ನವದೆಹಲಿ: ಕೆಲವೊಂದು ವಿರೋಧಗಳನ್ನು ಹೊರತುಪಡಿಸಿ ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಹೆಮ್ಮೆಯ ಸಂಪ್ರದಾಯವನ್ನು ಭಾರತ ಹೊಂದಿದೆ. ಇದರ ಪರಿಣಾಮವಾಗಿಯೇ ನಮ್ಮ ಬಹುತೇಕ ಪ್ರಧಾನಿಗಳು ತುಂಬಾ ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದಾರೆ ಎಂಬುದು ಎಲ್ಲಾ ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ:ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆಯೇ ಇಲ್ಲ: ಎನ್. ರವಿಕುಮಾರ್
ಗುರುವಾರ(ಏ.14) ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ “ಪ್ರಧಾನ್ ಮಂತ್ರಿ ಸಂಗ್ರಹಾಲಯ”ವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನ್ ಮಂತ್ರಿ ಸಂಗ್ರಹಾಲಯದಲ್ಲಿ ದೇಶದ ಈ ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳ ಸ್ಮರಣಾರ್ಥದ ಅಪರೂಪದ ವಸ್ತುಗಳ ಮ್ಯೂಸಿಯಂ ಇದಾಗಿದೆ ಎಂದರು.
75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಸಂಗ್ರಹಾಲಯ ದೊಡ್ಡ ಸ್ಫೂರ್ತಿಯಾಗಿದೆ. ನಾನು ಇಂದು ಮಾಜಿ ಪ್ರಧಾನಮಂತ್ರಿಗಳ ಕುಟುಂಬ ಸದಸ್ಯರನ್ನು ಕಾಣುವಂತಾಯಿತು.ಈ ಸಮಾರಂಭ ಅವರ ಉಪಸ್ಥಿತಿಯಿಂದ ಕಳೆಗಟ್ಟಿರುವುದಾಗಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಸಂಗ್ರಹಾಲಯ ಉದ್ಘಾಟನೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಮ್ಯೂಸಿಯಂ ವೀಕ್ಷಿಸಲು ಮೊದಲ ಟಿಕೆಟ್ ಖರೀದಿಸಿದ್ದರು.
ಟಿಕೆಟ್ ಬೆಲೆ ಎಷ್ಟು?
ಪ್ರಧಾನಮಂತ್ರಿ ಸಂಗ್ರಹಾಲಯ ವೀಕ್ಷಿಸಲು ಟಿಕೆಟ್ ಬೆಲೆ ಆನ್ ಲೈನ್ ಖರೀದಿಸಿದರೆ 100 ರೂಪಾಯಿ, ಆಫ್ ಲೈನ್ ನಲ್ಲಿ (ಭಾರತೀಯರು) ಖರೀದಿಸಿದರೆ 110 ರೂಪಾಯಿ. ವಿದೇಶಿಯರಿಗೆ 750 ರೂಪಾಯಿ. 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಶೇ.50ರಷ್ಟು ಡಿಸ್ಕೌಂಟ್ ಇದೆ ಎಂದು ವರದಿ ತಿಳಿಸಿದೆ.
ಪ್ರಧಾನ್ ಮಂತ್ರಿ ಸಂಗ್ರಹಾಲಯ ಮೆಟ್ರೋ ನಿಲ್ದಾಣ ಸಮೀಪದ ಲೋಕ್ ಕಲ್ಯಾಣ್ ಮಾರ್ಗದ ಹಳದಿ ಲೈನ್ ನಲ್ಲಿದೆ. ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳಿಗೆ ಶೇ.25ರಷ್ಟು ಡಿಸ್ಕೌಂಟ್ ನಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ವರದಿ ಹೇಳಿದೆ.