ಬೆಂಗಳೂರು: ಭಾರತ 2030ಕ್ಕೆ ಹೃದ್ರೋಗಿ ಹಾಗೂ ಮಧುಮೇಹಿಗಳ ರಾಜಧಾನಿಯಾಗಿರಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ.ಎನ್. ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಶ್ವಮಾನವ ಸಂಸ್ಥೆ ವತಿಯಿಂದ ಬುಧವಾರ ಪಿಇಎಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ವಿಶ್ವಮಾನವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬೇರೆ ದೇಶಗಳಿಗೆ ಹೋಲಿಸಿದರೆ 2030ರ ವೇಳೆಗೆ ಭಾರತದಲ್ಲಿ ಮಧುಮೇಹ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಹೃದಯ ಸಂಘ ತಿಳಿಸಿದೆ. ಭಾರತ ಹೃದ್ರೋಗಿ ಹಾಗೂ ಮಧುಮೇಹಿಗಳ ರಾಜಧಾನಿಯಾಗಲು ಜೀವನ ಶೈಲಿಯೇ ಕಾರಣವಾಗಿದೆ ಎಂದು ತಿಳಿಸಿದರು.
ದೆಹಲಿ, ವಾರಾಣಾಸಿ, ಕಾನ್ಪುರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನು ಸಂಶೋಧಿಸುವ ಅಗತ್ಯವಿದೆ. ವಾಯು ಮಾಲಿನ್ಯ ಕಡಿಮೆಗೊಳಿಸದಿದ್ದರೆ ಮುಂದಿನ ಪೀಳಿಗೆ ಆಮ್ಲಜನಕಕ್ಕಾಗಿ ಹಣ ವ್ಯಯಿಸುವ ಪರಿಸ್ಥಿತಿ ಉಂಟಾಗುತ್ತದೆ. ಮನುಷ್ಯನಿಗೆ ಒಂದು ದಿನಕ್ಕೆ ಆಮ್ಲಜನಕದ 3 ಸಿಲಿಂಡರ್‌ಗಳ ಅಗತ್ಯವಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಷ ಹಾಕುವ ಮಾನವರು ಬೇಡ: ಶೇ.50ರಷ್ಟು ಭಾರತೀಯರು ಕ್ಯಾನ್ಸರ್, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹಾಗೂ ಪಾರ್ಶ್ವವಾಯು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಹಿತಮಿತ ಆಹಾರ ಸೇವನೆ, ವ್ಯಾಯಾಮ, ವಿಶ್ರಾಂತಿ, ನಗು ಹಾಗೂ ಸಂತೃಪ್ತಿಯ ಬದುಕು ಈ 6 ವೈದ್ಯರನ್ನು ಸರಿಯಾಗಿ ಬಳಸಿಕೊಂಡರೆ ಆರೋಗ್ಯ ವಂತ ಜೀವನ ನಮ್ಮದಾಗಲಿದೆ. ಈ ದೇಶದಲ್ಲಿ ಅನೇಕ ವಿಶ್ವಮಾನವರು ಜೀವಿಸುತ್ತಿದ್ದಾರೆ. ಇವರೊಂದಿಗೆ ವಿಷ ಹಾಕುವ ಮಾನವರು ಇದ್ದಾರೆ. ಭಾರತದಲ್ಲಿ ವಿಶ್ವಮಾನವ ಇರಬೇಕು ಎಂದು ತಿಳಿಸಿದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎಂ.ಆರ್.ದೊರೆಸ್ವಾಮಿ ಮಾತನಾಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿ. ರವೀಂದ್ರ ಠ್ಯಾಗೋರ್, ಶಾಸಕ ರವಿ ಸುಬ್ರಹ್ಮಣ್ಯ ಮತ್ತು ಗಾಯಕಿ ಶಮಿತಾ ಮಲ್ನಾಡ್ ಇತರರಿದ್ದರು.