿನಲ್ಲಿ 30 ರನ್‌ ದಾಖಲಾಗಿತ್ತು. ಬಳಿಕ ಕ್ವಿಂಟನ್‌ ಡಿ ಕಾಕ್‌ ಅವರನ್ನು ಕೂಡಿಕೊಂಡ ಡು ಪ್ಲೆಸಿಸ್‌ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ 15ನೇ ಓವರಿನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದ ಚಾಹಲ್‌ ಭಾರತಕ್ಕೆ ಮೇಲುಗೈ ಒದಗಿಸಿದರು. 

ಆಫ್ರಿಕಾ ಕ್ಷಿಪ್ರ ಕುಸಿತ: ಮೊದಲ ಪವರ್‌ ಪ್ಲೇ ಅವಧಿಯಲ್ಲಿ ಆಫ್ರಿಕಾ ಒಂದು ವಿಕೆಟಿಗೆ 49 ರನ್‌ ಮಾಡಿತ್ತು. 49 ಎಸೆತಗಳಿಂದ 34 ರನ್‌ ಹೊಡೆದ ಡಿ ಕಾಕ್‌ (4 ಬೌಂಡರಿ) ನಿರ್ಗಮಿಸಿದೊಡನೆ ದಕ್ಷಿಣ ಆಫ್ರಿಕಾ ಕ್ಷಿಪ್ರ ಕುಸಿತವೊಂದನ್ನು ಕಂಡಿತು. ಐಡನ್‌ ಮಾರ್ಕ್‌ ರಮ್‌ (9), ಜೆಪಿ ಡ್ಯುಮಿನಿ (12), ಡೇವಿಡ್‌ ಮಿಲ್ಲರ್‌ (7) ಬಹಳ ಬೇಗ ಪೆವಿಲಿಯನ್‌ ಸೇರಿಕೊಂಡರು. 51 ರನ್‌ ಅಂತರದಲ್ಲಿ ಆತಿಥೇಯರ 4 ವಿಕೆಟ್‌ ಹಾರಿಸಿದ ಭಾರತ ಸ್ಪಷ್ಟ ಮೇಲುಗೈ ಸೂಚನೆಯೊಂದನ್ನು ನೀಡಿತು. 

ಭುವನೇಶ್ವರ್‌ ಮತ್ತು ಬುಮ್ರಾ ಎಸೆತಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ದಾಳಿಗಿಳಿದೊಡನೆ ಕೈ ಕಟ್ಟಿ ಹಾಕಿದಂತಾಯಿತು. ಈ ಸಂದರ್ಭದಲ್ಲೇ ತಂಡದ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಸಂಭವಿಸಿತು. ಆದರೆ ಇನ್ನೊಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಡು ಪ್ಲೆಸಿಸ್‌ ಮಾತ್ರ ಭಾರತದ ಬೌಲರ್‌ಗಳಿಗೆ ಕಗ್ಗಂಟಾಗಿಯೇ ಉಳಿದರು.

Advertisement

ಕೊಹ್ಲಿ, ರಹಾನೆ ಭರ್ಜರಿ ಬ್ಯಾಟಿಂಗ್‌: ಗುರಿ ಬೆನ್ನುಹತ್ತಿದ್ದ ಭಾರತಕ್ಕೆ ಆರಂಭಿಕರಾದ ರೋಹಿತ್‌ ಶರ್ಮ (20 ರನ್‌), ಶಿಖರ್‌ ಧವನ್‌ (35 ರನ್‌) ಅವರಿಂದ ಭದ್ರ ಅಡಿಪಾಯಸಿಗಲಿಲ್ಲ. ಆದರೆ 3ನೇ ವಿಕೆಟ್‌ಗೆ ಜತೆಯಾದ ನಾಯಕ ವಿರಾಟ್‌ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಭರ್ಜರಿ ಜತೆಯಾಟದ ಮೂಲಕ ಹರಿಣಗಳಿಗೆ ಸೋಲಿನ ರುಚಿ ತೋರಿಸಿದರು. ಕೊಹ್ಲಿ 119 ಎಸೆತಕ್ಕೆ 112 ರನ್‌ 
ದಾಖಲಿಸಿದರು. ಅವರ ಆಟದಲ್ಲಿ 10 ಬೌಂಡರಿ ಸೇರಿತ್ತು. ಇದು ಕೊಹ್ಲಿಗೆ ಏಕದಿನದಲ್ಲಿ 33ನೇ ಶತಕವಾಗಿದೆ. ರಹಾನೆ 86 ಎಸೆತದಲ್ಲಿ 79 ರನ್‌ ಬಾರಿಸಿ ಔಟ್‌ ಆದರು. ಅವರ ಆಟದಲ್ಲಿ 5 ಬೌಂಡರಿ, 2 ಸಿಕ್ಸರ್‌ ಸೇರಿತ್ತು. 

ಡು ಪ್ಲೆಸಿಸ್‌ ಕಪ್ತಾನನಾಟ: 117ನೇ ಏಕದಿನ ಪಂದ್ಯ ಆಡಲಿಳಿದಿದ್ದ ಡು ಪ್ಲೆಸಿಸ್‌, 9ನೇ ಶತಕ ಬಾರಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಹರಿಣಗಳ ಕಪ್ತಾನ ಒಟ್ಟು 112 ಎಸೆತಗಳನ್ನು ನಿಭಾಯಿಸಿ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. 101 ಎಸೆತಗಳಿಂದ ಅವರ ಶತಕ ಪೂರ್ತಿಗೊಂಡಿತು. ನಾಯಕನಿಗೆ ಕ್ರಿಸ್‌ ಮಾರಿಸ್‌ ಮತ್ತು ಆ್ಯಂಡಿಲ್‌ ಫೆಲುಕ್ವಾಯೊ ಬೆಂಬಲ ನೀಡಿದರು. ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಮಾರಿಸ್‌ ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರು. 

ಕ್ರಿಸ್‌ ಮಾರಿಸ್‌ ಗಳಿಕೆ 37 ರನ್‌ (43 ಎಸೆತ, 4 ಬೌಂಡರಿ, 1 ಸಿಕ್ಸರ್‌). ಡು ಪ್ಲೆಸಿಸ್‌ ಹೊರತುಪಡಿಸಿದರೆ ಆಫ್ರಿಕಾ ಸರದಿಯಲ್ಲಿ ಮಾರಿಸ್‌ ಅವರದೇ ಹೆಚ್ಚಿನ ಗಳಿಕೆ. ಇವರಿಬ್ಬರ 6ನೇ ವಿಕೆಟ್‌ ಜತೆಯಾಟದಲ್ಲಿ 74 ರನ್‌ ಒಟ್ಟುಗೂಡಿತು. ಇದು ಆಫ್ರಿಕಾ ಇನ್ನಿಂಗ್ಸಿನ ಟರ್ನಿಂಗ್‌ ಪಾಯಿಂಟ್‌ ಎನಿಸಿತು. ಅಜೇಯ 27 ರನ್‌ ಮಾಡಿದ ಫೆಲಿಕ್ವಾಯೊ 7ನೇ ವಿಕೆಟಿಗೆ ನಾಯಕನೊಂದಿಗೆ 56 ರನ್‌ ಒಟ್ಟುಗೂಡಿಸುವಲ್ಲಿ ನೆರವಾದರು. 

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ

ಕ್ವಿಂಟನ್‌ ಡಿ ಕಾಕ್‌    ಎಲ್‌ಬಿಡಬ್ಲ್ಯು ಚಾಹಲ್‌    34
ಹಾಶಿಮ್‌ ಆಮ್ಲ    ಎಲ್‌ಬಿಡಬ್ಲ್ಯು ಬುಮ್ರಾ    16
ಫಾ ಡು ಪ್ಲೆಸಿಸ್‌    ಸಿ ಪಾಂಡ್ಯ ಬಿ ಭುವನೇಶ್ವರ್‌    120
ಐಡನ್‌ ಮಾರ್ಕ್‌ರಮ್‌    ಸಿ ಪಾಂಡ್ಯ ಬಿ ಚಾಹಲ್‌    9
ಜೆಪಿ ಡ್ಯುಮಿನಿ    ಬಿ ಕುಲದೀಪ್‌    12
ಡೇವಿಡ್‌ ಮಿಲ್ಲರ್‌    ಸಿ ಕೊಹ್ಲಿ ಬಿ ಕುಲದೀಪ್‌    7
ಕ್ರಿಸ್‌ ಮಾರಿಸ್‌    ಬಿ ಕುಲದೀಪ್‌    37
ಆ್ಯಂಡಿಲ್‌ ಫೆಲುಕ್ವಾಯೊ    ಔಟಾಗದೆ    27
ಕಾಗಿಸೊ ರಬಾಡ    ರನೌಟ್‌    1
ಮಾರ್ನೆ ಮಾರ್ಕೆಲ್‌    ಔಟಾಗದೆ    0

ಇತರ        6
ಒಟ್ಟು  (8 ವಿಕೆಟಿಗೆ)        269
ವಿಕೆಟ್‌ ಪತನ: 1-30, 2-83, 3-103, 4-122, 5-134, 6-208, 7-264, 8-268.

ಬೌಲಿಂಗ್‌:

ಭುವನೇಶ್ವರ್‌ ಕುಮಾರ್‌        10-1-71-1
ಜಸ್‌ಪ್ರೀತ್‌ ಬುಮ್ರಾ        10-0-56-1
ಹಾರ್ದಿಕ್‌ ಪಾಂಡ್ಯ        7-0-41-0
ಯಜುವೇಂದ್ರ ಚಾಹಲ್‌        10-0-45-2
ಕುಲದೀಪ್‌ ಯಾದವ್‌        10-0-34-3
ಕೇದಾರ್‌ ಜಾಧವ್‌        3-0-19-0

ಭಾರತ 45.3 ಓವರ್‌ಗೆ 270/4: ರೋಹಿತ್‌ ಶರ್ಮ 20, ಶಿಖರ್‌ ಧವನ್‌ 35, ವಿರಾಟ್‌ ಕೊಹ್ಲಿ 112, ಅಜಿಂಕ್ಯ ರಹಾನೆ 79, ಹಾರ್ದಿಕ್‌ ಪಾಂಡ್ಯ 3 , ಎಂ ಎಸ್‌ ಧೋನಿ 4 
ಫೆಹ್ಲುಕ್ವಾಯೋ 42ಕ್ಕೆ 2 

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

Advertisement

Udayavani is now on Telegram. Click here to join our channel and stay updated with the latest news.

Next