ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯವನ್ನು ತುದಿಗಾಲಲ್ಲಿ ನಿಂತು ಆಸ್ವಾದಿಸುವ ರೀತಿಯಲ್ಲೇ ಇದನ್ನು ವಿರೋಧಿಸುವವರ ಸಂಖ್ಯೆಯೂ ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿರುವುದು ಸುಳ್ಳಲ್ಲ. ಇವರು ದೇಶದ ಗಡಿ ಕಾಯುವ ವೀರ ಯೋಧರನ್ನು ಬೆಂಬಲಿಸುವ ಮಂದಿ. ಈಗ ಈ ಸಾಲಿಗೆ ಮಾಧ್ಯಮವೂ ಸೇರಿಕೊಂಡಿರುವುದೊಂದು ವಿಶೇಷ ಬೆಳವಣಿಗೆ.
ಹೌದು, ಡಾ| ಸುಭಾಶ್ಚಂದ್ರ ಒಡೆತನದ “ಝೀ ಗ್ರೂಪ್’ ಹಾಗೂ ಆಂಗ್ಲ ದೈನಿಕ “ಡಿಎನ್‌ಎ’ ಭಾರತ-ಪಾಕಿಸ್ಥಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವರದಿಯನ್ನೇ ಮಾಡಿಲ್ಲ. ಡಿಎನ್‌ಎ ಜೂ. 5ರ ಪತ್ರಿಕೆಯ ಮುಖಪುಟದಲ್ಲೇ ಈ ಪಂದ್ಯವನ್ನು ವಿರೋಧಿಸಿ ಖಾಲಿ ಜಾಗವನ್ನು ಬಿಟ್ಟಿದೆ. ದೇಶದ ಗಡಿ ಕಾಯುವ, ಪಾಕಿಸ್ಥಾನ ವಿರುದ್ಧ ಸದಾ ಜೀವನ್ಮರಣದ ನಡುವೆ ಹೋರಾಡುವ ದೇಶದ ಸೈನಿಕರನ್ನು ಬೆಂಬಲಿಸಿ ಡಿಎನ್‌ಎ ಇಂಥದೊಂದು ನಿರ್ಧಾರಕ್ಕೆ ಬಂದಿದೆ.
ಪತ್ರಿಕೆಯ ಮುಖಪುಟದ ಬಲ ಮೇಲ್ಭಾಗ ದಲ್ಲಿ ಈ ಪಂದ್ಯದ ವರದಿಗೆಂದು ಕಾದಿರಿಸಿದ ಜಾಗ ಖಾಲಿಯಾಗಿಯೇ ಉಳಿದಿದೆ. ಜತೆಗೆ ಚಿಕ್ಕದೊಂದು ಸ್ಪಷ್ಟನೆಯನ್ನೂ ನೀಡಿದೆ. “ನಮ್ಮ ದೇಶ ಹಾಗೂ ಗಡಿಯನ್ನು ಕಾಯುವ ಯೋಧರಿಗೆ ಈ ಜಾಗವನ್ನು ಅರ್ಪಿಸುತ್ತಿದ್ದೇವೆ. ಡಿಎನ್‌ಎ ಈ ಸೈನಿಕರ ಪರವಾಗಿ ನಿಲ್ಲುತ್ತದೆ. ಕ್ರಿಕೆಟ್ ಹಾಗೂ ಭಯೋತ್ಪಾದನೆ ಜತೆಯಾಗಿ ಹೋಗುವುದು ಅಸಾಧ್ಯ…’ ಎಂದಿದೆ.
ಝೀ ಮೀಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಭಾರತ-ಪಾಕಿಸ್ಥಾನ ಪಂದ್ಯದ ವೇಳಾಪಟ್ಟಿ ಹೊರತುಪಡಿಸಿ ಇದಕ್ಕೆ ಸಂಬಂಧಿಸಿದ ಒಂದು ಸಾಲಿನ ಸುದ್ದಿಯನ್ನೂ ಪ್ರಕಟಿಸಿಲ್ಲ. ಅಂಕ ಪಟ್ಟಿಯಲ್ಲಿ, ಜೂ. 4ರಂದು ಭಾರತ-ಪಾಕಿಸ್ಥಾನ ನಡುವೆ ಕ್ರಿಕೆಟ್ ಪಂದ್ಯ ನಡೆದಿಲ್ಲ ಎಂದು ಪ್ರಕಟಿಸಿದೆ !
“ಭಯೋತ್ಪಾದನೆ ಮತ್ತು ಮಾತುಕತೆಯನ್ನು ಒಟ್ಟಿಗೇ ನಡೆಸಲು ಸಾಧ್ಯವಿಲ್ಲ. ಹೀಗಿರುವಾಗ ಭಯೋತ್ಪಾದನೆ ಮತ್ತು ಕ್ರಿಕೆಟ್ ಹೇಗೆ ಒಟ್ಟೊಟ್ಟಿಗೆ ನಡೆಯುವುದಾದರೂ ಹೇಗೆ?’ ಎಂದು ಎಸ್ಸೆಲ್ ಗ್ರೂಪ್‌ನ ಸಿಎಒ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಚಂದ್ರ ಅವರು ಪ್ರಶ್ನಿಸಿದ್ದಾರೆ.
ಝೀ ಚಾನೆಲ್ಸ್ ಹಾಗೂ ಡಿಎನ್‌ಎ ಪತ್ರಿಕೆ ಗಳಲ್ಲಿ ಭಾರತ-ಪಾಕಿಸ್ಥಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವರದಿ ಪ್ರಕಟಗೊಳ್ಳುವುದಿಲ್ಲ ಎಂದು ಮೊದಲೇ ಸೂಚಿಸಿತ್ತು.