ಇಂದೋರ್: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯಕ್ಕೆ ಇಂದೋರ್ ಸಜ್ಜಾಗಿದೆ. ಮೊದಲೆರಡು ಟೆಸ್ಟ್ ಸೋತು ಹಿನ್ನಡೆಯಲ್ಲಿರುವ ಆಸೀಸ್ ಗೆ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯತೆಯೂ ಕಾಡುತ್ತಿದೆ. ಕಮಿನ್ಸ್ ಕೌಟುಂಬಿಕ ಕಾರಣದಿಂದ ತವರಿಗೆ ತೆರಳಿದ ಕಾರಣದಿಂದ ಸ್ಟೀವ್ ಸ್ಮಿತ್ ಅವರು ಮೂರನೇ ಪಂದ್ಯದಲ್ಲಿ ಕಾಂಗರೂ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಟೀವ್ ಸ್ಮಿತ್, ” ನಾಯಕತ್ವವು ಸಾಮಾನ್ಯವಾಗಿ ನನ್ನಿಂದ ಉತ್ತಮವಾದದ್ದನ್ನು ಹೊರ ತರುತ್ತದೆ” ಎಂದರು.
“ಪ್ಯಾಟ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ಇಲ್ಲಿನ ಪರಿಸ್ಥಿತಿಗಳು ನನಗೆ ಚೆನ್ನಾಗಿ ತಿಳಿದಿದೆ. ನಾನು ಭಾರತದಲ್ಲಿ ಸಾಕಷ್ಟು ಆಡಿದ್ದೇನೆ. ಇದು ನನ್ನ ಎರಡನೇ ಮನೆಯಂತೆ, ಆಟದ ಜಟಿಲತೆಗಳು ಮತ್ತು ವಿಕೆಟ್‌ಗಳು ಹೇಗೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆಟವನ್ನು ಎದುರು ನೋಡುತ್ತಿದ್ದೇನೆ” ಎಂದು ಸ್ಮಿತ್ ಹೇಳಿದರು.
ಇದನ್ನೂ ಓದಿ:ʼಪುಷ್ಪ-2ʼ ಟೀಸರ್ ಗೆ ಡೇಟ್ ಫಿಕ್ಸ್? : ಅಲ್ಲು ಅಭಿಮಾನಿಗಳಿಗೆ ಡಬಲ್ ಧಮಾಕ
ಇಂದೋರ್ ಟೆಸ್ಟ್ ಗೆ ಆಡುವ ಬಳವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಸ್ಮಿತ್ ಹೇಳಿದ್ದಾರೆ. ಕಮಿನ್ಸ್ ಮತ್ತು ವಾರ್ನರ್ ಬದಲು ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ಗಮನಾರ್ಹ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಈಗಾಗಲೇ ನಾಗ್ಪುರ ಮತ್ತು ದೆಹಲಿಯಲ್ಲಿ ಸತತ ವಿಜಯಗಳೊಂದಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಟೀಂ ಇಂಡಿಯಾ ಉಳಿಸಿಕೊಂಡಿದೆ. ಜೂನ್ ನಲ್ಲಿ ನಡೆಯಲಿರುವ ಈ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇಂದೋರ್ ಗೆಲುವನ್ನು ರೋಹಿತ್ ಪಡೆ ಎದುರು ನೋಡುತ್ತಿದೆ.