Advertisement

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

11:32 PM Dec 02, 2021 | Team Udayavani |

ಮುಂಬಯಿ: ಕಾನ್ಪುರದ “ಆ್ಯಂಟಿ ಕ್ಲೈಮ್ಯಾಕ್ಸ್‌’ ಬಳಿಕ ಶುಕ್ರ ವಾರದಿಂದ ಆರಂಭವಾಗಲಿರುವ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮುಂಬಯಿ ಟೆಸ್ಟ್‌ ಪಂದ್ಯ ಅನೇಕ ಕಾರಣಗಳಿಂದಾಗಿ ಕುತೂಹಲ ಕೆರಳಿಸಿದೆ. ಇದು ಕೊನೆಯ ಹಾಗೂ ಸರಣಿ ನಿರ್ಣಾಯಕ ಪಂದ್ಯವೂ ಆಗಿರುವುದರಿಂದ ಭಾರತದ ಪರವಾದ ಸ್ಪಷ್ಟ ಫ‌ಲಿತಾಂಶವೊಂದನ್ನು ತಂದೀತೇ ಎಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳದು.

Advertisement

ನಾಯಕ ವಿರಾಟ್‌ ಕೊಹ್ಲಿ ಅವರ ಪುನರಾಗಮನ, ಇವರಿಗಾಗಿ ಸ್ಥಾನ ಬಿಡುವವರು ಯಾರು ಎಂಬ ಯಕ್ಷಪ್ರಶ್ನೆ, ತ್ರಿವಳಿ ವೇಗಿಗಳ ಕಾಂಬಿನೇಶನ್‌, ಜತೆಗೆ ಮಳೆ ಭೀತಿ… ಈ ಎಲ್ಲ ಕಾರಣಗಳಿಂದ ವಾಂಖೇಡೆ ಟೆಸ್ಟ್‌ ಪಂದ್ಯ ಭಾರೀ ಸುದ್ದಿಯಲ್ಲಿದೆ.

ಹಾಗೆ ನೋಡಹೋದರೆ, ಕಾನ್ಪುರ ಟೆಸ್ಟ್‌ ಪಂದ್ಯವನ್ನು ಗೆಲ್ಲುವ ಮೂಲಕ 1-0 ಮುನ್ನಡೆಯೊಂದಿಗೆ ಟೀಮ್‌ ಇಂಡಿಯಾ ಇಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಕೊನೆಯ ವಿಕೆಟನ್ನು ಉರುಳಿಸಲು ವಿಫ‌ಲವಾದ ಭಾರತ ತೀವ್ರ ನಿರಾಸೆ ಅನುಭವಿಸಬೇಕಾಯಿತು. ಇಲ್ಲಿ ನ್ಯೂಜಿಲ್ಯಾಂಡಿನ, ಅದರಲ್ಲೂ ಬಾಲಂಗೋಚಿಗಳಿಬ್ಬರ ಹೋರಾಟವನ್ನು ಪ್ರಶಂಸಿಸಲೇಬೇಕು. ತಾನೇಕೆ ಟೆಸ್ಟ್‌ ಚಾಂಪಿಯನ್‌ ಆದೆ ಎಂಬುದನ್ನು ವಿಲಿಯಮ್ಸನ್‌ ಪಡೆ “ಗ್ರೀನ್‌ ಪಾರ್ಕ್‌’ನಲ್ಲಿ ತೋರಿಸಿಕೊಟ್ಟ ರೀತಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ.

ರಹಾನೆ ಫಾರ್ಮ್ ಮತ್ತು ಸ್ಥಾನ
ಕಾನ್ಪುರದಲ್ಲಿ ಭಾರತ ಜಯಿಸಿದ್ದೇ ಆದಲ್ಲಿ “ಲಕ್ಕಿ ಟೆಸ್ಟ್‌ ಕ್ಯಾಪ್ಟನ್‌’ ಅಜಿಂಕ್ಯ ರಹಾನೆ ಕಿರೀಟಕ್ಕೆ ಇನ್ನೊಂದು ಗರಿ ಮೂಡುತ್ತಿತ್ತು. ಇದರಿಂದ ಕೊಹ್ಲಿಗಾಗಿ ರಹಾನೆ ಅವರನ್ನು ಕೈಬಿಡಲಾಗುವುದೇ ಎಂಬ ಪ್ರಶ್ನೆಗೆ ಆಸ್ಪದವೇ ಇರುತ್ತಿರಲಿಲ್ಲ. ರಚಿನ್‌ ರವೀಂದ್ರ-ಅಜಾಜ್‌ ಪಟೇಲ್‌ ಸ್ಪಿನ್ನರ್‌ಗಳನ್ನು ಲೀಲಾಜಾಲವಾಗಿ ಎದುರಿಸಿ ಆಡುತ್ತಿದ್ದ ಹಂತದಲ್ಲಿ ಹೊಸ ಚೆಂಡನ್ನು ಪಡೆಯದಿದ್ದುದು, ಆಗ ವೇಗಿಗಳಿಗೆ ಒಂದೂ ಓವರ್‌ ನೀಡದಿದ್ದುದನ್ನೆಲ್ಲ ಕಂಡಾಗ ರಹಾನೆ ಎಲ್ಲೋ ಎಡವಿದರೆಂದೇ ಹೇಳಬೇಕಾಗುತ್ತದೆ.

ಇದನ್ನೂ ಓದಿ:ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

Advertisement

2021ರ ಸತತ 12 ಬ್ಯಾಟಿಂಗ್‌ ವೈಫ‌ಲ್ಯ ರಹಾನೆ ಪಾಲಿನ ಮತ್ತೂಂದು ಹಿನ್ನಡೆ. ಇವೆಲ್ಲದರ ಹೊರತಾಗಿಯೂ ಅವರನ್ನು ತವರಿನಂಗಳದ ಟೆಸ್ಟ್‌ ಪಂದ್ಯದಿಂದ ಹೊರಗುಳಿಸುವ ಸಾಧ್ಯತೆ ಕಡಿಮೆ. ಹಾಗೆಯೇ “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಅವರನ್ನೂ. ಭಾರತದ ಮುಂದೆ ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸ ಇರುವುದರಿಂದ ಇವರಿಬ್ಬರ ಅನಿವಾರ್ಯತೆಯೂ ತಂಡಕ್ಕಿದೆ.

ಉಳಿದಿರುವ ಮಾರ್ಗವೆಂದರೆ ಮಾಯಾಂಕ್‌ ಅಗರ್ವಾಲ್‌ ಅವರನ್ನು ಕೈಬಿಟ್ಟು ವಿರಾಟ್‌ ಕೊಹ್ಲಿಗೆ ಜಾಗ ಮಾಡಿಕೊಡುವುದು. ಆಗ ಶುಭಮನ್‌ ಗಿಲ್‌ ಜತೆಗೆ ಪೂಜಾರ ಇನ್ನಿಂಗ್ಸ್‌ ಆರಂಭಿಸಬಹುದು. ರೋಹಿತ್‌ ಶರ್ಮ ಮರಳುವ ತನಕ ಇದೊಂದು ತಾತ್ಕಾಲಿಕ ಓಪನಿಂಗ್‌ ಜೋಡಿ ಎನಿಸಲಿದೆ.

ಕೀಪರ್‌ ಸಾಹಾ ಪೂರ್ತಿ ಫಿಟ್‌
ಕಾನ್ಪುರದಲ್ಲಿ ಭಾರತದ ಬ್ಯಾಟಿಂಗ್‌ ಕುಸಿತಕ್ಕೆ ತಡೆಯೊಡ್ಡಿ ತಂಡವನ್ನು ರಕ್ಷಿಸಿದ ಸಾಹಾ ಪೂರ್ತಿ ಫಿಟ್‌ ಆಗಿದ್ದಾರೆ. ಹೀಗಾಗಿ ಕೆ.ಎಸ್‌. ಭರತ್‌ ಅಧಿಕೃತ ಟೆಸ್ಟ್‌ ಕ್ಯಾಪ್‌ ಧರಿಸಲು ಇನ್ನಷ್ಟು ಕಾಯಬೇಕು.

ಕೊಹ್ಲಿ ಸ್ಥಾನಕ್ಕೆ ಆಯ್ಕೆಯಾದ ಶ್ರೇಯಸ್‌ ಅಯ್ಯರ್‌ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದು, ಟೆಸ್ಟ್‌ ಸ್ಥಾನವೊಂದನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಂದಹಾಗೆ ಅಯ್ಯರ್‌ ಕೂಡ ಮುಂಬಯಿಯವರೇ. ಆದರೂ ಟೆಸ್ಟ್‌ ತ್ರಿಶತಕ ಬಾರಿಸಿದ ಬಳಿಕ ಕರುಣ್‌ ನಾಯರ್‌ ಅವರನ್ನು ಮೂಲೆಗುಂಪು ಮಾಡಿದ ನಿದರ್ಶನ ಇರುವಾಗ ಟೀಮ್‌ ಇಂಡಿಯಾದಲ್ಲಿ ಏನೂ ಸಂಭವಿ ಸಬಹುದು! ವಿರಾಟ್‌ ಕೊಹ್ಲಿಗಾಗಿ ಯಾವುದೇ ಬದಲಾವಣೆ ಮಾಡಿ ಕೊಂಡರೂ ಅವರ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ಆತಂಕ ಇದ್ದೇ ಇದೆ.

ಮುಂಬಯಿಯಲ್ಲಿ ಮಳೆ
ಮುಂಬಯಿಯಲ್ಲಿ ಬುಧವಾರ ಭಾರೀ ಮಳೆಯಾಗಿತ್ತು. ಗುರುವಾರ ಮೋಡ ಕವಿದ ವಾತಾವರಣ ಇತ್ತು. ಇನ್ನೂ 3 ದಿನ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಹೀಗಾಗಿ ಎರಡೂ ತಂಡಗಳು ತ್ರಿವಳಿ ವೇಗಿಗಳ ದಾಳಿಯನ್ನು ನೆಚ್ಚಿಕೊಳ್ಳುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಮೊಹಮ್ಮದ್‌ ಸಿರಾಜ್‌ ಅವರನ್ನು ಆಡಿಸುವ ಬಗ್ಗೆ ಕೊಹ್ಲಿ ಸೂಚನೆ ನೀಡಿದ್ದಾರೆ. ಹೊರಗಿರಿಸುವುದು ಯಾರನ್ನು ಎಂಬುದು ಬೌಲಿಂಗ್‌ ವಿಭಾಗದ ಪ್ರಶ್ನೆ. ಆದರೆ ಭಾರತದ ಸ್ಪಿನ್‌ ವಿಭಾಗವೇ ಹೆಚ್ಚು ಬಲಿಷ್ಠವಾದ್ದರಿಂದ ಇಶಾಂತ್‌ ಶರ್ಮ ಸ್ಥಾನಕ್ಕೆ ಕುತ್ತು ಬರಲೂಬಹುದು.

ನ್ಯೂಜಿಲ್ಯಾಂಡಿಗೆ ಈ ಸಮಸ್ಯೆ ಇಲ್ಲ. ಕಾನ್ಪುರದಲ್ಲಿ ಭಾರತದ ಸ್ಪಿನ್‌ ನಡೆದರೂ ನ್ಯೂಜಿಲ್ಯಾಂಡ್‌ ಮಾತ್ರ ವೇಗಿಗಳ ಮೂಲಕವೇ ವಿಕೆಟ್‌ ಉಡಾಯಿಸಿತ್ತು. ಹೀಗಾಗಿ ವಿಲಿಯಂ ಸೋಮರ್‌ವಿಲ್ಲೆ ಬದಲು ನೀಲ್‌ ವ್ಯಾಗ್ನರ್‌ ಅವರಿಗೆ ಅವಕಾಶ ಸಿಗುವುದು ಖಚಿತ.

ಮುಂಬಯಿ ಪಂದ್ಯಕ್ಕೆ ವನಿತಾ ಸ್ಕೋರರ್
ಮುಂಬಯಿ ಟೆಸ್ಟ್‌ ಪಂದ್ಯದ ವೇಳೆ ಪ್ರಸ್‌ ಬಾಕ್ಸ್‌ನಲ್ಲಿ ಇಬ್ಬರು ವನಿತಾ ಸ್ಕೋರರ್ ಕಾಣಿಸಿಕೊಳ್ಳಲಿದ್ದಾರೆ. ಇವರೆಂದರೆ ಕ್ಷಮಾ ಸಾಣೆ ಮತ್ತು ಸುಷ್ಮಾ ಸಾವಂತ್‌. ಟೆಸ್ಟ್‌ ಪಂದ್ಯವೊಂದರಲ್ಲಿ ಇಬ್ಬರು ಮಹಿಳೆಯರು ಈ ಕರ್ತವ್ಯ ನಿಭಾಯಿಸುವುದು ಇದೇ ಮೊದಲು ಎಂಬುದಾಗಿ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

45 ವರ್ಷದ ಕ್ಷಮಾ 2010ರಲ್ಲಿ ಬಿಸಿಸಿಐ ವನಿತಾ ಸ್ಪೆಷಲ್‌ ಬ್ಯಾಚ್‌ ಸ್ಕೋರಿಂಗ್‌ ಎಕ್ಸಾಮ್‌ನಲ್ಲಿ ತೇರ್ಗಡೆಯಾಗಿದ್ದು, ಐಪಿಎಲ್‌ ಮತ್ತು ರಣಜಿ ಟ್ರೋಫಿ ಪಂದ್ಯಗಳಲ್ಲಿ ಕರ್ತವ್ಯ ನಿಭಾಯಿಸಿದ ಅನುಭವ ಹೊಂದಿದ್ದಾರೆ.

ಮುಂಬಯಿ ಪರ ಅಂಡರ್‌-15 ಮಟ್ಟದ ಕ್ರಿಕೆಟ್‌ನಲ್ಲಿಯೂ ಆಡಿದ್ದಾರೆ. 50 ವರ್ಷದ ಸುಷ್ಮಾ ಚೆಂಬೂರ್‌ ನವರಾಗಿದ್ದು, 2010ರಲ್ಲೇ ಸ್ಕೋರಿಂಗ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 2013ರ ವನಿತಾ ವಿಶ್ವಕಪ್‌, ಐಪಿಎಲ್‌ ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಆರಂಭ: 9.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
ಸ್ಥಳ: ವಾಂಖೇಡೆ

Advertisement

Udayavani is now on Telegram. Click here to join our channel and stay updated with the latest news.

Next