ನವದೆಹಲಿ: ಭಾರತದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ 19 ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ 3.29 ಲಕ್ಷ ಕೋವಿಡ್ ಸೋಂಕು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಮೇ 11) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಕರ್ಫ್ಯೂ : ರೆಕ್ಕೆಪುಕ್ಕ ಕತ್ತರಿಸಿದ ಹಕ್ಕಿಯನ್ನಾಗಿಸಿ ನಮ್ಮನ್ನು ಹಾರಿಸಿದ್ದೇಕೆ ?
ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 3,29,942 ಹೊಸ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದ್ದು, 3,876 ಸಾವು ಸಂಭವಿಸಿದೆ. ಒಟ್ಟು ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 2.26 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ 1.90 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 2.49ಲಕ್ಷಕ್ಕೆ ಹೆಚ್ಚಳವಾಗಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದು, ಈಗಾಗಲೇ 37,15,221 ಸಕ್ರಿಯ ಕೋವಿಡ್ ಪ್ರಕರಣಗಳಿವೆ. 13 ರಾಜ್ಯಗಳಲ್ಲಿ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ.
2020ರ ಆಗಸ್ಟ್ 7ರಂದು ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ 20 ಲಕ್ಷ ದಾಟಿತ್ತು. ಸೆಪ್ಟೆಂಬರ್ 16ಕ್ಕೆ 50 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಡಿಸೆಂಬರ್ 19ರಂದು ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಕೋಟಿಗೆ ಏರಿಕೆಯಾಗಿತ್ತು.
ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಎರಡನೇ ರೂಪಾಂತರಿ ಅಲೆ ಮೇ 4ರಂದು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 2 ಕೋಟಿಗೆ ಹೆಚ್ಚಳವಾಗಿತ್ತು.