Advertisement

T20; ಶಿವಂ ದುಬೆ ಅಮೋಘ ಬ್ಯಾಟಿಂಗ್: ಅಫ್ಘಾನ್ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

11:42 PM Jan 11, 2024 | Team Udayavani |

ಮೊಹಾಲಿ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಗುರುವಾರ ನಡೆದ ಅಫ್ಘಾನಿಸ್ಥಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.

Advertisement

ನಿಖರ ದಾಳಿಯ ನೆರವಿನಿಂದ ಅಫ್ಘಾನಿಸ್ಥಾನ ಮೊತ್ತವನ್ನು 158 ರನ್ನಿಗೆ ನಿಯಂತ್ರಿಸಿದ ಭಾರತ ತಂಡವು ಆಬಳಿಕ ರೋಹಿತ್‌ ಶರ್ಮ ಅವರನ್ನು ಬೇಗನೇ ಕಳೆದುಕೊಂಡರೂ ಶಿವಂ ದುಬೆ ಅವರ ಅರ್ಧಶತಕದಿಂದಾಗಿ 17.3 ಓವರ್‌ಗಳಲ್ಲಿ 4 ವಿಕೆಟಿಗೆ 159 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಜ. 14ರಂದು ಇಂದೋರ್‌ನಲ್ಲಿ ನಡೆಯಲಿದೆ.

ಗೆಲ್ಲಲು 159 ರನ್‌ ಗಳಿಸುವ ಸವಾಲು ಪಡೆದ ಭಾರತ ತಂಡವು ನಾಯಕ ರೋಹಿತ್‌ ಅವರನ್ನು ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಕಳೆದುಕೊಂಡಿತು. ಆದರೆ ಇತರ ಆಟಗಾರರ ಸಮಯೋಚಿತ ಆಟ ದಿಂದಾಗಿ ಭಾರತ ಸುಲಭವಾಗಿ ಗೆಲುವು ಸಾಧಿಸುವಂತಾಯಿತು. ಶಿವಂ ದುಬೆ ಮತ್ತು ಜಿತೇಶ್‌ ಶರ್ಮ ನಾಲ್ಕನೇ ವಿಕೆಟಿಗೆ 45 ರನ್‌ ಪೇರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಜಿತೇಶ್‌ 20 ಎಸೆತಗಳಿಂದ 31 ರನ್‌ ಹೊಡೆದರೆ ಶಿವಂ ದುಬೆ 60 ರನ್‌ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.

ಮೊಹಮ್ಮದ್‌ ನಬಿ ಆಸರೆ
ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಅಫ್ಘಾನಿಸ್ಥಾನ ತಂಡವು ಅಗ್ರ ಕ್ರಮಾಂಕದ ಆಟಗಾರರ ಮತ್ತು ಅನುಭವಿ ಮೊಹಮ್ಮದ್‌ ನಬಿ ಅವರ ಉಪಯುಕ್ತ ಆಟದಿಂದಾಗಿ ಸಾಧಾರಣ ಮೊತ್ತ ತಲುಪಲು ಸಾಧ್ಯವಾಯಿತು.
ಆರಂಭಿಕರಾದ ರಹಮಾನುಲ್ಲ ಗುರ್ಬಜ್‌ ಮತ್ತು ಇಬ್ರಾಹಿಂ ಜದ್ರಾನ್‌ ಮೊದಲ ವಿಕೆಟಿಗೆ 50 ರನ್‌ ಪೇರಿಸಿ ತಂಡವನ್ನು ಆಧರಿಸಿದ್ದರು. ಆದರೆ ಅವರಿಬ್ಬರು ಅದೇ ಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡಿದ್ದರಿಂದ ಅಘಾ^ನಿಸ್ಥಾನ ಆಘಾತ ಅನುಭವಿಸು ವಂತಾಯಿತು. ಆಬಳಿಕ ಯುವ ಆಟಗಾರ ಅಜ್ಮತುಲ್ಲ ಒಮರ್‌ಜಾಯ್‌ ಮತ್ತು ಅನುಭವಿ ಮೊಹಮ್ಮದ್‌ ನಬಿ ಅವರ ತಾಳ್ಮೆಯ ಆಟದಿಂದಾಗಿ ತಂಡ ಚೇತರಿಸಿಕೊಂಡಿತು. ಅವರಿಬ್ಬರು ನಾಲ್ಕನೇ ವಿಕೆಟಿಗೆ 68 ರನ್ನುಗಳ ಜತೆಯಾಟ ನಡೆಸಿ ಕುಸಿದ ತಂಡವನ್ನು ಪಾರು ಮಾಡಿದರು.
22 ಎಸೆತಗಳಿಂದ 29 ರನ್‌ ಮಾಡಿದ ಒಮರ್‌ಜಾಯ್‌ ಔಟಾದ ಬಳಿಕ ತಂಡದ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಮತ್ತೆ 5 ರನ್‌ ಸೇರಿಸುವಷ್ಟರಲ್ಲಿ 27 ಎಸೆತಗಳಿಂದ 42 ರನ್‌ ಗಳಿಸಿದ ನಬಿ ಔಟಾದರು. ಅವರು 2 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು.

Advertisement

ಅಫ್ಘಾನಿಸ್ಥಾನ ಪರ 106 ಏಕದಿನ ಪಂದ್ಯಗಳಲ್ಲಿ ಆಡಿದ್ದ ರಹಮತ್‌ ಶಾ ಅವರು ಟಿ20 ಕ್ರಿಕೆಟಿಗೆ ಪದಾರ್ಪಣೆಗೈದರೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಅವರು ಮೂರು ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು.

ಬಿಗು ದಾಳಿ ಸಂಘಟಿಸಿದ ಅಕ್ಷರ್‌ ಪಟೇಲ್‌ ಕೇವಲ 23 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಮುಕೇಶ್‌ ಕುಮಾರ್‌ 33 ರನ್ನಿಗೆ 2 ವಿಕೆಟ್‌ ಕಿತ್ತರೆ ಇನ್ನೊಂದು ವಿಕೆಟನ್ನು ಶಿವಂ ದುಬೆ ಉರುಳಿಸಿದರು.

ಸಂಕ್ಷಿಪ್ತ ಸ್ಕೋರು:
ಅಫ್ಘಾನಿಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿಗೆ 158 (ರಹಮಾನುಲ್ಲ ಗುರ್ಬಜ್‌ 23, ಇಬ್ರಾಹಿಂ ಜದ್ರಾನ್‌ 25, ಅಜ್ಮತುಲ್ಲ ಒಮರ್‌ಜಾಯ್‌ 29, ಮೊಹಮ್ಮದ್‌ ನಬಿ 42, ಅಕ್ಷರ್‌ ಪಟೇಲ್‌ 23ಕ್ಕೆ 2, ಮುಕೇಶ್‌ ಕುಮಾರ್‌ 33ಕ್ಕೆ 3); ಭಾರತ 17.3 ಓವರ್‌ಗಳಲ್ಲಿ 4 ವಿಕೆಟಿಗೆ 159 (ಶುಭ್‌ಮನ್‌ ಗಿಲ್‌ 23, ತಿಲಕ್‌ ವರ್ಮ 26, ಶಿವಂ ದುಬೆ 60 ಔಟಾಗದೆ, ಜಿತೇಶ್‌ ಶರ್ಮ 31, ಮುಜೀಬ್‌ ಉರ್‌ ರೆಹಮಾನ್‌ 21ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next