ಹೊಸದಿಲ್ಲಿ: ಕಳೆದ ಭಾನುವಾರ ಅಹಮದಾಬಾದ್ ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಕೂಟದುದ್ದಕ್ಕೂ ಗೆಲುವು ಸಾಧಿಸಿಕೊಂಡು ಬಂದಿದ್ದ ಭಾರತ ಕೊನೆಯ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿತ್ತು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದಂದು ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಭಾರತ ಸೋತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
“ನಾವು ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದೇವೆ ಮತ್ತು ಫೈನಲ್‌ನಲ್ಲಿ ಸೋತಿದ್ದೇವೆ, ನಾವು ಪಂದ್ಯವನ್ನು ಏಕೆ ಸೋತಿದ್ದೇವೆ ಎಂದು ನಾನು ವಿಚಾರಿಸಿದೆ. ಇಂದಿರಾ ಗಾಂಧಿಯವರ ಜನ್ಮದಿನದಂದು ವಿಶ್ವಕಪ್ ಫೈನಲ್ ಆಡಲಾಗಿದೆ ಎಂದು ನಾನು ಅರಿತುಕೊಂಡೆ. ನಾವು ಇಂದಿರಾ ಗಾಂಧಿಯವರ ಜನ್ಮದಿನದಂದು ನಾವು ವಿಶ್ವಕಪ್ ಫೈನಲ್ ಆಡಿದ್ದೇವೆ. ಆದ್ದರಿಂದ ದೇಶ ಕಪ್ ಗೆಲ್ಲಲು ವಿಫಲವಾಗಿದೆ” ಅವರು ಹೇಳಿದರು.
ಗಾಂಧಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಮುಖ್ಯಮಂತ್ರಿ, “ನನಗೆ ಬಿಸಿಸಿಐನಿಂದ ಮನವಿ ಇದೆ, ದಯವಿಟ್ಟು, ಗಾಂಧಿ ಕುಟುಂಬದ ಸದಸ್ಯರ ಹುಟ್ಟುಹಬ್ಬದ ದಿನದಂದು ಭಾರತ ಆಡಬಾರದು. ನಾನು ಇದನ್ನು ವಿಶ್ವಕಪ್ ಫೈನಲ್‌ನಿಂದ ಕಲಿತಿದ್ದೇನೆ” ಎಂದು ಹೇಳಿದರು.
ನವೆಂಬರ್ 19 ರಂದು ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ಸೋಲು ರಾಜಕೀಯ ತಿರುವು ಪಡೆದುಕೊಂಡಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ‘ಪನೌತಿ’ ಎಂದು ಕರೆದರು. ಮೋದಿ ಅವರ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದರಿಂದ ಪಂದ್ಯವು ಭಾರತವು ಸೋಲಲು ಕಾರಣವಾಯಿತು ಎಂದು ಆರೋಪಿಸಿದ್ದರು.