ಇಸ್ಮಾಮಾಬಾದ್: ಮುತ್ತಹಿದಾ ಕ್ವಾಮಿ ಚಳುವಳಿ ಪಾಕಿಸ್ತಾನ (ಎಂಕ್ಯೂಎಂ-ಪಿ) ಪಕ್ಷದ ನಾಯಕ ಸೈಯದ್ ಮುಸ್ತಫಾ ಕಮಲ್ ಅವರು ಭಾರತದ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. “ಕರಾಚಿಯು ಇನ್ನೂ ಮಕ್ಕಳು ತೆರೆದ ಗಟಾರಗಳಿಗೆ ಬೀಳುತ್ತಿರುವ ಬಗ್ಗೆ ಸುದ್ದಿಯಾಗುತ್ತಿದೆ. ಮತ್ತೊಂದೆಡೆ ಭಾರತವು ಚಂದ್ರಯಾನದಂತಹ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ” ಎಂದಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬುಧವಾರ ಮಾತನಾಡಿದ ಅವರು, “ಕರಾಚಿಯ ಪರಿಸ್ಥಿತಿ ಹೇಗಿದೆ ಎಂದರೆ ವಿಶ್ವವು ಚಂದ್ರನೆಡೆಗೆ ಹೋಗುತ್ತಿದೆ, ಆದರೆ ಇಲ್ಲಿ ಹಲವು ಮಕ್ಕಳು ತೆರೆದ ಗಟಾರಕ್ಕೆ ಬಿದ್ದು ಸಾಯುತ್ತಿದ್ದಾರೆ. ಅದೇ ಪರದೆಯ ಮೇಲೆ ಭಾರತ ಚಂದ್ರನ ಮೇಲೆ ಕಾಲಿಟ್ಟ ಸುದ್ದಿ, ಸುಮಾರು ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ಮಗುವೊಂದು ತೆರೆದ ಗಟಾರಕ್ಕೆ ಬಿದ್ದು ಸಾವನ್ನಪ್ಪಿದ ಸುದ್ದಿ. ಪ್ರತಿ ಮೂರನೇ ದಿನವೂ ಇದೇ ಸುದ್ದಿ” ಎಂದು ಹೇಳಿದ್ದಾರೆ.
ಕರಾಚಿ ಪಾಕಿಸ್ತಾನದ “ಆದಾಯ ಎಂಜಿನ್” ಎಂದು ಕಮಲ್ ಹೇಳಿದ್ದಾರೆ. “ದೇಶವು ಎರಡು ಬಂದರುಗಳನ್ನು ಹೊಂದಿದೆ, ಅವು ಕರಾಚಿಯಲ್ಲಿವೆ. ನಗರವು ಇಡೀ ಪಾಕಿಸ್ತಾನ, ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಹೆಬ್ಬಾಗಿಲು. ನಾವು ನಗರದಿಂದ ಸುಮಾರು 68 ಪ್ರತಿಶತ ಆದಾಯವನ್ನು ಸಂಗ್ರಹಿಸಿ ಅದನ್ನು ರಾಷ್ಟ್ರಕ್ಕೆ ನೀಡುತ್ತೇವೆ” ಎಂದು ಅವರು ಹೇಳಿದರು.
“ಆದರೆ 15 ವರ್ಷಗಳಿಂದ ಕರಾಚಿಗೆ ಸ್ವಲ್ಪ ಶುದ್ಧ ನೀರು ಸಹ ನೀಡಲಿಲ್ಲ. ಬಂದ ನೀರನ್ನು ನೀರಿನ ಟ್ಯಾಂಕರ್ ಮಾಫಿಯಾ ಕದ್ದು ಕೂಡಿಹಾಕಿ ಕರಾಚಿ ಜನರಿಗೆ ಮಾರಾಟ ಮಾಡಿದ್ದಾರೆ” ಎಂದು ಅವರು ಹೇಳಿದರು.
ಪಾಕಿಸ್ತಾನದಲ್ಲಿ 26.2 ಮಿಲಿಯನ್ ಮಕ್ಕಳು ಶಾಲೆಗೆ ಹೋಗುವುದಿಲ್ಲ ಎಂದು ಅವರು ಹೇಳಿದರು. ಈ ಸಂಖ್ಯೆಯು 70 ದೇಶಗಳ ಜನಸಂಖ್ಯೆಗಿಂತ ಹೆಚ್ಚು. ಇಷ್ಟು ಸಂಖ್ಯೆ ಅವಿದ್ಯಾಂತ ಮಕ್ಕಳು ದೇಶದ ಹಣಕಾಸು ಅಭಿವೃದ್ದಿಯನ್ನು ಹಾಳು ಮಾಡುತ್ತಿದೆ ಎಂದು ಹೇಳಿದರು.