Advertisement

ಗಬ್ಟಾ’ದಲ್ಲೂ ಅಬ್ಬರಿಸಲಿ ಭಾರತದ ಯುವ ಪಡೆ

12:13 AM Jan 15, 2021 | Team Udayavani |

ಬ್ರಿಸ್ಬೇನ್‌: ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಲು ಅನುಭವಿಗಳ ಪಡೆಯೇ ಬೇಕೆಂದಿಲ್ಲ. ಇದಕ್ಕೆ ಪ್ರಬಲ ಇಚ್ಛಾಶಕ್ತಿ ಹೊಂದಿದ ಯುವ ಅಥವಾ ಅನನುಭವಿ ಆಟಗಾರರ ತಂಡವೊಂದಿದ್ದರೆ ಸಾಕು. ಈಗ ಇದೇ ಸ್ಥಿತಿಯಲ್ಲಿರುವ ಟೀಮ್‌ ಇಂಡಿಯಾ ಶುಕ್ರವಾರದಿಂದ ಆರಂಭವಾಗಲಿರುವ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಇತಿಹಾಸ ನಿರ್ಮಿಸಲು ಕಾತರದಿಂದಿದೆ.

Advertisement

ಸರಣಿ 1-1 ಸಮಬಲ ಸ್ಥಿತಿಯಲ್ಲಿದ್ದು, ಭಾರತ ಈ 4ನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡರೂ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಆದರೆ ಈ ಟ್ರೋಫಿ ಆಸ್ಟ್ರೇಲಿಯಕ್ಕೆ ಸಿಗಬೇಕಾದರೆ ಅದು ಗೆಲ್ಲುವುದು ಅನಿವಾರ್ಯ.

ಸಿಡ್ನಿಯಲ್ಲಿ ಆಸೀಸ್‌ ಪಡೆಗೆ ಗೆಲ್ಲುವ ಉತ್ತಮ ಅವಕಾಶ ವೊಂದಿತ್ತು. ಇದಕ್ಕೆ ಅವರ ಸೊಕ್ಕಿನ ವರ್ತನೆ ಅಡ್ಡಿಯಾಯಿತು. ಭಾರತ ಶಿಸ್ತು ಹಾಗೂ ಕೆಚ್ಚೆದೆಯ ಆಟದ ಮೂಲಕ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಸೀಸ್‌ ತನ್ನ ವರ್ತನೆಯನ್ನು ಬದಲಿಸಿಕೊಳ್ಳದೇ ಹೋದರೆ, ಪಾಠ ಕಲಿಯದಿದ್ದರೆ ಬ್ರಿಸ್ಬೇನ್‌ ಫಲಿತಾಂಶ ಕೂಡ ಭಿನ್ನವಾಗಿರದು ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

ಈ ಅಂಗಳದಲ್ಲಿ ಆಸೀಸ್‌ ಎಷ್ಟೇ ಉತ್ತಮ ಹಾಗೂ ಅಮೋಘ ದಾಖಲೆಯನ್ನು  ಹೊಂದಿರಲಿ, ಇದನ್ನು ಅಳಿಸಿಹಾಕಲು ಎದುರಾಳಿಯ ಒಂದು ದಿಟ್ಟ ಪ್ರದರ್ಶನ ಸಾಕು. ಕ್ರಿಕೆಟ್‌ನಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕೆ!

ರಹಾನೆಗೆ ಅಪರೂಪದ ಲಕ್‌ :

Advertisement

ಇಂಥ ಕಠಿನ ಸನ್ನಿವೇಶದಲ್ಲಿ  ನಾಯಕನ ಅದೃಷ್ಟವೂ  ಇಲ್ಲಿ  ಬಹು ಮುಖ್ಯ ಪಾತ್ರ ವಹಿಸುತ್ತದೆ. ಅದು ತಂಡದ ಕೈ ಹಿಡಿ ಯುತ್ತದೆ.  ಹಿಂದೆ ಇಂಗ್ಲೆಂಡಿನ ಮೈಕಲ್‌ ಬ್ರೇಯರ್ಲಿ ಅವರಲ್ಲಿ ಇದ್ದಂಥ ಅಪರೂಪದ ಲಕ್‌ ರಹಾನೆಗೆ ಇದೆ. ಈವರೆಗೆ ರಹಾನೆ ನಾಯಕತ್ವದ 4 ಟೆಸ್ಟ್‌ಗಳಲ್ಲಿ ಭಾರತ ಅಜೇಯ ಸಾಧನೆಗೈದಿದೆ. ಮೊದಲ 3 ಟೆಸ್ಟ್‌ಗಳಲ್ಲಿ ಗೆಲುವು ಒಲಿದರೆ, ನಾಲ್ಕನೆಯದರಲ್ಲಿ ಸೋಲು ಓಡಿ ಹೋಗಿತ್ತು!

ಇದು “ಭಾರತ ತಂಡ’! :

ಬಲಿಷ್ಠ ತಂಡವೊಂದನ್ನು ಮಣಿಸಲು ಅಷ್ಟೇ ಸಮರ್ಥ ಎದುರಾಳಿ ಬೇಕು ಎಂಬುದು ಲೋಕರೂಢಿ. ಆದರೆ ಗಾಯಾಳು ಭಾರತ ತಂಡ ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ಈ ಮಾತನ್ನು ಸುಳ್ಳು ಮಾಡಿದೆ. ಕೊಹ್ಲಿ, ಉಮೇಶ್‌ ಯಾದವ್‌, ಶಮಿ ಮೊದಲಾದವರ ಗೈರಲ್ಲೂ ಪ್ರಚಂಡ ಪ್ರದರ್ಶನ ನೀಡಿದೆ. ಬ್ರಿಸ್ಬೇನ್‌ನಲ್ಲಿ ಅಶ್ವಿ‌ನ್‌, ಬುಮ್ರಾ, ಜಡೇಜ, ವಿಹಾರಿ ಆಡದೇ ಹೋದರೂ ವಿಪರೀತ ಚಿಂತಿಸಬೇಕಾದ ಆಗತ್ಯವಿಲ್ಲ. ಕೆಲವೊಮ್ಮೆ “ಎ’ ತಂಡದಿಂದಲೂ ಅಮೋಘ ಪ್ರದರ್ಶನ ಹೊರಹೊಮ್ಮುತ್ತದೆ. ಸದ್ಯಕ್ಕೆ ಅಜಿಂಕ್ಯ ರಹಾನೆ ಪಡೆ “ಭಾರತದ ಎ ತಂಡ’ ಎನಿಸಿಕೊಂಡಿದೆ. ಸರಣಿಯ ಕ್ಲೈಮ್ಯಾಕ್ಸ್‌ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಅಗರ್ವಾಲ್‌ ಆಡುವರೇ? :

ಭಾರತದ ಆಡುವ ಬಳಗ ಇನ್ನೂ ಅಂತಿಮಗೊಂಡಿಲ್ಲ. ಅಗರ್ವಾಲ್‌, ಅಶ್ವಿ‌ನ್‌, ಬುಮ್ರಾ ಅವರ ಫಿಟ್‌ನೆಸ್‌ ಬಗ್ಗೆ ಟಾಸ್‌ ತನಕ ಕಾದು ನೋಡಲಾಗುವುದು. ಅಕಸ್ಮಾತ್‌ ಅಗರ್ವಾಲ್‌ ಫಿಟ್‌ ಎನಿಸಿದರೆ ಅವರನ್ನು ಒನ್‌ಡೌನ್‌ನಲ್ಲಿ ಆಡಿಸುವ ಯೋಜನೆ ಇದೆ.  ಆಗ ಪೂಜಾರ, ರಹಾನೆ ಒಂದೊಂದು ಸ್ಥಾನ ಕೆಳಗಿಳಿಯಲಿದ್ದಾರೆ. ವಿಹಾರಿ ಸ್ಥಾನ ಈ ರೀತಿ ಭರ್ತಿ ಆಗಲಿದೆ. ಓಪನಿಂಗ್‌ನಲ್ಲಿ ರೋಹಿತ್‌-ಗಿಲ್‌ ಅವರೇ ಮುಂದಿವರಿಯಲಿದ್ದಾರೆ. ಅಲ್ಲಿಗೆ ಒಂದು ಸಮಸ್ಯೆ ಬಗೆಹರಿಯಲಿದೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಸ್ಥಾನಕ್ಕೆ ಯಾರು ಎಂಬುದು ಮುಂದಿನ ಪ್ರಶ್ನೆ. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಬೇಕಿದ್ದರೆ ವಾಷಿಂಗ್ಟನ್‌ ಸುಂದರ್‌ ಅವರನ್ನು ಟೆಸ್ಟ್‌ ತಂಡಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಅಕಸ್ಮಾತ್‌ ಅಶ್ವಿ‌ನ್‌ ಲಭ್ಯರಾಗದೇ ಹೋದರೆ ಕುಲದೀಪ್‌ ಯಾದವ್‌ಗೆ ಅವಕಾಶ ಕೊಡುವುದು ಜಾಣ ನಡೆಯಾದೀತು. ಇವರ ಚೈನಾಮನ್‌ ಎಸೆತಗಳು ಕಾಂಗರೂಗಳಿಗೆ ಕಂಟಕವಾಗಬಹುದು. ವೇಗದ ಬೌಲಿಂಗ್‌ ವಿಭಾಗ ಅನನುಭ ವಿಗಳಿಂದ ಕೂಡಿದ್ದರೂ ಇಲ್ಲಿ ಆಯ್ಕೆಗೆ ಅವಕಾಶವಿದೆ. ಎಷ್ಟು ಮಂದಿ ಸ್ಪೆಷಲಿಸ್ಟ್‌ ವೇಗಿಗಳ ಅಗತ್ಯವಿದೆ ಎಂಬುದನ್ನು ಮೊದಲು ನಿರ್ಧರಿಸಬೇಕಿದೆ ಅಷ್ಟೇ.

ಆಡುವ ಬಳಗದಲ್ಲಿ ಬುಮ್ರಾ? :

ಮಂಗಳವಾರವಷ್ಟೇ ಕಿಬ್ಬೊಟ್ಟೆ ಸ್ನಾಯು ಸೆಳೆತಕ್ಕೆ ಸಿಲುಕಿ ಅಂತಿಮ ಟೆಸ್ಟ್‌ನಿಂದ ಹೊರಬಿದ್ದ ಬುಮ್ರಾ ಇದೀಗ ಮತ್ತೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವರೇ? ಈ ಕುರಿತು ಭಾರತ ತಂಡದ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಠೊಡ್‌ ನೀಡಿದ ಹೇಳಿಕೆಯೊಂದು ಅಚ್ಚರಿಗೆ ಕಾರಣವಾಗಿದೆ.

ಬುಮ್ರಾ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡುವ ಹಿನ್ನೆಲೆಯಲ್ಲಿ ತೀವ್ರ ವೈದ್ಯಕೀಯ ತಪಾಸಣೆಯಲ್ಲಿದ್ದಾರೆ. ಶುಕ್ರವಾರ ಮುಂಜಾನೆ ಅವರ ಲಭ್ಯತೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿಕ್ರಮ್‌ ರಾಠೊಡ್‌ ಹೇಳಿದ್ದಾರೆ.

“ಬುಮ್ರಾವಿಚಾರದಲ್ಲಿ ಶುಕ್ರವಾರ ಮುಂಜಾನೆಯ ವರೆಗೆ ಕಾದು ಬಳಿಕ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಆಡಲು ಸಾಧ್ಯವಾದರೆ ಅವರು ಕಣಕ್ಕಿಳಿಯಲಿದ್ದಾರೆ. ಗಾಯದ ಬಗ್ಗೆ ವೈದ್ಯಕೀಯ ಸಿಬಂದಿ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಆದರೆ ನಾವು ಅವರಿಗೆ ಸಾಧ್ಯವಾಗುವಷ್ಟು ಸಮಯಾವಕಾಶ ನೀಡಲು ಬಯಸುತ್ತೇವೆ’ ಎಂದು ರಾಠೊಡ್‌ ಹೇಳಿದರು.

ಆಸೀಸ್‌ ಬಂಡವಾಳ ಬಯಲಾಗಿದೆ! :

ಆಸ್ಟ್ರೇಲಿಯದ ಸಾಮರ್ಥ್ಯ ಏನು, ಅವರ ತ್ರಿವಳಿ ವೇಗಿಗಳ ಬಂಡವಾಳ ಏನು ಎಂಬುದು ಕಳೆದೆರಡು ಟೆಸ್ಟ್‌ ಗಳಲ್ಲಿ ಭಾರತಕ್ಕೆ ಚೆನ್ನಾಗಿಯೇ ಅರಿವಾಗಿದೆ. ಮತ್ತೆ ಫಾರ್ಮ್ಗೆ

ಮರಳಿರುವ ಸ್ಮಿತ್‌ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗೆಯೇ ಲಬುಶೇನ್‌ ಕೂಡ. ವಾರ್ನರ್‌ ಸಿಡ್ನಿಯಲ್ಲಿ ಕೈ ಕೊಟ್ಟಿದ್ದಾರೆ. ಆದರೆ ಅವರು ಯಾವುದೇ ಹೊತ್ತಿನಲ್ಲಿ ಬ್ಯಾಟಿಂಗ್‌ ಅಬ್ಬರ ತೋರಬಹುದು. ಅವರ ಜತೆಗಾರನಾಗಿ ಪುಕೋವ್‌ಸ್ಕಿ

ಇರುವುದಿಲ್ಲ. ಈ ಜಾಗಕ್ಕೆ ಮಾರ್ಕಸ್‌ ಹ್ಯಾರಿಸ್‌ ಬಂದಿದ್ದಾರೆ. ಆಸೀಸ್‌ ತಂಡದ ಪ್ರಧಾನ ಸ್ಪಿನ್ನರ್‌ ನಥನ್‌ ಲಿಯಾನ್‌ ಪಾಲಿಗೆ ಇದು 100ನೇ ಟೆಸ್ಟ್‌. ಅವರ 400 ವಿಕೆಟ್‌ ಬೇಟೆಗೆ 4 ವಿಕೆಟ್‌ ಬೇಕಿದೆ.

ತಂಡಗಳು :

ಭಾರತ (ಸಂಭಾವ್ಯ ತಂಡ) :

ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ರಿಷಭ್‌ ಪಂತ್‌, ಮಾಯಾಂಕ್‌ ಅಗರ್ವಾಲ್‌/ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ/ಶಾದೂìಲ್‌ ಠಾಕೂರ್‌/ಟಿ. ನಟರಾಜನ್‌, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌.

ಆಸ್ಟ್ರೇಲಿಯ (ಆಡುವ ಬಳಗ) :

ಡೇವಿಡ್‌ ವಾರ್ನರ್‌, ಮಾರ್ಕಸ್‌ ಹ್ಯಾರಿಸ್‌, ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಮ್ಯಾಥ್ಯೂ ವೇಡ್‌, ಕ್ಯಾಮರಾನ್‌ ಗ್ರೀನ್‌, ಟಿಮ್‌ ಪೇನ್‌ (ನಾಯಕ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯಾನ್‌, ಜೋಶ್‌ ಹ್ಯಾಝಲ್‌ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next